ಕ್ರೀಡೆ

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಹ್ಯಾಟ್ರಿಕ್ ಜಯ

ದುಬೈ: ಅನುಭವಿ ಬ್ಯಾಟ್ಸ್‌ಮನ್ ಶಿಖರ್ ಧವನ್ (106*ರನ್, 61 ಎಸೆತ, 12 ಬೌಂಡರಿ, 3 ಸಿಕ್ಸರ್) ಶತಕದಾಟದ ನಡುವೆಯೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್-13ರ ತನ್ನ 10ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ 5 ವಿಕೆಟ್‌ಗಳಿಂದ ಶರಣಾಯಿತು. ಮತ್ತೊಂದೆಡೆ, ಹ್ಯಾಟ್ರಿಕ್ ಗೆಲುವು ದಾಖಲಿಸಿದ ಕನ್ನಡಿಗ ಕೆಎಲ್ ರಾಹುಲ್ ಸಾರಥ್ಯದ ಪಂಜಾಬ್ ತಂಡ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರುವ ಮೂಲಕ ಪ್ಲೇ-ಆಫ್ ಹೋರಾಟ ಉಳಿಸಿಕೊಂಡಿತು.

ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಶ್ರೇಯಸ್ ಅಯ್ಯರ್ ಪಡೆ, ಧವನ್ ಏಕಾಂಗಿ ನಿರ್ವಹಣೆ ಫಲವಾಗಿ 5 ವಿಕೆಟ್‌ಗೆ 164 ರನ್ ಕಲೆಹಾಕಿತು. ಪ್ರತಿಯಾಗಿ ನಿಕೋಲಸ್ ಪೂರನ್ (53ರನ್, 28 ಎಸೆತ, 6 ಬೌಂಡರಿ, 3 ಸಿಕ್ಸರ್) ಹಾಗೂ ಕ್ರಿಸ್ ಗೇಲ್ (29ರನ್, 13 ಎಸೆತ, 3 ಬೌಂಡರಿ, 2 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ತಂಡ 19 ಓವರ್‌ಗಳಲ್ಲಿ 5 ವಿಕೆಟ್‌ಗೆ 167 ರನ್‌ಗಳಿಸಿ ಜಯದ ನಗೆ ಬೀರಿತು.