ಕ್ರೀಡೆ

ಇಂದು ಸನ್‌ರೈಸರ್ಸ್‌ ತಂಡಕ್ಕೆ ಪಂಜಾಬ್ ಸವಾಲು

ದುಬೈ: ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐಪಿಎಲ್-13ರ ತನ್ನ 6ನೇ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಅಂಕಪಟ್ಟಿಯಲ್ಲಿ ಮೇಲೇರುವ ತವಕದಲ್ಲಿರುವ ಉಭಯ ತಂಡಗಳ ಪಾಲಿಗೆ ಈ ಪಂದ್ಯ ಮಹತ್ವ ಪಡೆದಿದೆ. ಟೂರ್ನಿಯಲ್ಲಿ ಇದುವರೆಗೂ ಆಡಿರುವ 5 ಪಂದ್ಯಗಳಲ್ಲಿ ಏಕೈಕ ಗೆಲುವು ದಾಖಲಿಸಿ 4 ಸೋಲಿನೊಂದಿಗೆ 2 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಕಡೇ ಸ್ಥಾನದಲ್ಲಿರುವ ಪಂಜಾಬ್ ತಂಡ ಗೆಲುವಿನ ಒತ್ತಡದಲ್ಲಿದೆ. ಮುಂದಿನ ಪಂದ್ಯಗಳಲ್ಲಿ ಒತ್ತಡ ರಹಿತವಾಗಿ ಆಡುವ ದೃಷ್ಟಿಯಿಂದ ರಾಹುಲ್ ಪಡೆಗೆ ಜಯ ಅನಿವಾರ್ಯ. ಮತ್ತೊಂದೆಡೆ, ಸನ್‌ರೈಸರ್ಸ್‌ ತಂಡ ಇದುವರೆಗೂ ಆಡಿರುವ 5 ಪಂದ್ಯಗಳಲ್ಲಿ 2 ಜಯ, 3 ಸೋಲು ಕಂಡು 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.

* ಸನ್‌ರೈಸರ್ಸ್‌ಗೆ ಗೆಲುವಿನ ಹಳಿಗೇರುವ ತವಕ

ಟೂರ್ನಿಯಲ್ಲಿ ಇದುವರೆಗೂ ಗೆಲುವಿಗಿಂತ ಹೆಚ್ಚು ಸೋಲುಗಳನ್ನೇ ಕಂಡಿರುವ ಸನ್‌ರೈಸರ್ಸ್‌ ತಂಡ ಭುವನೇಶ್ವರ್ ಕುಮಾರ್ ಸೇವೆಯನ್ನು ಕಳೆದುಕೊಂಡಿದೆ. ಅಗ್ರಕ್ರಮಾಂಕದಲ್ಲಿ ಜಾನಿ ಬೇರ್‌ಸ್ಟೋ, ಡೇವಿಡ್ ವಾರ್ನರ್, ಮನೀಷ್ ಪಾಂಡೆ, ಬ್ಯಾಟ್ಸ್‌ಮನ್‌ಗಳನ್ನು ಹೊಂದಿದೆ. ದುರ್ಬಲ ಬೌಲಿಂಗ್ ಹೊಂದಿರುವ ಕಿಂಗ್ಸ್ ಇಲೆವೆನ್ ಎದುರು ಸಿಡಿಯಲು ಸಜ್ಜಾಗಿದೆ. ಆದರೆ, ತಂಡಕ್ಕೆ ಮಧ್ಯಮ ಕ್ರಮಾಂಕದ್ದೆ ದೊಡ್ಡ ಚಿಂತೆಯಾಗಿದೆ. ಯುವ ಆಟಗಾರರಾದ ಅಭಿಷೇಕ್ ಶರ್ಮ, ಪ್ರಿಯಂ ಗಾರ್ಗ್, ಅಬ್ದುಲ್ ಸಮದ್ ಮೇಲೆ ವಾರ್ನರ್ ಭರವಸೆ ಹೊಂದಿದ್ದಾರೆ. ಗಾಯದ ಸಮಸ್ಯೆಯಿಂದ ಹೊರಬಿದ್ದಿರುವ ಭುವೇಶ್ವರ್ ಕುಮಾರ್ ಜಾಗವನ್ನು ಟಿ.ನಟರಾಜನ್, ಸಂದೀಪ್ ಶರ್ಮ, ಸಿದ್ದಾರ್ಥ್ ಕೌಲ್ ತುಂಬಬೇಕಿದೆ. ಆದರೆ, ಟಿ.ನಟರಾಜನ್ ಹೊರತುಪಡಿಸಿ ಉಳಿದಿಬ್ಬರು ದುಬಾರಿಯಾಗುತ್ತಿದ್ದಾರೆ. ನಟರಾಜನ್ ಹಾಗೂ ರಶೀದ್ ಖಾನ್ ಜೋಡಿಯೇ ಬೌಲಿಂಗ್‌ನಲ್ಲಿ ತಂಡಕ್ಕೆ ಆಧಾರವಾಗಿದೆ.

* ಒತ್ತಡದಲ್ಲಿ ಕೆಎಲ್ ರಾಹುಲ್ ಬಳಗ

ನಾಯಕತ್ವ ನಿರ್ವಹಣೆ ಜತೆಗೆ ಬ್ಯಾಟಿಂಗ್‌ನಲ್ಲಿ ಸಮರ್ಥವಾಗಿ ಆಡುತ್ತಿದ್ದರೂ ಇತರ ವಿಭಾಗದಿಂದ ರಾಹುಲ್‌ಗೆ ಬೆಂಬಲ ಸಿಗುತ್ತಿಲ್ಲ. ಕರ್ನಾಟಕದ ಮಯಾಂಕ್ ಅಗರ್ವಾಲ್ ಬ್ಯಾಟಿಂಗ್‌ನಲ್ಲಿ ಕೊಂಚ ಪಟ್ಟಿಗೆ ಯಶಕಂಡಿದ್ದರೂ ನಿಕೋಲಸ್ ಪೂರನ್ ದೊಡ್ಡ ಮೊತ್ತ ಪೇರಿಸಲುವ ವಿಲರಾಗುತ್ತಿದ್ದರೆ, ಸ್ಟಾರ್ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಇದುವರೆಗೂ ಸ್ಫೋಟಿಸಿಲ್ಲ. ರಾಹುಲ್-ಮಯಾಂಕ್ ಜೋಡಿಯಿಂದಾಗಿ ಪಂಜಾಬ್ ಬ್ಯಾಟಿಂಗ್ ವಿಭಾಗದಲ್ಲಿ ಕೊಂಚಮಟ್ಟಿಗೆ ಯಶ ಸಾಧಿಸುತ್ತಿದ್ದರೂ ಸ್ಲಾಗ್ ಓವರ್‌ಗಳಲ್ಲಿ ಹೀನಾಯವಾಗಿ ದಂಡನೆಗೆ ಒಳಗಾಗುತ್ತಿರುವ ಪಂಜಾಬ್ ತಂಡಗೆ ಭಾರಿ ಹಿನ್ನಡೆಯಾಗಿದೆ. ಇದಕ್ಕೆ ರಾಜಸ್ಥಾನ ರಾಯಲ್ಸ್ ಎದುರು 223ರನ್ ಸಮರ್ಥಿಸಿಕೊಳ್ಳಲು ವಿಲವಾಗಿದ್ದ ಪಂಜಾಬ್, ಚೆನ್ನೈ ಸೂಪರ್ ಕಿಂಗ್ಸ್ ಎದುರು 10 ವಿಕೆಟ್ ಸೋಲು ಕಂಡಿತ್ತು. ಮೊಹಮದ್ ಶಮಿ ಹೊರತುಪಡಿಸಿ ಉಳಿದ ಬೌಲರ್‌ಗಳು ಇದುವರೆಗೂ ಸಂಪೂರ್ಣ ವೈಫಲ್ಯ ಅನುಭವಿಸಿದ್ದಾರೆ.

ಟೀಮ್ ನ್ಯೂಸ್:

ಸನ್‌ರೈಸರ್ಸ್‌: ಸತತವಾಗಿ ವೈಫಲ್ಯ ಅನುಭವಿಸುತ್ತಿರುವ ಕೇನ್ ವಿಲಿಯಮ್ಸನ್ ಬದಲಿಗೆ ಆಲ್ರೌಂಡರ್ ಮೊಹಮದ್ ನಬಿ ತಂಡಕ್ಕೆ ವಾಪಸಾಗಬಹುದು. ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದ ಸಿದ್ದಾರ್ಥ್ ಕೌಲ್ ಬದಲಿಗೆ ವಿಜಯ್ ಶಂಕರ್ ಕಣಕ್ಕಿಳಿಯಲಿದ್ದಾರೆ.

ಸಂಭಾವ್ಯ ತಂಡ: ಡೇವಿಡ್ ವಾರ್ನರ್ (ನಾಯಕ), ಜಾನಿ ಬೇರ್‌ಸ್ಟೋ (ವಿಕೀ), ಮನೀಷ್ ಪಾಂಡೆ, ಕೇನ್ ವಿಲಿಯಮ್ಸನ್/ಮೊಹಮದ್ ನಬಿ, ಅಬ್ದುಲ್ ಸಮದ್, ಪ್ರಿಯಂ ಗಾರ್ಗ್, ವಿಜಯ್ ಶಂಕರ್/ಸಿದ್ದಾರ್ಥ್ ಕೌಲ್, ರಶೀದ್ ಖಾನ್, ಸಂದೀಪ್ ಶರ್ಮ, ಖಲೀಲ್ ಅಹಮದ್, ಟಿ.ನಟರಾಜನ್.

ಕಳೆದ ಪಂದ್ಯ: ಮುಂಬೈ ಎದುರು 34 ರನ್ ಸೋಲು

ಪಂಜಾಬ್:

ಸತತ ಸೋಲುಗಳಿಂದ ಕಂಗೆಟ್ಟಿರುವ ಪಂಜಾಬ್‌ಗೆ ತಂಡದ ಸಂಯೋಜನೆಯೇ ದೊಡ್ಡ ಚಿಂತೆಯಾಗಿದೆ. ಮ್ಯಾಕ್ಸ್‌ವೆಲ್ ಬದಲಿಗೆ ಸ್ಫೋಟಕ ಬ್ಯಾಟ್ಸ್‌ಮನ್ ಕಣಕ್ಕಿಳಿಯುವ ಸಾಧ್ಯತೆಗಳಿವೆ. ವೇಗಿ ಕ್ರಿಸ್ ಜೋರ್ಡಾನ್ ಬದಲಿಗೆ ಮುಜೀಬ್ ಉರ್ ರೆಹಮಾನ್ ಅವರನ್ನು ಪರಿಗಣಿಸಬಹುದು. ಕನಿಷ್ಠ 2 ಬದಲಾವಣೆಗಳೊಂದಿಗೆ ಪಂಜಾಬ್ ಕಣಕ್ಕಿಳಿಯಲಿದೆ.

ಸಂಭಾವ್ಯ ತಂಡ: ಮಯಾಂಕ್ ಅಗರ್ವಾಲ್, ಕೆಎಲ್ ರಾಹುಲ್ (ನಾಯಕ, ವಿಕೀ), ನಿಕೋಲಸ್ ಪೂರನ್, ಗ್ಲೆನ್ ಮ್ಯಾಕ್ಸ್‌ವೆಲ್/ಕ್ರಿಸ್ ಗೇಲ್, ಮಂದೀಪ್ ಸಿಂಗ್, ರ್ಸ್ರಾಜ್ ಖಾನ್, ಎಂ.ಅಶ್ವಿನ್, ಮೊಹಮದ್ ಶಮಿ, ಶೆಲ್ಡನ್ ಕಾಟ್ರೆಲ್, ಮುಜೀಬ್ ಉರ್ ರೆಹಮಾನ್/ಕ್ರಿಸ್ ಜೋರ್ಡಾನ್, ರವಿ ಬಿಷ್ಣೋಯಿ.

ಕಳೆದ ಪಂದ್ಯ: ಸಿಎಸ್‌ಕೆ ಎದುರು 10 ವಿಕೆಟ್ ಸೋಲು

ಪಂದ್ಯ ಆರಂಭ : ರಾತ್ರಿ: 7.30ಕ್ಕೆ

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ಮುಖಾಮುಖಿ: 14, ಸನ್‌ರೈಸರ್ಸ್‌: 10, ಕಿಂಗ್ಸ್ ಇಲೆವೆನ್ ಪಂಜಾಬ್: 4.