ದುಬೈ: ರನ್ ಮಷಿನ್, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (100*ರನ್, 111 ಎಸೆತ, 7 ಬೌಂಡರಿ) ಏಕದಿನ ಕ್ರಿಕೆಟ್‌ನಲ್ಲಿ ಸಿಡಿಸಿದ 51ನೇ ಶತಕ ಹಾಗೂ ಬೌಲರ್‌ಗಳ ಸಂಘಟಿತ ನಿರ್ವಹಣೆಯ ಬಲದಿಂದ ಭಾರತ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಹಾಗೂ ಆತಿಥೇಯ ಪಾಕಿಸ್ತಾನ ಎದುರು 6 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ರೋಹಿತ್ ಶರ್ಮ ಪಡೆ ಟೂರ್ನಿಯಲ್ಲಿ ಸೆಮಿೈನಲ್ ಸ್ಥಾನ ಬಹುತೇಕ ಖಾತ್ರಿಪಡಿಸಿಕೊಂಡಿದೆ. 29 ವರ್ಷಗಳ ಬಳಿಕ ಐಸಿಸಿ ಟೂರ್ನಿ ಆತಿಥ್ಯ ಹಕ್ಕು ಪಡೆದುಕೊಂಡಿರುವ ಹಾಲಿ ಚಾಂಪಿಯನ್ ಪಾಕಿಸ್ತಾನ ಉಪಾಂತ್ಯದ ಆಸೆಯನ್ನು ಬಹುತೇಕ ಕೈಚೆಲ್ಲಿದೆ.
ದುಬೈ ಕ್ರೀಡಾಂಗಣದಲ್ಲಿ ನಡೆದ ಸೂಪರ್ ಸಂಡೇ ಕಾದಾಟದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್‌ಗೆ ಇಳಿಯಿತು. ಎಡಗೈ ಬ್ಯಾಟರ್ ಸೌದ್ ಶಕೀಲ್ (62 ರನ್, 76 ಎಸೆತ, 5 ಬೌಂಡರಿ) ಹಾಗೂ ನಾಯಕ ಮೊಹಮದ್ ರಿಜ್ವಾನ್ (46) ಜತೆಯಾಟದ ನೆರವಿನಿಂದ 2 ವಿಕೆಟ್‌ಗೆ 151 ರನ್‌ಗಳಿಸಿ ಸುಸ್ಥಿಯಲ್ಲಿತ್ತು. ನಂತರ ಕುಲದೀಪ್ ಯಾದವ್ (40ಕ್ಕೆ 3) ಸಹಿತ ಇತರ ಭಾರತೀಯ ಬೌಲರ್‌ಗಳ ದಾಳಿಗೆ ನಲುಗಿ 49.4 ಓವರ್‌ಗಳಲ್ಲಿ 241 ರನ್‌ಗಳಿಗೆ ಪಾಕ್ ಆಲೌಟ್ ಆಯಿತು.
ಪ್ರತಿಯಾಗಿ ಚೇಸಿಂಗ್‌ನಲ್ಲಿ ಉತ್ತಮ ಲಯದಲ್ಲಿದ್ದ ರೋಹಿತ್ ಶರ್ಮ (20) ಬೇಗನೆ ಔಟಾದರು. ಆಗ ಉಪನಾಯಕ ಶುಭಮಾನ್ ಗಿಲ್ (46 ರನ್, 52 ಎಸೆತ, 7 ಬೌಂಡರಿ) ಹಾಗೂ ವಿರಾಟ್ ಕೊಹ್ಲಿ ಚೇಸಿಂಗ್‌ಗೆ ಬಲ ತುಂಬಿದರು. ನಂತರ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ (56 ರನ್, 67 ಎಸೆತ, 5 ಬೌಂಡರಿ,1 ಸಿಕ್ಸರ್) ಮೂರನೇ ವಿಕೆಟ್‌ಗೆ ನಡೆಸಿದ ಜತೆಯಾಟದ ನೆರವಿನಿಂದ ಭಾರತ 42.3 ಓವರ್‌ಗಳಲ್ಲಿ 4 ವಿಕೆಟ್‌ಗೆ 244 ರನ್‌ಗಳಿಸಿ ಗೆಲುವಿನ ಕೇಕೆ ಹಾಕಿತು. ಜತೆಗೆ 2017ರ ಚಾಂಪಿಯನ್ಸ್ ಟ್ರೋಫಿ ೈನಲ್ ಸೋಲಿಗೆ ಮುಯ್ಯಿ ತೀರಿಸಿಕೊಂಡಿದೆ. ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು ನ್ಯೂಜಿಲೆಂಡ್ ಗೆಲುವು ದಾಖಲಿಸಿದರೆ, ಭಾರತ ಹಾಗೂ ಕಿವೀಸ್ ತಂಡಗಳು ಎ ಗುಂಪಿನಿಂದ ಸೆಮೀಸ್ ಸ್ಥಾನ ಅಧಿಕೃತ ಪಡಿಸಿಕೊಳ್ಳಲಿವೆ.