ಅನಯಾ ಬಂಗಾರ್​  
ಕ್ರೀಡೆ

ಶ್ರೇಯಸ್ ಅಯ್ಯರ್​ ಕೊಲ್ತೀನಿ, ಅಭಿಷೇಕ್​ರನ್ನು ಮದ್ವೆಯಾಗ್ತಿನಿ, ಡೇಟಿಂಗ್​ ಮಾತ್ರ ಇವರ ಜತೆ... ಅನಯಾ ಬಂಗಾರ್​ ಉತ್ತರ ವೈರಲ್​! Anaya Bangar

ಅಂದಹಾಗೆ, ಅನಯಾ ಬಂಗಾರ್​ ಅವರು ಈ ಮೊದಲು ಗಂಡಾಗಿದ್ದರು. ಆರ್ಯನ್ ಬಂಗಾರ್ ಆಗಿದ್ದ ಅವರು ಆಪರೇಷನ್​ ಮಾಡಿಸಿಕೊಳ್ಳುವ ಮೂಲಕ ಇದೀಗ ಹೆಣ್ಣಾಗಿ ಬದಲಾಗಿದ್ದಾರೆ.

ನವದೆಹಲಿ: ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಅವರ ಪುತ್ರಿ ಅನಯಾ ಬಂಗಾರ್ ( Anaya Bangar ) ಅವರು ಇತ್ತೀಚಿಗೆ ಭಾಗವಗವಹಿಸಿದ್ದ ಸಂದರ್ಶನವೊಂದರ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಅನಯಾ ಹೇಳಿರುವುದಾದರೂ ಏನು? ಟೀಮ್​ ಇಂಡಿಯಾ ಕ್ರಿಕೆಟಿಗರ ಬಗ್ಗೆ ಅವರ ಅಭಿಪ್ರಾಯ ಏನು? ಮಹಿಳಾ ಕ್ರಿಕೆಟ್​ನಲ್ಲಿ ಆಗಬೇಕಾದ ಬದಲಾವಣೆಗಳ ಬಗ್ಗೆ ಅನಯಾ ಏನು ಹೇಳಿದ್ದಾರೆ ಅನ್ನೋದನ್ನು ನಾವೀಗ ತಿಳಿದುಕೊಳ್ಳೋಣ.

ಅಂದಹಾಗೆ, ಅನಯಾ ಬಂಗಾರ್​ ಅವರು ಈ ಮೊದಲು ಗಂಡಾಗಿದ್ದರು. ಆರ್ಯನ್ ಬಂಗಾರ್ ಆಗಿದ್ದ ಅವರು ಆಪರೇಷನ್​ ಮಾಡಿಸಿಕೊಳ್ಳುವ ಮೂಲಕ ಇದೀಗ ಹೆಣ್ಣಾಗಿ ಬದಲಾಗಿದ್ದಾರೆ.

ಇತ್ತೀಚೆಗೆ ಕೃಷ್ಣಾಂಕ್ ಅತ್ರೆಯ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾದ ಸಂದರ್ಶನದಲ್ಲಿ ಅನಯಾ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ವೇಳೆ ಅನಯಾ ಅವರಿಗೆ 'ಕಿಲ್, ಮ್ಯಾರಿ, ಹೂಕ್ ಅಪ್' (Kill, Marry, Hook Up) ಆಟದ ನಿಯಮದಡಿ ಮೂವರು ಸ್ಟಾರ್ ಕ್ರಿಕೆಟಿಗರಾದ ಶುಭಮನ್ ಗಿಲ್, ಅಭಿಷೇಕ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ಅವರ ಆಯ್ಕೆಗಳನ್ನು ನೀಡಲಾಗಿತ್ತು. ಇದಕ್ಕೆ ಉತ್ತರಿಸಿದ ಅನಯಾ, "ಶ್ರೇಯಸ್ ಅಯ್ಯರ್ ಅವರನ್ನು ಕೊಲ್ಲುತ್ತೇನೆ (Kill), ಅಭಿಷೇಕ್ ಶರ್ಮಾ ಅವರನ್ನು ಮದುವೆಯಾಗುತ್ತೇನೆ (Marry) ಹಾಗೂ ಶುಭಮಾನ್ ಗಿಲ್ ಜತೆ ಡೇಟಿಂಗ್ ಅಥವಾ ಹೂಕ್ ಅಪ್ ಮಾಡುತ್ತೇನೆ ಎಂದು ಉತ್ತರಿಸಿದ್ದಾರೆ. ಸದ್ಯ ಈ ವಿಡಿಯೋ ತುಣುಕು ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

ಇನ್ನೂ ಈ ವರ್ಷದ ಮಾರ್ಚ್ ತಿಂಗಳಲ್ಲಿ ಲಿಂಗತ್ವ ದೃಢೀಕರಣ ಶಸ್ತ್ರಚಿಕಿತ್ಸೆಗೆ (Gender-affirming surgery) ಒಳಗಾಗುವ ಮುನ್ನ ಅನಯಾ ಬಂಗಾರ್ ಅವರು ಮುಂಬೈ ಪರ ವಯೋಮಿತಿ ಪುರುಷರ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದರು. 2022ರಲ್ಲಿ ಪ್ರಾರಂಭವಾದ ತಮ್ಮ ಪರಿವರ್ತನಾ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಅವರು, ಶಸ್ತ್ರಚಿಕಿತ್ಸೆಯ ನಂತರ ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಪುನರಾರಂಭಿಸಲು ಆಸ್ಟ್ರೇಲಿಯಾಕ್ಕೆ ಸ್ಥಳಾಂತರಗೊಳ್ಳಲು ಯೋಜನೆ ರೂಪಿಸುತ್ತಿದ್ದಾರೆ.

ಇದರೊಂದಿಗೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (BCCI) ಮಹಿಳಾ ಕ್ರಿಕೆಟ್‌ನಲ್ಲಿ ಲಿಂಗಪರಿವರ್ತಿತ (Transgender) ಆಟಗಾರ್ತಿಯರಿಗೆ ಅವಕಾಶ ಕಲ್ಪಿಸಲು ಕ್ರಿಕೆಟ್ ಆಸ್ಟ್ರೇಲಿಯಾದ (Cricket Australia) ಮಾರ್ಗಸೂಚಿಯನ್ನು ಅನುಸರಿಸಬೇಕು ಎಂದು ಈ ತಿಂಗಳ ಆರಂಭದಲ್ಲಿ ಅನಯಾ ಬಲವಾಗಿ ಆಗ್ರಹಿಸಿದ್ದರು. ಬಿಸಿಸಿಐ ಆಸ್ಟ್ರೇಲಿಯಾ ಮಾಡಿದ್ದನ್ನು ಅನುಸರಿಸಿದರೆ ಅದು ಅತ್ಯಂತ ಅದ್ಭುತವಾದ ಸಂಗತಿಯಾಗುತ್ತದೆ ಎಂದು ಅನಯಾ ಅವರು ಹಿಂದೂಸ್ತಾನ್ ಟೈಮ್ಸ್ ಸಂದರ್ಶನದಲ್ಲಿ ತಿಳಿಸಿದ್ದರು.

ಇದೇ ಸಮಯದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾದ ಐತಿಹಾಸಿಕ ನಿರ್ಧಾರವನ್ನು ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಮರಿಜನ್ನೆ ಕಪ್ (Marizanne Kapp) ಕಟುವಾಗಿ ಟೀಕಿಸಿದ್ದು, ಇದು ಮಹಿಳಾ ಕ್ರಿಕೆಟ್‌ಗೆ ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಮರಿಜನ್ನೆ ಕಪ್ ಅವರ ಟೀಕೆಗಳನ್ನು ಮುಕ್ತವಾಗಿ ಸ್ವೀಕರಿಸಿದ ಅನಯಾ, ತಾನು ವ್ಯಾಪಕ ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾದ ಬಳಿಕವೇ ಈ ಹಾದಿಯನ್ನು ತುಳಿದಿರುವುದಾಗಿ ತಿರುಗೇಟು ನೀಡಿದ್ದಾರೆ.

ಮ್ಯಾಂಚೆಸ್ಟರ್ ಯೂನಿವರ್ಸಿಟಿ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ ಸಂಸ್ಥೆಯು ಹಾರ್ಮೋನ್ ರಿಪ್ಲೇಸ್‌ಮೆಂಟ್ ಥೆರಪಿಯ ನಂತರ ತನ್ನ ದೈಹಿಕ ಸಾಮರ್ಥ್ಯದ ಕುರಿತು 12 ವಾರಗಳ ಕಾಲ ಪರೀಕ್ಷೆ ನಡೆಸಿದೆ ಎಂದು ಅನಯಾ ಅವರು ಸ್ಪಷ್ಟಪಡಿಸಿದ್ದಾರೆ. ಆ ಪರೀಕ್ಷೆಯ ವರದಿ ಪ್ರಕಾರ ತನ್ನ ದೈಹಿಕ ನಿಯಮಗಳು ಸಿಸ್‌ಜೆಂಡರ್ ಮಹಿಳಾ ಅಥ್ಲೀಟ್ ವ್ಯಾಪ್ತಿಯಲ್ಲಿಯೇ ಬರುತ್ತವೆ ಎಂದು ಸಾಬೀತಾಗಿದೆ ಎಂದು ತಿಳಿಸಿದ್ದಾರೆ.

ಶಸ್ತ್ರಚಿಕಿತ್ಸೆಯ ನಂತರ ತನ್ನ ದೇಹದಲ್ಲಿ ಟೆಸ್ಟೋಸ್ಟೆರಾನ್ ಉತ್ಪತ್ತಿಯಾಗುತ್ತಿಲ್ಲವೆಂದೂ, ತನ್ನ ಟೆಸ್ಟೋಸ್ಟೆರಾನ್ ಮಟ್ಟವು ಕೇವಲ 0.6 ನ್ಯಾನೊಮೋಲ್ಸ್‌ಗಳಷ್ಟೇ ಇದೆ ಎಂದೂ ಅನಯಾ ಅವರು ವಿವರಿಸಿದ್ದಾರೆ. ಇದರಿಂದಾಗಿ ಮೂಳೆಗಳ ಸಾಂದ್ರತೆ ಕುಸಿಯುತ್ತಿರುವುದನ್ನು ತಾನು ಅನುಭವಿಸುತ್ತಿದ್ದೇನೆ ಎಂದು ತಿಳಿಸಿರುವ ಅನಯಾ, ಪ್ರತಿಯೊಂದು ಪ್ರಕರಣವನ್ನು ಪ್ರತ್ಯೇಕವಾಗಿ ಪರಿಗಣಿಸಿ ನಿಯಮಗಳನ್ನು ರೂಪಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದೇ ಸಂದರ್ಶನದಲ್ಲಿ ಲಿಂಗತ್ವ ದೃಢೀಕರಣ ಶಸ್ತ್ರಚಿಕಿತ್ಸೆಯ ಬಳಿಕ ತಾನು ಎದುರಿಸಿದ ಆನ್‌ಲೈನ್ ನಿಂದನೆಗಳ ಕುರಿತು ಮಾತನಾಡಿದ ಅನಯಾ, ನಾನು ಅನುಭವಿಸಿದ ನೋವನ್ನು ಯಾರೂ ಅನುಭವಿಸಿಲ್ಲ ಎಂದು ಭಾವುಕರಾದರು, (ಏಜೆನ್ಸೀಸ್​).