ಲಂಡನ್: ವೆಸ್ಟ್ ಇಂಡೀಸ್ ಮಾಜಿ ನಾಯಕ ಕೈರಾನ್ ಪೊಲ್ಲಾರ್ಡ್ ಮುಂದಿನ ವರ್ಷದ ಟಿ20 ವಿಶ್ವಕಪ್ಗೆ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡದ ಸಹಾಯಕ ಕೋಚ್ ಆಗಿ ನೇಮಕಗೊಂಡಿದ್ದಾರೆ. ಜೂನ್ 4ರಿಂದ ಅಮೆರಿಕ-ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ಟೂರ್ನಿ ನಡೆಯಲಿದ್ದು, ಪೊಲ್ಲಾರ್ಡ್ ಕೆರಿಬಿಯನ್ ವಾತಾವರಣದ ಬಗ್ಗೆ ಸೂಕ್ತ ಮಾಹಿತಿ ನೀಡುವ ಮೂಲಕ ಆಂಗ್ಲರಿಗೆ ನೆರವಾಗಲಿದ್ದಾರೆ.
2022ರ ಏಪ್ರಿಲ್ನಲ್ಲಿ ಎಲ್ಲ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ ಪೊಲ್ಲಾರ್ಡ್, ವಿಶ್ವದೆಲ್ಲೆಡೆ 637 ಟಿ20 ಪಂದ್ಯ ಆಡಿದ ಅನುಭವ ಹೊಂದಿದ್ದಾರೆ. 2012ರಲ್ಲಿ ಟಿ20 ವಿಶ್ವಕಪ್ ಗೆದ್ದ ವಿಂಡೀಸ್ ತಂಡದ ಭಾಗವಾಗಿದ್ದರು. ವಿಂಡೀಸ್ ಪರ 101 ಟಿ20 ಪಂದ್ಯ ಆಡಿರುವ ಅವರು 1,569 ರನ್ ಮತ್ತು 42 ವಿಕೆಟ್ ಗಳಿಸಿದ್ದಾರೆ. ಈ ಪೈಕಿ 63 ಟಿ20 ಪಂದ್ಯಗಳಲ್ಲಿ ನಾಯಕರಾಗಿದ್ದರು.
ಪೊಲ್ಲಾರ್ಡ್ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದಿಂದ ನಿವೃತ್ತಿ ಹೊಂದಿದ್ದರೂ, ಇತರ ಕೆಲ ಟಿ20 ಲೀಗ್ಗಳಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಟ್ರಿನಿಡಾಡ್ ನೈಟ್ರೈಡರ್ಸ್ ತಂಡವನ್ನು ಪ್ರಶಸ್ತಿ ಸುತ್ತಿಗೇರಿಸಿದ್ದರು.