ಗುವಾಹಟಿ : ಜನವರಿ 10 ರಿಂದ ಆರಂಭಗೊಳ್ಳಲಿರುವ ಖೇಲೋ ಇಂಡಿಯಾ ಗೇಮ್ಸ್ನ ವಿಶೇಷ ಸ್ಪೈಸ್ ಜೆಟ್ ವಿಮಾನವನ್ನು ಕೇಂದ್ರ ಸಚಿವ ಕಿರಣ್ ರಿಜಿಜು, ಬಾಕ್ಸರ್ ಮೇರಿ ಕೋಮ್ ಬುಧವಾರ ಅನಾವರಣಗೊಳಿಸಿದರು.
ಜನವರಿ 10 ರಿಂದ ಆರಂಭಗೊಳ್ಳಲಿರುವ ಖೇಲೋ ಇಂಡಿಯಾ ಯೂತ್ ಗೇಮ್ಸ್ ಉದ್ಘಾಟನಾ ಸಮಾರಂಭಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ತೆರಳುತ್ತಿಲ್ಲ. ಸಮಯದ ಅಭಾವದಿಂದ ಪ್ರಧಾನಿ ಸಮಾರಂಭಕ್ಕೆ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯ ಬಿಜೆಪಿ ನಾಯಕರು ತಿಳಿಸಿದ್ದಾರೆ.
ಉದ್ಘಾಟನಾ ಸಮಾರಂಭಕ್ಕೆ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಪ್ರಧಾನಿ ಮೋದಿ, ಅಸ್ಸಾಂ ಸರ್ಕಾರ ಹಾಗೂ ಕೇಂದ್ರ ಸಚಿವಾಲಯಕ್ಕೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
‘ಗೃಹ ಸಚಿವ ಅಮಿತ್ ಷಾರನ್ನು ಆಹ್ವಾನಿಸಲಾಗಿತ್ತು. ಆದರೆ, ಅವರೂ ಕೂಡ ಆಹ್ವಾನ ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ. 3ನೇ ಆವೃತ್ತಿಯ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ 37 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ 6800 ಕ್ರೀಡಾಪಟುಗಳು ಭಾಗವಹಿಸುವ ಸಾಧ್ಯತೆಗಳಿವೆ. ದೊಡ್ಡ ಮಟ್ಟದ ಆರಂಭೋತ್ಸವ ಸಮಾರಂಭಕ್ಕೆ ಅಸ್ಸಾಂ ಸರ್ಕಾರ ಸಿದ್ಧತೆ ನಡೆಸಿದ್ದು, ರಾಜ್ಯದ ಸ್ಟಾರ್ ಅಥ್ಲೀಟ್, ಹಿಮಾ ದಾಸ್ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಕೋಲ್ಕತ ಹಾಗೂ ದೆಹಲಿಯಿಂದ ಗುವಾಹಟಿಗೆ ಅಥ್ಲೀಟ್ಗಳು ಸುಲಭವಾಗಿ ಬರುವಂತಾಗಲು ಕೇಂದ್ರ ಸರ್ಕಾರ ವಿಶೇಷ ವಿಮಾನದ ವ್ಯವಸ್ಥೆಯನ್ನೂ ಮಾಡಿದೆ.