ಕ್ರೀಡೆ

ಬೃಹತ್​ ಸಿಕ್ಸರ್​ಗೆ 12 ರನ್ ನೀಡಬೇಕೆಂದು ಕೆವಿನ್​ ಪೀರ್ಟಸೆನ್​ ವಾದ; ಹೀಗಿವೆ ಪ್ರತಿಕ್ರಿಯೆಗಳು...

ಲಂಡನ್​: ಕ್ರಿಕೆಟ್​ ಆಟವನ್ನು ಇನ್ನಷ್ಟು ಆಸಕ್ತಿದಾಯಕವಾಗಿಸಲು ಸ್ಕೋರಿಂಗ್​ ಪದ್ಧತಿಯನ್ನು ಬದಲಾಯಿಸುವ ಹೊಸ ಐಡಿಯಾವನ್ನು ಇಂಗ್ಲೆಂಡ್​ನ ಮಾಜಿ ಬ್ಯಾಟರ್​ ಕೆವಿನ್​ ಪೀರ್ಟಸೆನ್​ ಜಗತ್ತಿನ ಮುಂದಿಟ್ಟಿದ್ದಾರೆ.

100 ಮೀಟರ್​ಗಿಂತ ದೂರ ಹೋಗುವ ಬೃಹತ್​ ಸಿಕ್ಸರ್​ಗಳಿಗೆ 12 ರನ್​ಗಳನ್ನು ನೀಡಬೇಕೆಂದು ಅವರು ವಾದಿಸಿದ್ದಾರೆ. ಆಗ ಹೆಚ್ಚಿನ ಬ್ಯಾಟರ್​ಗಳು ಬೃಹತ್​ ಸಿಕ್ಸರ್​ಗಳನ್ನು ಸಿಡಿಸಲು ಪ್ರಯತ್ನಿಸುತ್ತಾರೆ. ಇದರಿಂದ ಹೆಚ್ಚಿನ ಮನರಂಜನೆಯೂ ಸಿಗುತ್ತದೆ ಎಂದು ಪೀರ್ಟಸೆನ್​ ವಿವರಿಸಿದ್ದಾರೆ. ಅವರ ಈ ಅಭಿಪ್ರಾಯಕ್ಕೆ ಕ್ರಿಕೆಟ್​ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ದೊರೆತಿದೆ.

ಇದು ಅಪ್ರಾಯೋಗಿಕ ಎಂದು ಕೆಲವರು ಇದನ್ನು ತಳ್ಳಿಹಾಕಿದ್ದರೆ, ಇನ್ನು ಕೆಲವರು ಇದನ್ನು ಬೆಂಬಲಿಸಿದ್ದಾರೆ. ಬೌಲರ್​ಗಳಿಗೂ ಇದೇ ರೀತಿಯ ಬಹುಮಾನ ನೀಡಬೇಕು. ಅಂದರೆ ಬೌಲರ್​ ಬೌಲ್ಡ್​ ಮಾಡುವಾಗ ಮಧ್ಯದ ವಿಕೆಟ್​ ಉರುಳಿಸಿದರೆ, ನಂತರ ಬರಬೇಕಿರುವ ಬ್ಯಾಟರ್​ ಅನ್ನು ಕೂಡ ಔಟ್​ ಎಂದು ಘೋಷಿಸಬೇಕೆಂದು ಅಭಿಮಾನಿಯೊಬ್ಬರು ವಾದ ಮಂಡಿಸಿದ್ದಾರೆ.