ಬೆಂಗಳೂರು: `ಸುರಕ್ಷಿತ ನಗರಕ್ಕಾಗಿ ಓಟ’ ಎಂಬ ಥೀಮ್ನೊಂದಿಗೆ ನಡೆದ 17ನೇ ಆವೃತ್ತಿಯ ಬೆಂಗಳೂರು ಮಿಡ್ನೈಟ್ ಮ್ಯಾರಥಾನ್ನಲ್ಲಿ (ಬಿಎಂಎಂ) ಈ ಬಾರಿ ಹತ್ತು ಸಾವಿರಕ್ಕೂ ಹೆಚ್ಚು ಓಟಗಾರರು ಅತ್ಯುತ್ಸಾಹದಿಂದ ಪಾಲ್ಗೊಂಡು ಸ್ಪರ್ಧೆಯನ್ನು ಯಶಸ್ವಿಗೊಳಿಸಿದರು. ವೈಟ್ಫೀಲ್ಲ್ಡ್ನ ಕೆಟಿಪಿಒದಲ್ಲಿ ರೋಟರಿ ಬೆಂಗಳೂರು ಐಟಿ ಕಾರಿಡಾರ್ (ಆರ್ಬಿಐಟಿಸಿ) ವತಿಯಿಂದ ಓಟ ಆಯೋಜಿಸಲಾಗಿತ್ತು. ಡೊಳ್ಳು ಕುಣಿತ, ಡ್ರಮ್ ಬಡಿತ, ಲೈವ್ ಸಂಗೀತ ಕಾರ್ಯಕ್ರಮ, ಮ್ಯೂಸಿಕ್ ಬ್ಯಾಂಡ್ ಮುಂತಾದ ಸಾಂಸ್ಕತಿಕ ಚಟುವಟಿಕೆಗಳಿಂದಾಗಿ ಸ್ಥಳದಲ್ಲಿ ಹಬ್ಬದ ವಾತಾವರಣವಿತ್ತು. ಅಸೋಸಿಯೇಶನ್ ಆಫ್ ಇಂಟರ್ನ್ಯಾಷನಲ್ ಮ್ಯಾರಥಾನ್ಸ್ ಹಾಗೂ ಡಿಸ್ಟೆನ್ಸ್ ರೇಸಸ್ (ಎಐಎಂಎಸ್) ಅಡಿ ಮಾನ್ಯತೆ ಪಡೆದಿರುವ ಬಿಎಂಎಂ, ವರ್ಷದಿಂದ ವರ್ಷಕ್ಕೆ ತನ್ನ ಆಕರ್ಷಣೆಯನ್ನು ಹೆಚ್ಚಿಸಿಕೊಳ್ಳುತ್ತಿರುವುದು ಈ ಬಾರಿಯೂ ಸಾಬೀತಾಯಿತು.
ಶನಿವಾರ ಮಧ್ಯರಾತ್ರಿ ಫೋನ್ ಪೇ (ಬಿಎಂಎಂ) 2024 ಓಟ ಆಯೋಜಿಸಲಾಗಿತ್ತು. ಫುಲ್ ಮ್ಯಾರಥಾನ್, ಹಾಫ್ ಮ್ಯಾರಥಾನ್, 31.6ಕೆ ಓಟ, 10ಕೆ ಓಟ, 5ಕೆ ಟೈಮ್ಡ್ ಓಟ, ಬಿಕೆ5ಕೆ ಫನ್ ರನ್, ರೋಟರಿ ಕಪ್ ಚಾಲೆಂಜ್ ಹಾಗೂ ಫಿಟ್ಟೆಸ್ಟ್ ಸ್ಟಾರ್ಟಪ್ ಚಾಲೆಂಜ್ಗಳು ಇದ್ದವು. ಮೊದಲಿಗೆ ಭಾರತದ ಪ್ರಸಿದ್ಧ ಒಲಿಂಪಿಯನ್ ಪ್ಯಾರಾ ಅಥ್ಲೀಟ್ ರಕ್ಷಿತಾ ರಾಜು ಅವರು ಬಿಕೆ5ಕೆ ಓಟಕ್ಕೆ ಚಾಲನೆ ನೀಡಿದರು. ಬಳಿಕ ಕಾರ್ಪೊರೇಟ್ ಟೀಮ್ ಚಾಲೆಂಜ್ಗೆ ಮಹದೇವಪುರ ಶಾಸಕಿ ಶ್ರೀಮತಿ ಮಂಜುಳಾ ಲಿಂಬಾವಳಿ ಹಸಿರು ನಿಶಾನೆ ತೋರಿದರು.
ಮುಕ್ತ ಕೆಟಗರಿಯ ಓಟದಲ್ಲಿ ಕೀನ್ಯಾ, ಇಥಿಯೋಪಿಯಾ, ಅಮೆರಿಕ, ಜಪಾನ್, ಸ್ವೀಡನ್ ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳ ಅಥ್ಲೀಟ್ಗಳು ಪಾಲ್ಗೊಂಡಿದ್ದರು. ಪುರುಷರ ವಿಭಾಗದ ಫುಲ್ ಮ್ಯಾರಥಾನ್ನಲ್ಲಿ ಮೊದಲ ಸ್ಥಾನವನ್ನು ಕೀನ್ಯಾದ 27 ವರ್ಷದ ಮೈಕೆಲ್ ಮೈತ್ಯಾ ಪಡೆದುಕೊಂಡರು. 2:24:01 ಗಂಟೆಯಲ್ಲಿ ಅವರು ಓಟ ಪೂರ್ಣಗೊಳಿಸಿದರು. ಭಾರತೀಯ ವಿಭಾಗದ ಫುಲ್ ಮ್ಯಾರಥಾನ್ನಲ್ಲಿ 24 ವರ್ಷದ ಗ್ಯಾನ್ ಬಾಬು (ಉತ್ತರ ಪ್ರದೇಶ) ಚಿನ್ನದ ಪದಕ ಪಡೆದರು. ಎರಡನೇ ಸ್ಥಾನವನ್ನು ಅಭಿಷೇಕ್ ಸೋನಿ ಪಡೆದುಕೊಂಡರು.
ಮುಕ್ತ ವಿಭಾಗದ ಫುಲ್ ಮ್ಯಾರಥಾನ್ನಲ್ಲಿ ಕೇರಳದ 37 ವರ್ಷದ ಆಶಾ ಟಿ.ಪಿ. ಮೊದಲ ಸ್ಥಾನ ಪಡೆದರು. ಅವರು ಒಟ್ಟು ದೂರವನ್ನು 3:26:43 ಗಂಟೆಯಲ್ಲಿ ಕ್ರಮಿಸಿದರು. ಇವರು ಕಳೆದ ಬಾರಿಯ (ಬಿಎಂಎಂ) ನಲ್ಲೂ ಜಯ ಗಳಿಸಿದ್ದರು. ಎರಡನೇ ಸ್ಥಾನವನ್ನು ಬಿಜಯೋ ಬರ್ಮನ್ (ಅಸ್ಸಾಂ) ಪಡೆದುಕೊಂಡರು. ಮಹಿಳಾ ವಿಭಾಗದ ಹಾಫ್ ಮ್ಯಾರಥಾನ್ನಲ್ಲಿ ಉತ್ತರಾಖಂಡದ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುವ ಲಕ್ಷ್ಮಿ ಕುಮಾರಿ ಜಯ ಗಳಿಸಿದರು. ಪುರುಷರ ವಿಭಾಗದ ಹಾಫ್ ಮ್ಯಾರಥಾನ್ ಭಾರತೀಯರ ಕೆಟಗರಿಯಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯ ನೌಕರ ಗುರುಪ್ರಸಾದ್ ಬೆಳ್ಳಿ ಪದಕ ಗಳಿಸಿದರು.
ಎಲ್ಲಾ ವಯೋಮಾನದ 10,000ಕ್ಕೂ ಹೆಚ್ಚು ಓಟಗಾರರು ಬಿಎಂಎಂನಲ್ಲಿ ಪಾಲ್ಗೊಂಡಿದ್ದರು. ಎಂಇಜಿ & ಸೆಂಟರ್, ಎಎಸ್ಸಿ ಸೆಂಟರ್, ಸಾಯ್, ಕಾರ್ಪೊರೇಟ್ ಕಂಪನಿಗಳ ನೌಕರರು ಭಾಗವಹಿಸಿದ್ದರು. ಆಸ್ಟರ್ ಆಸ್ಪತ್ರೆಯ 60ಕ್ಕೂ ಹೆಚ್ಚು ಫಿಸಿಯೋಥೆರಪಿಸ್ಟ್ಗಳು ಓಟಗಾರರ ಯೋಗಕ್ಷೇಮ ನೋಡಿಕೊಂಡರು. ಫಿಲಿಪ್ಸ್ ತಂಡದವರು ತಮ್ಮ ಹಾರ್ಟ್ಪ್ರಿಂಟ್ ಸರ್ವೀಸ್ ಮೂಲಕ ಓಟಗಾರರಿಗೆ ಹೃದಯದ ಸಮಸ್ಯೆಯಾಗದಂತೆ ಕಾಳಜಿ ವಹಿಸಿದರು. ಫೋನ್ಪೇ, ಫಾಸ್ಟಿನಲ್, ವಿಸೆನ್ ಕಂಪನಿಗಳು ಎಐ ಫೋಟೋ ಬೂತ್ ಸ್ಥಾಪಿಸಿದ್ದವು.
ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಿಗೆ ನಿಧಿ ಸಂಗ್ರಹಿಸಲು ರೋಟರಿ ಬೆಂಗಳೂರು ಐಟಿ ಕಾರಿಡಾರ್ ಪ್ರತಿ ವರ್ಷ ಬಿಎಂಎಂ ಆಯೋಜಿಸುತ್ತದೆ. ಪರಿಸರ, ಆರೋಗ್ಯ, ಸಮುದಾಯ ಅಭಿವೃದ್ಧಿ ಸೇರಿದಂತೆ ನಾನಾ ಸೇವಾ ಕಾರ್ಯಗಳಿಗೆ ಇಲ್ಲಿ ಸಂಗ್ರಹವಾದ ಹಣವನ್ನು ವ್ಯಯಿಸಲಾಗುತ್ತದೆ.
ಫೋನ್ ಪೇ ಬ್ರ್ಯಾಂಡ್ ಮಾರ್ಕೆಟಿಂಗ್ ಡೈರೆಕ್ಟರ್ ರಮೇಶ್ ಶ್ರೀನಿವಾಸನ್ ಈ ವೇಳೆ ಮಾತನಾಡಿ, ` ಬಿಎಂಎಂ ಜೊತೆ ಸತತ ಐದನೇ ವರ್ಷವೂ ನಾವು ಪಾಲುದಾರರಾಗಿ ಗುರುತಿಸಿಕೊಂಡಿರುವುದಕ್ಕೆ ಹೆಮ್ಮೆಯೆನ್ನಿಸುತ್ತದೆ. `ಕರತೇ ಜಾ, ಬಢತೇ ಜಾ’ ಎಂಬ ಫೋನ್ಪೇ ಸಿದ್ಧಾಂತ ಇಲ್ಲೂ ಪ್ರತಿಫಲಿಸಿದೆ’ ಎಂದು ಹೇಳಿದರು.
ಪ್ರಮುಖ ಫಲಿತಾಂಶ ಇಂತಿದೆ:
ಫುಲ್ ಮ್ಯಾರಥಾನ್ ಮುಕ್ತ ಪುರುಷರ ವಿಭಾಗದಲ್ಲಿ ಕೀನ್ಯಾದ ಮೈಕೆಲ್ ಮೈತ್ಯಾ ಮೊದಲ ಸ್ಥಾನ, ಭಾರತದ ಗ್ಯಾನ್ ಬಾಬು ಹಾಗೂ ಅಭಿಷೇಕ್ ಸೋನಿ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದರು. ಫುಲ್ ಮ್ಯಾರಥಾನ್ ಭಾರತೀಯ ವಿಭಾಗದಲ್ಲಿ ಭಾರತದ ಗ್ಯಾನ್ ಬಾಬು, ಅಭಿಷೇಕ್ ಸೋನಿ ಮತ್ತು ಇರಾನ್ ಅಲಿ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದರು. ಫುಲ್ ಮ್ಯಾರಥಾನ್ ಮಹಿಳಾ ಮುಕ್ತ ವಿಭಾಗದಲ್ಲಿ ಭಾರತದ ಆಶಾ ಟಿ.ಪಿ., ಬಿಜೋಯಾ ಬರ್ಮನ್, ಸುಷ್ಮಾ ರಾಣಾ ಕ್ರಮವಾಗಿ ಮೊದಲ ಮೂರು ಸ್ಥಾನ ಗಳಿಸಿದರು. ಫುಲ್ ಮ್ಯಾರಥಾನ್ ಭಾರತೀಯ ಮಹಿಳೆ ವಿಭಾಗದಲ್ಲೂ ಇವರೇ ಮೊದಲ ಮೂರು ಸ್ಥಾನ ಪಡೆದರು. 31.6ಕೆ ಪುರುಷರ ಓಟದಲ್ಲಿ ಸಂತೋಷ್ ಯಾದವ್, ವೆಂಕಟೇಶ್ ಕೆ.ಕೆ., ಶಿವಮ್ ಯಾದವ್ ಮೊದಲ ಮೂರು ಸ್ಥಾನ ಗಳಿಸಿದರು. 31.6ಕೆ ಮಹಿಳಾ ಓಟದಲ್ಲಿ ನಿಶಾ, ಸೆನಿಯತ್ ಲೆಶರ್ಗೆ (ಇಥಿಯೋಪಿಯಾ), ರಾಶಿ ಸಿ.ಎಂ. ಮೊದಲ ಮೂರು ಸ್ಥಾನ ಪಡೆದರು. 31.6ಕೆ ಭಾರತೀಯ ಮಹಿಳಾ ವಿಭಾಗದಲ್ಲಿ ನಿಶಾ, ರಾಶಿ ಸಿ.ಎಂ. ಹಾಗೂ ಚಂದನಾ ಕಲಿತಾ ಮೊದಲ ಮೂರು ಸ್ಥಾನ ಪಡೆದರು.
ಮುಕ್ತ ವಿಭಾಗದ ಪುರುಷರ ಹಾಫ್ ಮ್ಯಾರಥಾನ್ನಲ್ಲಿ ಕೀನ್ಯಾದ ಕೆನೆತ್ ಕಿಮಾತಿ ಕಿತಿಂಜಿ, ಭಾರತೀಯ ವಿಭಾಗದ ಪುರುಷರ ಹಾಫ್ ಮ್ಯಾರಥಾನ್ನಲ್ಲಿ ರಾಹುಲ್, ಮಹಿಳಾ ವಿಭಾಗದ ಮುಕ್ತ ಹಾಫ್ ಮ್ಯಾರಥಾನ್ನಲ್ಲಿ ಲಕ್ಷ್ಮಿ ಕುಮಾರಿ, ಮಹಿಳಾ ವಿಭಾಗದ ಭಾರತೀಯ ವಿಭಾಗದ ಹಾಫ್ ಮ್ಯಾರಥಾನ್ನಲ್ಲಿ ಲಕ್ಷ್ಮಿ ಕುಮಾರಿ, 10ಕೆ ಪುರುಷರ ಮುಕ್ತ ಓಟದಲ್ಲಿ ಮೊಹಮ್ಮದ್ ನೂರ್ ಹಸನ್, 10ಕೆ ಪುರುಷರ ಭಾರತೀಯ ವಿಭಾಗದಲ್ಲಿ ಮೊಹಮ್ಮದ್ ನೂರ್ ಹಸನ್, 10ಕೆ ಮಹಿಳಾ ಮುಕ್ತ ವಿಭಾಗದಲ್ಲಿ ಐರುಸಲೇಂ ತಸೆ ವೆಲ್ಡೆಮಾರ್ಯಮ್, 10ಕೆ ಮಹಿಳಾ ಭಾರತೀಯ ವಿಭಾಗದಲ್ಲಿ ಆರಾಧನಾ ಕುಮಾರಿ ಚಿನ್ನದ ಪದಕ ಗಳಿಸಿದರು.