ಬೆಂಗಳೂರು: ನಾಯಕ ಕರುಣ್ ನಾಯರ್ (107* ರನ್, 42 ಎಸೆತ, 7 ಬೌಂಡರಿ, 9 ಸಿಕ್ಸರ್) ಸ್ಫೋಟಕ ಶತಕದ ನೆರವಿನಿಂದ ಮೈಸೂರು ವಾರಿಯರ್ಸ್ ತಂಡ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಗುಲ್ಬರ್ಗಾ ಮಿಸ್ಟಿಕ್ಸ್ ಎದುರು 36 ರನ್‌ಗಳಿಂದ ಗೆದ್ದು ಫೈನಲ್‌ಗೆ ಲಗ್ಗೆಯಿಟ್ಟಿದೆ. ಪ್ರಶಸ್ತಿ ಸುತ್ತಿನಲ್ಲಿ ಮಂಗಳವಾರ ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಎದುರಿಸಲಿದೆ.
ಚಿನ್ನಸ್ವಾಮಿ ಅಂಗಣದಲ್ಲಿ ಸೋಮವಾರ ನಡೆದ 2ನೇ ಸೆಮಿೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಮೈಸೂರು ತಂಡ ಆರಂಭಿಕ ಆರ್. ಸಮರ್ಥ್ (80 ರನ್, 50 ಎಸೆತ, 10 ಬೌಂಡರಿ, 2 ಸಿಕ್ಸರ್) ಹಾಗೂ ಕರುಣ್ ನಾಯರ್ ಜತೆಯಾಟದಿಂದ ರನ್ ಮಳೆಹರಿಸಿ 5 ವಿಕೆಟ್‌ಗೆ 248 ರನ್‌ಗಳ ದಾಖಲೆಯ ಮೊತ್ತ ಪೇರಿಸಿತು. ಇದು ಟೂರ್ನಿಯಲ್ಲಿ ತಂಡವೊಂದರ ಗರಿಷ್ಠ ಮೊತ್ತ ಎನಿಸಿದೆ. ಮೈಸೂರು ಪರ 2ನೇ ವಿಕೆಟ್‌ಗೆ ಜತೆಯಾದ ಸಮರ್ಥ್-ಕರುಣ್ 64 ಎಸೆತಗಳಲ್ಲಿ 148 ರನ್ ಚಚ್ಚಿದರು. 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಕರುಣ್, ಬಳಿಕ 15 ಎಸೆತದಲ್ಲಿ 50 ರನ್ ಸೇರಿಸಿ 40 ಎಸೆತದಲ್ಲಿ ಶತಕ ಪೂರೈಸಿ ಸಂಭ್ರಮಿಸಿದರು.
ಪ್ರತಿಯಾಗಿ ಗುಲ್ಬರ್ಗಾ 8 ವಿಕೆಟ್‌ಗೆ 212 ರನ್‌ಗಳಿಸಲಷ್ಟೇ ಶಕ್ತವಾಯಿತು. ಗುಲ್ಬರ್ಗಾ ಪರ ಮ್ಯಾಕ್ನೀಲ್ ನೊರೊನ್ಹಾ (61 ರನ್, 34 ಎಸೆತ, 4 ಬೌಂಡರಿ, 3 ಸಿಕ್ಸರ್) ಹಾಗೂ ಅಬುಲ್ ಹಸನ್ ಖಾಲಿದ್ (54 ರನ್, 29 ಎಸೆತ, 1 ಬೌಂಡರಿ, 5 ಸಿಕ್ಸರ್) ಹೋರಾಟ ವ್ಯರ್ಥಗೊಂಡಿತು.
ಮೈಸೂರು ವಾರಿಯರ್ಸ್: 2 ವಿಕೆಟ್‌ಗೆ 248 (ಆರ್. ಸಮರ್ಥ್ 80, ಎಸ್‌ಯು ಕಾರ್ತಿಕ್ 41, ಕರುಣ್ 107*, ಮನೋಜ್ ಭಾಂಡಗೆ 18*, ಡಿ. ಅವಿನಾಶ್ 44ಕ್ಕೆ1). ಗುಲ್ಬರ್ಗಾ ಮಿಸ್ಟಿಕ್ಸ್: 8 ವಿಕೆಟ್‌ಗೆ 212 (ಎಲ್‌ಆರ್ ಚೇತನ್ 28, ಕೆವಿ ಅನೀಶ್ 23, ಮ್ಯಾಕ್ನೀಲ್ 61, ಖಾಲಿದ್ 54, ಜೆ. ಸುಚಿತ್ 26ಕ್ಕೆ2, ಮೊನೀಶ್ ರೆಡ್ಡಿ 42ಕ್ಕೆ 2).
ನಾಳೆ ಫೈನಲ್
ಹುಬ್ಬಳ್ಳಿ ಟೈಗರ್ಸ್-ಮೈಸೂರು ವಾರಿಯರ್ಸ್
ಆರಂಭ: ಸಂಜೆ 5.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಕನ್ನಡ/2.