ನವದೆಹಲಿ: ಟೀಮ್ ಇಂಡಿಯಾ ಪರ ಟೆಸ್ಟ್ ಇತಿಹಾಸದಲ್ಲಿ ವೀರೇಂದ್ರ ಸೆಹ್ವಾಗ್ ಬಿಟ್ಟರೆ ತ್ರಿಶತಕ ಬಾರಿಸಿದ ಇನ್ನೊಬ್ಬ ಆಟಗಾರನೆಂದರೆ ಕರುಣ್ ನಾಯರ್. ಸದ್ಯ ಕ್ರಿಕೆಟ್ನಿಂದ ಕೊಂಚ ಬಿಡುವು ಪಡೆದುಕೊಂಡಿರುವ ನಾಯರ್ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.
ಹೌದು, ತಮ್ಮ ಬಹುಕಾಲದ ಗೆಳತಿ ಸನಾಯಾ ತಂಕರಿವಾಲಾ ಎಂಬುವರನ್ನು ರಾಜಸ್ಥಾನದ ಉದಯ್ಪುರದಲ್ಲಿ ನಡೆದ ಅದ್ಧೂರಿ ವಿವಾಹ ಸಮಾರಂಭದಲ್ಲಿ ವರಿಸಿದ್ದಾರೆ.
ಶ್ರೇಯಸ್ ಅಯ್ಯರ್, ವರುಣ್ ಆ್ಯರೂನ್, ಯಜುವೇಂದ್ರ ಚಹಾಲ್, ಶಾರ್ದುಲ್ ಠಾಕೂರು ಮತ್ತು ಅಂಜಿಕ್ಯ ರಹಾನೆ ಸೇರಿದಂತೆ ಇನ್ನಿಳಿದ ಸಹ ಆಟಗಾರರು ನಾಯರ್ ವಿವಾಹ ಸಂಭ್ರಮದಲ್ಲಿ ಭಾಗಿಯಾಗಿ ತಮ್ಮ ಇನ್ಸ್ಟಾಗ್ರಾಂಗಳಲ್ಲಿ ಮದುವೆ ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಶುಭಕೋರಿದ್ದಾರೆ.
ಕರುಣ್ ನಾಯರ್ ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಮದುವೆ ಫೋಟೋಗಳನ್ನು ಅಪ್ಲೋಡ್ ಮಾಡಿ ಶುಭ ಹಾರೈಸಿದ್ದಾರೆ. ವಿಶೇಷವೆಂದರೆ ಟೀಮ್ ಇಂಡಿಯಾ ಟೆಸ್ಟ್ ತಂಡದ ಉಪನಾಯಕ ಅಂಜಿಕ್ಯ ರಹಾನೆ ಅವರು ಪತ್ನಿ ರಾಧಿಕಾ ಧುಪವ್ಕರ್ ಹಾಗೂ ಪುಟ್ಟ ಮಗಳಿನೊಂದಿಗೆ ಸಂಭ್ರಮದಲ್ಲಿ ಭಾಗವಹಿಸಿ ನವಜೋಡಿಗೆ ಆಶೀರ್ವದಿಸಿದ್ದಾರೆ.
ಕಳೆದ ವರ್ಷ ಜೂನ್ ತಿಂಗಳಲ್ಲಿ ಸನಾಯಾರೊಂದಿಗಿನಿ ನಿಶ್ಚಿತಾರ್ಥ ಮಾಡಿಕೊಂಡಿದ್ದನ್ನು ಫೋಟೋ ಹಾಕಿ ಜಾಲತಾಣದಲ್ಲಿ ನಾಯರ್ ಘೋಷಿಸಿದ್ದರು.
ರಾಜಸ್ಥಾನ ಮೂಲದ ನಾಯರ್, ದೇಶಿ ಕ್ರಿಕೆಟ್ನಲ್ಲಿ ಕರ್ನಾಟಕ ತಂಡದ ಪರ ಆಡುತ್ತಿದ್ದಾರೆ. ಗಮನಾರ್ಹವೆಂದರೆ ಡಿಸೆಂಬರ್ 2016 ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ನಲ್ಲಿ 303 ರನ್ ಬಾರಿಸಿ ಎಲ್ಲರ ಹುಬ್ಬೇರಿಸಿದ್ದರು. ಆದರೂ ನಾಯರ್ ಹೆಚ್ಚು ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸಲು ವಿಫಲರಾಗಿದ್ದಾರೆ. 2017ರ ಮಾರ್ಚ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ್ದೆ ನಾಯರ್ ಅವರ ಕೊನೆಯ ಟೆಸ್ಟ್ ಪಂದ್ಯವಾಗಿದೆ.
ಒಟ್ಟು 6 ಟೆಸ್ಟ್ಗಳಿಂದ 374 ರನ್ ಗಳಿಸಿರುವ ನಾಯರ್ ಎರಡು ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲೂ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದು, ಕೇವಲ 46 ರನ್ ಗಳಿಸಿದ್ದಾರೆ. (ಏಜೆನ್ಸೀಸ್)