ನಾರ್ಥಂಪ್ಟನ್ಶೈರ್: ಟೆಸ್ಟ್ ಕ್ರಿಕೆಟ್ನಲ್ಲಿ ತ್ರಿಶತಕ ಸಿಡಿಸಿರುವ ಭಾರತದ ಕೇವಲ ಇಬ್ಬರು ಬ್ಯಾಟರ್ಗಳಲ್ಲಿ ಒಬ್ಬರೆನಿಸಿರುವ ಕನ್ನಡಿಗ ಕರುಣ್ ನಾಯರ್, ಹಾಲಿ ಕೌಂಟಿ ಚಾಂಪಿಯನ್ಷಿಪ್ನಲ್ಲಿ ನಾರ್ಥಂಪ್ಟನ್ಶೈರ್ ತಂಡದ ಪರ ಉಳಿದ 3 ಪಂದ್ಯಗಳಲ್ಲಿ ಆಡಲು ಸಜ್ಜಾಗಿದ್ದಾರೆ.
31 ವರ್ಷದ ಕರುಣ್ ನಾಯರ್ ಭಾರತ ತಂಡದ ಪರ 6 ಟೆಸ್ಟ್ ಆಡಿದ್ದು, ನಾರ್ಥಂಪ್ಟನ್ಶೈರ್ ತಂಡದಲ್ಲಿ ಆಸ್ಟ್ರೆಲಿಯಾದ ಸ್ಯಾಮ್ ವೈಟ್ಮನ್ ಸ್ಥಾನವನ್ನು ತುಂಬಲಿದ್ದಾರೆ. ದೇಶೀಯ ಕ್ರಿಕೆಟ್ನಲ್ಲಿ ಇತ್ತೀಚೆಗೆ ಕರ್ನಾಟಕ ರಾಜ್ಯ ತಂಡವನ್ನು ತೊರೆದಿರುವ ಕರುಣ್ ನಾಯರ್, ಮುಂದೆ ವಿದರ್ಭ ತಂಡದ ಪರ ಆಡಲಿದ್ದಾರೆ ಎನ್ನಲಾಗಿದೆ.
ನಾರ್ಥಂಪ್ಟನ್ಶೈರ್ ತಂಡದ ಪರ ಆಡುವುದನ್ನು ಎದುರು ನೋಡುತ್ತಿರುವೆ. ಕೌಂಟಿ ಚಾಂಪಿಯನ್ಷಿಪ್ನಲ್ಲಿ ಆಡುವ ಕಾತುರವೂ ನನ್ನಲ್ಲಿದೆ. ಕೌಂಟಿ ಕ್ರಿಕೆಟ್ ಬಗ್ಗೆ ಹಿಂದಿನಿಂದಲೂ ಸಾಕಷ್ಟು ಕೇಳಿದ್ದೆ ಎಂದು ಕರುಣ್ ನಾಯರ್ ಹೇಳಿದ್ದಾರೆ. ಕರುಣ್ ನಾಯರ್ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್ ತಂಡದ ನಾಯಕರಾಗಿ ಬ್ಯಾಟಿಂಗ್ನಲ್ಲೂ ಮಿಂಚಿದ್ದರು.
ವೀರೇಂದ್ರ ಸೆಹ್ವಾಗ್ ಬಳಿಕ ಟೆಸ್ಟ್ ಕ್ರಿಕೆಟ್ನಲ್ಲಿ ಶತಕ ಸಿಡಿಸಿದ ಮತ್ತೋರ್ವ ಸಾಧಕರೆನಿಸಿರುವ ಕರುಣ್, 2016ರಲ್ಲಿ ಇಂಗ್ಲೆಂಡ್ ವಿರುದ್ಧದ ಚೆನ್ನೆ$ ಟೆಸ್ಟ್ನಲ್ಲಿ (303*) ಈ ಸಾಧನೆ ಮಾಡಿದ್ದರು. ಅವರು ಭಾರತ ತಂಡದ ಪರ 2 ಏಕದಿನ ಪಂದ್ಯಗಳನ್ನೂ ಆಡಿದ್ದಾರೆ. ಐಪಿಎಲ್ನಲ್ಲೂ ವಿವಿಧ ತಂಡಗಳ ಪರ ಆಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅವರು 85 ಪಂದ್ಯಗಳಲ್ಲಿ 5,922 ರನ್ ಬಾರಿಸಿದ್ದಾರೆ.