ದೇಶೀಯ ಟಿ20 ಲೀಗ್​ ಪ್ರಶಸ್ತಿಯೊಂದಿಗೆ ಕರ್ನಾಟಕ ತಂಡದ ಸಂಭ್ರಮ. ಏಜೆನ್ಸಿ
ಕ್ರೀಡೆ

ಕರ್ನಾಟಕ ಮಹಿಳೆಯರಿಗೆ ಚೊಚ್ಚಲ ದೇಶೀಯ ಟಿ20 ಕಿರೀಟ

ಫೈನಲ್​ ಪಂದ್ಯದಲ್ಲಿ 11 ಬಾರಿಯ ಚಾಂಪಿಯನ್​ ರೈಲ್ವೇಸ್​ ವಿರುದ್ಧ 3 ರನ್​ಗಳಿಂದ ರೋಚಕ ಗೆಲುವು

ಅಹಮದಾಬಾದ್​: ಸಂಘಟಿತ ನಿರ್ವಹಣೆ ತೋರಿದ ಕರ್ನಾಟಕ ತಂಡ ಬಿಸಿಸಿಐ ಆಯೋಜಿಸಿದ ಸೀನಿಯರ್​ ರಾಷ್ಟ್ರೀಯ ಮಹಿಳಾ ಟಿ20 ಟೂರ್ನಿಯಲ್ಲಿ ಮೊಟ್ಟಮೊದಲ ಬಾರಿಗೆ ಚಾಂಪಿಯನ್​ ಪಟ್ಟವೇರಿದೆ. ಶುಭಾ ಸತೀಶ್​ ಸಾರಥ್ಯದ ಕರ್ನಾಟಕ ತಂಡ ಶುಕ್ರವಾರ ನಡೆದ ಫೈನಲ್​ ಪಂದ್ಯದಲ್ಲಿ 11 ಬಾರಿಯ ಚಾಂಪಿಯನ್​ ರೈಲ್ವೇಸ್​ ವಿರುದ್ಧ 3 ರನ್​ಗಳಿಂದ ರೋಚಕ ಗೆಲುವು ದಾಖಲಿಸಿತು. ಈ ಮುನ್ನ 2018-19ರ ಆವೃತ್ತಿಯಲ್ಲಿ ಫೈನಲ್​ಗೇರಿ ರನ್ನರ್​ಅಪ್​ಗೆ ತೃಪ್ತಿಪಟ್ಟಿದ್ದ ಕರ್ನಾಟಕ ಕೊನೆಗೂ ಚೊಚ್ಚಲ ಪ್ರಶಸ್ತಿ ಕನಸು ನನಸಾಗಿಸಿಕೊಂಡಿತು.

ನರೇಂದ್ರ ಮೋದಿ ಸ್ಟೇಡಿಯಂ ಬಿ ಗ್ರೌಂಡ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಕರ್ನಾಟಕ, ನಾಯಕ ಶುಭಾ ಸತೀಶ್​ (48) ಮತ್ತು ನಿಕಿ ಪ್ರಸಾದ್​ (28) ಆಸರೆಯಲ್ಲಿ 8 ವಿಕೆಟ್​ಗೆ 149 ರನ್​ ಗಳಿಸಿತು. ಪ್ರತಿಯಾಗಿ ರೈಲ್ವೇಸ್​ ತಂಡ ಸ್ಪಿನ್ನರ್​ಗಳಾದ ಬಿ.ಜಿ. ತೇಜಸ್ವಿನಿ (20ಕ್ಕೆ 3) ಮತ್ತು ಶ್ರೇಯಾಂಕಾ ಪಾಟೀಲ್​ (29ಕ್ಕೆ 2) ದಾಳಿಗೆ ಕುಸಿದು, 8 ವಿಕೆಟ್​ಗೆ 146 ರನ್​ ಗಳಿಸಲಷ್ಟೇ ಶಕ್ತವಾಯಿತು.

ಕರ್ನಾಟಕ: 8 ವಿಕೆಟ್​ಗೆ 149 (ಶುಭಾ ಸತೀಶ್​ 48, ವೃಂದಾ 7, ಶಿಶಿರಾ ಗೌಡ 12, ನಿಕಿ 28, ಸೌಮ್ಯ 11, ಶ್ರೇಯಾಂಕಾ 11, ಪೂನಂ 18ಕ್ಕೆ 3, ಸ್ನೇಹಾ 20ಕ್ಕೆ 2), ರೈಲ್ವೇಸ್​: 8 ವಿಕೆಟ್​ಗೆ 146 (ಪ್ರತಿಕಾ 18, ಶಿಪ್ರ ಗಿರಿ 21, ಮಿನ್ನು ಮಣಿ 30, ಆರುಶಿ ಗೋಯಲ್​ 41, ಸ್ನೇಹಾ 1, ತನುಜಾ 18*, ಏಕ್ತಾ 8, ತೇಜಸ್ವಿನಿ 20ಕ್ಕೆ 3, ಶ್ರೇಯಾಂಕಾ 29ಕ್ಕೆ 2, ಮೋನಿಕಾ 29ಕ್ಕೆ 1, ಅನನ್ಯಾ ಹೆಗ್ಡೆ 21ಕ್ಕೆ 1). ಸರಣಿಶ್ರೇಷ್ಠ: ಶ್ರೇಯಾಂಕಾ ಪಾಟೀಲ್​.