ಕ್ರೀಡೆ

ಕಿರಿಯರ ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಕರ್ನಾಟಕದ ಈಜುಪಟುಗಳಿಂದ ಭರ್ಜರಿ ಪದಕ ಬೇಟೆ

ಬೆಂಗಳೂರು: ಕರ್ನಾಟಕದ ವಿದಿತ್​ ಎಸ್​. ಶಂಕರ್​ ಒಡಿಶಾದ ಭುವನೇಶ್ವರದಲ್ಲಿ ನಡೆಯುತ್ತಿರುವ 39ನೇ ಸಬ್​ ಜೂನಿಯರ್​ ಮತ್ತು 49ನೇ ಜೂನಿಯರ್​ ರಾಷ್ಟ್ರೀಯ ಈಜು ಚಾಂಪಿಯನ್​ಷಿಪ್​ನ 100 ಮೀ. ಬ್ರೆಸ್ಟ್​ಸ್ಟ್ರೊಕ್​ (ಗ್ರೂಪ್​1) ವಿಭಾಗದಲ್ಲಿ ತನ್ನದೇ ರಾಷ್ಟ್ರೀಯ ದಾಖಲೆ ಮುರಿದಿದ್ದಾರೆ. 1 ನಿಮಿಷ, 4.26ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸಿದ ಅವರು ತನ್ನ ಹಿಂದಿನ (1 ನಿಮಿಷ, 5.04ಸೆ) ದಾಖಲೆ ಸುಧಾರಿಸಿದರು. ಕೂಟದ 4ನೇ ದಿನವಾದ ಶನಿವಾರ ಕರ್ನಾಟಕ ಮತ್ತೆ 4 ಚಿನ್ನ, 5 ಬೆಳ್ಳಿ ಮತ್ತು 4 ಕಂಚಿನ ಪದಕ ಬಾಚಿಕೊಂಡಿತು.

ಬಾಲಕರ 50 ಮೀ. ಫ್ರೀಸ್ಟೆ$ಲ್​ (ಗ್ರೂಪ್​2) ವಿಭಾಗದಲ್ಲಿ ರಾಜ್ಯದ ಇಶಾನ್​ ಮೆಹ್ರಾ 24.68 ಸೆಕೆಂಡ್​ಗಳಲ್ಲಿ ಈಜಿ ತನ್ನದೇ ರಾಷ್ಟ್ರೀಯ ದಾಖಲೆ ಸುಧಾರಿಸಿದರು. 24.71 ಸೆಕೆಂಡ್​ಗಳಲ್ಲಿ ಈಜಿದ್ದು ಅವರ ಹಿಂದಿನ ದಾಖಲೆಯಾಗಿತ್ತು.

ಬಾಲಕಿಯರ 200 ಮೀ. ಬಟರ್​ಫ್ಲೈ (ಗ್ರೂಪ್​2) ವಿಭಾಗದಲ್ಲಿ ರಾಜ್ಯದ ತನಿಷಿ ಗುಪ್ತಾ (2 ನಿ, 21.45ಸೆ) ಮತ್ತು ಧಿನಿಧಿ ದೇಸಿಂಘು (2ನಿ, 22.18ಸೆ) 2019ರಲ್ಲಿ ಅಪೇಾ ಫೆರ್ನಾಂಡಿಸ್​ (2ನಿ, 23.67ಸೆ) ನಿರ್ಮಿಸಿದ್ದ ರಾಷ್ಟ್ರೀಯ ದಾಖಲೆಗಿಂತ ವೇಗವಾಗಿ ಸ್ಪರ್ಧೆ ಮುಗಿಸಿದರು. ಈ ಪೈಕಿ ತನಿಷಿ ಚಿನ್ನ ಮತ್ತು ಧಿನಿಧಿ ಬೆಳ್ಳಿ ಗೆದ್ದರು. ಬಾಲಕರ 200 ಮೀ. ಬಟರ್​ಫ್ಲೈ (ಗ್ರೂಪ್​2) ವಿಭಾಗದಲ್ಲಿ ಅಕ್ಷಜ್​ ಥಕುರಿಯಾ ರಾಜ್ಯಕ್ಕೆ ದಿನದ 4ನೇ ಚಿನ್ನ ಗೆದ್ದುಕೊಟ್ಟರು.

ಹಷಿಕಾ ರಾಮಚಂದ್ರ 200 ಮತ್ತು 400 ಮೀ. ಬಟರ್​ಫ್ಲೈ (ಗ್ರೂಪ್​1) ವಿಭಾಗದಲ್ಲಿ ಬೆಳ್ಳಿ ಗೆದ್ದರು. ದರ್ಶನ್​ ಎಸ್​ (200 ಮೀ. ಬಟರ್​ಫ್ಲೈ, &ಗ್ರೂಪ್​1), ನೈಷಾ (400 ಮೀ. ಫ್ರೀಸ್ಟೆ$ಲ್​&ಗ್ರೂಪ್​2) ಕೂಡ ಬೆಳ್ಳಿ ಜಯಿಸಿದರು. ಹರಿಕಾರ್ತಿಕ್​ ವೇಲು (200 ಮೀ. ಬಟರ್​ಫ್ಲೈ-ಗ್ರೂಪ್​2), ವೇದಾಂತ್​ ಆನಂದ್​ (100 ಮೀ. ಬಟರ್​ಫ್ಲೈ-ಗ್ರೂಪ್​3), ಶಿರಿನ್​ (400 ಮೀ. ಬಟರ್​ಫ್ಲೈ-ಗ್ರೂಪ್​1), ಮೀನಾ ಮೆನನ್​ (400 ಮೀ. ಫ್ರೀಸ್ಟೆ$ಲ್​&ಗ್ರೂಪ್​2) ಕಂಚಿಗೆ ತೃಪ್ತಿಪಟ್ಟರು.