ಧಾರವಾಡ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಕರ್ನಾಟಕ ರಾಜ್ಯ ಭಾರತೀಯ ಶೈಲಿಯ ಕುಸ್ತಿ ಸಂಘದ ಸಹಯೋಗದಲ್ಲಿ ಫೆ. 22ರಿಂದ 4 ದಿನಗಳ ಕಾಲ ನಗರದ ಕರ್ನಾಟಕ ಕಾಲೇಜು ಮೈದಾನದಲ್ಲಿ ಕರ್ನಾಟಕ ಕುಸ್ತಿ ಹಬ್ಬ ಹಮ್ಮಿಕೊಳ್ಳಲಾಗಿದೆ.
ದೇಶದ ಹೆಸರಾಂತ 1200ಕ್ಕೂ ಹೆಚ್ಚು ಕುಸ್ತಿಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ವಿವಿಧ 3 ಅಖಾಡಗಳಲ್ಲಿ 14, 17 ವರ್ಷದೊಳಗಿನ ಹಾಗೂ 18 ವರ್ಷ ಮೇಲ್ಪಟ್ಟವರ ವಿವಿಧ ತೂಕಗಳ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ವಿಜೇತರಿಗೆ 80 ಲಕ್ಷ ರೂ. ಮೌಲ್ಯದ ನಗದು ಬಹುಮಾನ, ಪಾರಿತೋಷಕ ನೀಡಲಾಗುವುದು.
ಅಜರ್ಬೆಜಾನ್, ಜಾರ್ಜಿಯಾ, ಇರಾನ್ ದೇಶಗಳ ಕುಸ್ತಿಪಟುಗಳ ಜತೆಗೆ ಭಾರತದ ಒಲಿಂಪಿಕ್ಸ್ ಪದಕ ವಿಜೇತ ಯೋಗೇಶ್ವರ ದತ್, ಪದ್ಮಶ್ರೀ ಸಾಕ್ಷಿ ಮಲಿಕ್, ಪದ್ಮಶ್ರೀ ಕರ್ತಾರ ಸಿಂಗ್, ಅಂತಾರಾಷ್ಟ್ರೀಯ ಕುಸ್ತಿಪಟು ಮಹ್ಮದ್ ಮುರಾಡಿ, ಭಾರತ ಕೇಸರಿ ಉಮೇಶ ಚೌಧರಿ, ಮಹಿಳಾ ಕುಸ್ತಿಪಟುಗಳಾದ ಅಂಶು ಮಲ್ಲಿಕ್, ಜೈಲಾ ನಾಗೀಜಡೆ, ನೈನಾ, ಸಬೀರಾ ಅಲಿಯೆವಾ ಅಲಹವರ್ಡಿ ಸೇರಿ ಹೆಸರಾಂತ ಕುಸ್ತಿಪಟುಗಳು ಭಾಗವಹಿಸಲಿದ್ದಾರೆ. ಕುಸ್ತಿ ಹಬ್ಬದಲ್ಲಿ ಪಾಲ್ಗೊಳ್ಳಲು ಮುಕ್ತ ಅವಕಾಶವಿದ್ದು, ಆಸಕ್ತರು ಭಾಗವಹಿಸಬಹುದು.
ಭಾರತೀಯ ಶೈಲಿಯ ಕುಸ್ತಿ ಸಂಘದ ನಿಯಮದ ಪ್ರಕಾರ ಅಂಕಗಳ ಆಧಾರದಲ್ಲಿ ಮಣ್ಣಿನ ಮೇಲೆ ಪಂದ್ಯಗಳನ್ನು ನಡೆಸಲಾಗುವುದು. 14 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ 2006, 2007 ಮತ್ತು 2008ನೇ ಇಸ್ವಿಯಲ್ಲಿ ಜನಿಸಿದವರು, 17 ವರ್ಷದೊಳಗಿನ ವಿಭಾಗದಲ್ಲಿ 2003, 2004 ಮತ್ತು 2005ನೇ ಇಸ್ವಿ ಮತ್ತು 18 ವರ್ಷ ಮೇಲ್ಪಟ್ಟ ವಿಭಾಗದಲ್ಲಿ 2002 ಹಾಗೂ ಅದಕ್ಕೂ ಪೂರ್ವ ಜನಿಸಿದವರು ಪಾಲ್ಗೊಳ್ಳಬಹುದು.
ಪ್ರಶಸ್ತಿ: 14 ವರ್ಷದೊಳಗಿನ ಬಾಲಕರ 52 ಕೆಜಿ ಮತ್ತು ಬಾಲಕಿಯರ 46 ಕೆಜಿ ವಿಭಾಗದ ವಿಜೇತರಿಗೆ ಕರ್ನಾಟಕ ಬಾಲ ಕೇಸರಿ ಪ್ರಶಸ್ತಿ, 17 ವರ್ಷದೊಳಗಿನ ಬಾಲಕರ 60 ಕೆಜಿ ಮತ್ತು ಬಾಲಕಿಯರ 53 ಕೆಜಿ ವಿಭಾಗದಲ್ಲಿ ಕರ್ನಾಟಕ ಕಿಶೋರ ಮತ್ತು ಕಿಶೋರಿ ಪ್ರಶಸ್ತಿ ನೀಡಲಾಗುವುದು. ಹಿರಿಯರ ವಿಭಾಗದಲ್ಲಿ ಕರ್ನಾಟಕ ಕೇಸರಿ ಪ್ರಶಸ್ತಿಗೆ 86 ಕೆಜಿಯಿಂದ 125ಕೆಜಿ ವರೆಗಿನ ಪುರುಷರು ಹಾಗೂ ಮಹಿಳಾ ಕರ್ನಾಟಕ ಕೇಸರಿ ಪ್ರಶಸ್ತಿಗೆ 59 ಕೆಜಿಯಿಂದ 76 ಕೆಜಿ ತೂಕದವರೆಗಿನ ಮಹಿಳೆಯರು ಭಾಗವಹಿಸಬಹುದು.
ಕುಸ್ತಿ ಪಂದ್ಯದ ಸಮಯದಲ್ಲಿ ಗೈರು ಹಾಜರಾಗುವ ಕುಸ್ತಿಪಟುಗಳಿಗೆ ಕುಸ್ತಿ ಹಬ್ಬದ ಯಾವುದೇ ಸವಲತ್ತುಗಳನ್ನು ನೀಡಲಾಗುವುದಿಲ್ಲ. ಕುಸ್ತಿಪಟುಗಳ ಉದ್ದೀಪನಾ ಮದ್ದು ಪರೀಕ್ಷೆಯನ್ನು ಪರೀಕ್ಷಾ ತಂಡದಿಂದ (National Anti Doping Agency) ನಡೆಸಲಾಗುವುದು. ಉದ್ದೀಪನಾ ಮದ್ದು ಸೇವನೆ ರುಜುವಾತಾದಲ್ಲಿ 4 ವರ್ಷಗಳ ಅವಧಿಗೆ ಸ್ಪರ್ಧೆ/ಆಯ್ಕೆಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಲಾಗುವುದು. ಕುಸ್ತಿ ಪ್ರಥಮ ಸುತ್ತಿನಿಂದಲೇ ನಾಡಾದವರು ಪರೀಕ್ಷೆ ನಡೆಸುವರು. ಫೆ. 22ರಂದು ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ರವರೆಗೆ ಧಾರವಾಡ ಕೇಂದ್ರಿಯ ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣದಿಂದ ಕರ್ನಾಟಕ ಕಾಲೇಜು ಮೈದಾನದವರೆಗೆ ಕುಸ್ತಿಪಟುಗಳಿಗೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಮಾಹಿತಿಗೆ ಮೊ. 9448590935, 9964245769, 7892042714 ಸಂರ್ಪಸಬಹುದು.
ಫೆ. 22ರಂದು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12ರವರೆಗೆ ಕರ್ನಾಟಕ ಕಾಲೇಜು ಮೈದಾನದಲ್ಲಿ ಕುಸ್ತಿಪಟುಗಳ ದೇಹ ತೂಕ ಪರೀಕ್ಷೆ ನಡೆಸಲಾಗುವುದು. ಕುಸ್ತಿಪಟುಗಳು ಜನನ ನೋಂದಣಿ ಅಧಿಕಾರಿಗಳಿಂದ ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್, 4 ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಬ್ಯಾಂಕ್ ಖಾತೆಯ ಪ್ರತಿ ತರಬೇಕು ಎಂದು ಪ್ರಕಟಣೆ ತಿಳಿಸಿದೆ.