ನವದೆಹಲಿ: ಮಧ್ಯಮ ವೇಗದ ಬೌಲರ್ ರೋನಿತ್ ಮೋರೆ (32ಕ್ಕೆ 6) ಜೀವನಶ್ರೇಷ್ಠ ನಿರ್ವಹಣೆ ನೆರವಿನಿಂದ ಕರ್ನಾಟಕ ತಂಡ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ 7ನೇ ಸುತ್ತಿನ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸಿತು.
ಈ ಮೂಲಕ 8 ಬಾರಿಯ ಚಾಂಪಿಯನ್ ಕರ್ನಾಟಕ, ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರುವ ಮೂಲಕ ಎಂಟರ ಘಟ್ಟಕ್ಕೆ ಸನಿಹವಾಯಿತು.
ಕಾರ್ನೆಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 9 ವಿಕೆಟ್ಗೆ 199 ರನ್ಗಳಿಂದ ಗುರುವಾರ ಆಟ ಆರಂಭಿಸಿದ ಕರ್ನಾಟಕ ತಂಡ 211 ರನ್ಗಳಿಗೆ ಸರ್ವಪತನ ಕಂಡಿತು. ಇದರಿಂದ 29 ರನ್ ಮುನ್ನಡೆ ಸಾಧಿಸಿತು. ಬಳಿಕ 2ನೇ ಇನಿಂಗ್ಸ್ ಆರಂಭಿಸಿದ ರೈಲ್ವೇಸ್, ರೋನಿತ್ ಮೋರೆ ಮತ್ತು ಅನುಭವಿ ವೇಗಿ ಮಿಥುನ್ (17ಕ್ಕೆ 3) ಮಾರಕ ದಾಳಿಗೆ ಕುಸಿದು ಕೇವಲ 79 ರನ್ಗಳಿಗೆ ಸರ್ವಪತನ ಕಂಡಿತು. ಇದರಿಂದ 51 ರನ್ ಗುರಿ ಪಡೆದ ಕರ್ನಾಟಕ ತಂಡ 8.2 ಓವರ್ಗಳಲ್ಲೇ 10 ವಿಕೆಟ್ ಗೆಲುವು ದಾಖಲಿಸಿತು. -ಏಜೆನ್ಸೀಸ್
ಕದಂ-ಪಡಿಕಲ್ ಅಜೇಯ ಸಾಧನೆ
ರೈಲ್ವೇಸ್ ನೀಡಿದ 51 ರನ್ ಸವಾಲು ಬೆನ್ನಟ್ಟಿದ ಕರ್ನಾಟಕ ತಂಡ ಆರಂಭಿಕರಾದ ರೋಹನ್ ಕದಂ (27ರನ್, 31 ಎಸೆತ, 4 ಬೌಂಡರಿ) ಹಾಗೂ ದೇವದತ್ ಪಡಿಕಲ್ (24 ರನ್, 19 ಎಸೆತ, 3 ಬೌಂಡರಿ) ಜೋಡಿಯ ಸಾಹಸದಿಂದ 50 ಎಸೆತಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಗುರಿ ಮುಟ್ಟಿತು. ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿ ಯಾವುದೇ ಅಪಾಯವಾಗದಂತೆ ಚಹಾ ವಿರಾಮಕ್ಕೂ ಮೊದಲೇ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿತು.
ರೋನಿತ್ ಮೋರೆ-ಮಿಥುನ್ ಅಬ್ಬರ
ದಿನದ ಆರಂಭದಲ್ಲೇ ಕರ್ನಾಟಕವನ್ನು ಕಟ್ಟಿಹಾಕಿ ಅಲ್ಪ ಹಿನ್ನಡೆ ಯೊಂದಿಗೆ 2ನೇ ಸರದಿ ಆರಂಭಿಸಿದ ರೈಲ್ವೇಸ್, ನಾಟಕೀಯ ಕುಸಿತ ಕಂಡಿತು. ಇನಿಂಗ್ಸ್ನ 2ನೇ ಓವರ್ ಎಸೆದ ಪ್ರತೀಕ್ ಜೈನ್ ಆರಂಭಿಕ ಆಶಿಶ್ ಶೆರಾವತ್ (0) ಅವರನ್ನು 6ನೇ ಎಸೆತದಲ್ಲಿ ಪೆವಿಲಿಯನ್ಗೆ
ಅಟ್ಟಿದರು. ಇದರೊಂದಿಗೆ ರೈಲ್ವೇಸ್ ಕುಸಿತಕ್ಕೂ ಮುನ್ನುಡಿ ಬರೆದು ರಾಜ್ಯ ತಂಡದ ಪಾಳಯದಲ್ಲಿ ಗೆಲುವಿನ ಆಸೆ ಚಿಗುರಿಸಿದರು. ಬಳಿಕ ರೋನಿತ್- ಮಿಥುನ್ ಜೋಡಿ ಅಬ್ಬರದ ಎದುರು ರೈಲ್ವೇಸ್ ಮಂಕಾಯಿತು. ಭೋಜನ ವಿರಾಮದ ವೇಳೆಗೆ ರೈಲ್ವೇಸ್ ತಂಡ 30 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿತು. ಬಳಿಕ ರೈಲ್ವೇಸ್ ಕನಿಷ್ಠ ಪ್ರತಿರೋಧ ತೋರಲು ವಿಫಲವಾಗಿ ಸರ್ವಪತನ ಕಂಡಿತು. ರೈಲ್ವೇಸ್ ಪರ ಆರಂಭಿಕ ಮೃನಾಲ್ ದೇವದತ್ (38) ಮಾತ್ರ ಎರಡಂಕಿ ತಲುಪಿದರು.
ರೈಲ್ವೇಸ್ ಪ್ರಥಮ ಇನಿಂಗ್ಸ್: 182
ಕರ್ನಾಟಕ ಪ್ರಥಮ ಇನಿಂಗ್ಸ್: 71.1 ಓವರ್ಗಳಲ್ಲಿ 211 (ಬುಧವಾರ 9 ವಿಕೆಟ್ಗೆ 199)
ಶರತ್ ಶ್ರೀನಿವಾಸ್ ಬಿ ಟಿ. ಪ್ರದೀಪ್ 62
ಪ್ರತೀಕ್ ಜೈನ್ ಔಟಾಗದೆ 8
ಇತರ: 9. ವಿಕೆಟ್ ಪತನ: 9-177. ಬೌಲಿಂಗ್: ಅಮಿತ್ ಮಿಶ್ರಾ 20-4-70-5, ಟಿ. ಪ್ರದೀಪ್ 15.1-5-29-1, ಸಂಗ್ವಾನ್ 18-3-57-3, ಅವಿನಾಶ್ 12-0-36-1, ಹರ್ಷ್ ತ್ಯಾಗಿ 6-0-13-0.
ಇತರ: 3. ವಿಕೆಟ್ ಪತನ: 1-0, 2-1, 3-15, 4-20, 5-43, 6-63, 7-63, 8-63, 9-63. ಬೌಲಿಂಗ್: ಅಭಿಮನ್ಯು ಮಿಥುನ್ 9-3-17-3, ಪ್ರತೀಕ್ ಜೈನ್ 10-4-28-1, ರೋನಿತ್ ಮೋರೆ 11-3-32-6. ಕರ್ನಾಟಕ ದ್ವಿತೀಯ ಇನಿಂಗ್ಸ್: 8.2 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 51
ಇತರ: 0. ಬೌಲಿಂಗ್: ಅಮಿತ್ ಮಿಶ್ರಾ 3-0-20-0, ಹಿಮಾಂಶು ಸಂಗ್ವಾನ್ 3-0-17-0, ಟಿ. ಪ್ರದೀಪ್ 1.2-0-9-0, ಅವಿನಾಶ್ ಯಾದವ್ 1-0-5-0.