ಪಟನಾ: ಸ್ಪಿನ್ನರ್‌ಗಳಾದ ಶ್ರೇಯಸ್ ಗೋಪಾಲ್ (28ಕ್ಕೆ 4) ಮತ್ತು ಮೊಹ್ಸಿನ್ ಖಾನ್ (50ಕ್ಕೆ 3) ಮಾರಕ ಬೌಲಿಂಗ್ ದಾಳಿಯ ಬಲದಿಂದ ಕರ್ನಾಟಕ ತಂಡ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಆತಿಥೇಯ ಬಿಹಾರ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದೆ.
ಮೊಯಿನ್-ಉಲ್-ಹಕ್ ಸ್ಟೇಡಿಯಂನಲ್ಲಿ ಶನಿವಾರ ಆರಂಭಗೊಂಡ ತನ್ನ 3ನೇ ಲೀಗ್ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಬೌಲಿಂಗ್ ಆಯ್ದುಕೊಂಡಿತು. ನಾಯಕ ಶರ್ಮನ್ ನಿಗ್ರೋದ್ (60 ರನ್, 143 ಎಸೆತ, 6 ಬೌಂಡರಿ, 2 ಸಿಕ್ಸರ್) ಹೋರಾಟ ನಡುವೆ ಕುಸಿದ ಬಿಹಾರ 55.5 ಓವರ್‌ಗಳಲ್ಲಿ 143 ರನ್‌ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಕರ್ನಾಟಕ 3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 16 ರನ್ ಗಳಿಸಿದ್ದು, ಇನ್ನೂ 127 ರನ್ ಹಿನ್ನಡೆಯಲ್ಲಿದೆ. ನಿಕಿನ್ ಜೋಸ್ (11*) ಮತ್ತು ನಾಯಕ ಮಯಾಂಕ್ ಅಗರ್ವಾಲ್ ಬದಲಿಗೆ ಇನಿಂಗ್ಸ್ ಆರಂಭಿಸಿದ ವಿಕೆಟ್ ಕೀಪರ್-ಬ್ಯಾಟರ್ ಸುಜಯ್ ಸಾತೇರಿ (4*) ಕ್ರೀಸ್‌ನಲ್ಲಿದ್ದಾರೆ.
ಬಿಹಾರ: 55.5 ಓವರ್‌ಗಳಲ್ಲಿ 143 (ಸೂರ್ಯವಂಶಿ 4, ಶರ್ಮನ್ 60, ಬಿಪಿನ್ 31, ಪ್ರತಾಪ್ 16, ಶ್ರೇಯಸ್ 28ಕ್ಕೆ 4, ಮೊಹ್ಸಿನ್ 50ಕ್ಕೆ 3, ವೈಶಾಕ್ 29ಕ್ಕೆ 1, ವಿದ್ಯಾಧರ್ 10ಕ್ಕೆ 1, ಕೌಶಿಕ್ 21ಕ್ಕೆ 1). ಕರ್ನಾಟಕ: 3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 16 (ನಿಕಿನ್ 11*, ಸುಜಯ್ 4*).
ಶ್ರೇಯಸ್-ಮೊಹ್ಸಿನ್ ಕಡಿವಾಣ
ಕರ್ನಾಟಕದ ವೇಗಿಗಳು ಮೊದಲ 3 ವಿಕೆಟ್‌ಗಳನ್ನು ಬೇಗನೆ ಕಬಳಿಸಿ ಬಿಹಾರಕ್ಕೆ ಆರಂಭಿಕ ಆಘಾತ ನೀಡಿದರು. 32 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಬಿಹಾರ ಸಂಕಷ್ಟದಲ್ಲಿದ್ದಾಗ ಶರ್ಮನ್ ನಿಗ್ರೋದ್ ಮತ್ತು ಬಿಪಿನ್ ಸೌರಭ್ (31) ಜೋಡಿ 4ನೇ ವಿಕೆಟ್‌ಗೆ 14 ಓವರ್‌ಗಳಲ್ಲಿ 44 ರನ್ ಸೇರಿಸಿ ರಾಜ್ಯಕ್ಕೆ ಪ್ರತಿರೋಧ ತೋರಿತು.
21 ವರ್ಷದ ಮೊಹ್ಸಿನ್ ಖಾನ್ ಈ ಜೋಡಿಯನ್ನು ಬೇರ್ಪಡಿಸಿದ ಬಳಿಕ ಶರ್ಮನ್, ರಘುವೇಂದ್ರ ಪ್ರತಾಪ್ ಸಿಂಗ್ (16) ಜತೆಗೂಡಿ ಮತ್ತೆ 45 ರನ್ ಸೇರಿಸಿದರು. ಅನುಭವಿ ಶ್ರೇಯಸ್ ಗೋಪಾಲ್ ಈ ಜತೆಯಾಟ ಮುರಿದ ಬೆನ್ನಲ್ಲೇ ಬಿಹಾರ ದಿಢೀರ್ ಕುಸಿತ ಕಂಡು 22 ರನ್ ಅಂತರದಲ್ಲಿ ಕೊನೇ 6 ವಿಕೆಟ್ ಕಳೆದುಕೊಂಡಿತು.
ಅಭಿನವ್, ಮೊಹ್ಸಿನ್ ಪದಾರ್ಪಣೆ: ಕರ್ನಾಟಕ ಪರ ಬ್ಯಾಟರ್ ಅಭಿನವ್ ಮನೋಹರ್ ಮತ್ತು ಯುವ ಆ್ ಸ್ಪಿನ್ನರ್ ಮೊಹ್ಸಿನ್ ಖಾನ್ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದರು. ದೇವದತ್ ಪಡಿಕ್ಕಲ್ ಮತ್ತು ಹಾರ್ದಿಕ್ ರಾಜ್ ಬದಲಿಗೆ ಇವರಿಬ್ಬರು ಸ್ಥಾನ ಪಡೆದರು. ಕಳೆದ ಆವೃತ್ತಿಯ ಸಿಕೆ ನಾಯ್ಡು ಟ್ರೋಫಿಯಲ್ಲಿ ಗಮನಾರ್ಹ ನಿರ್ವಹಣೆ ತೋರಿದ ಆಧಾರದಲ್ಲಿ ಮೊಹ್ಸಿನ್ ಖಾನ್ ರಾಜ್ಯ ತಂಡಕ್ಕೆ ಪ್ರವೇಶ ಪಡೆದಿದ್ದರು.
ಮತ್ತೆ ಕಾಡಿದ ಮಳೆ
ಸತತ 3ನೇ ಪಂದ್ಯದಲ್ಲೂ ಮಳೆ ಕರ್ನಾಟಕ ತಂಡವನ್ನು ಹಿಂಬಾಲಿಸಿದೆ. ಕರ್ನಾಟಕ 3 ಓವರ್ ಎದುರಿಸಿದ ಬಳಿಕ ಮಂದಬೆಳಕು ಮತ್ತು ತುಂತುರು ಮಳೆಯಿಂದಾಗಿ ದಿನದಾಟ ಬೇಗನೆ ಸ್ಥಗಿತಗೊಂಡಿತು. ದಾನ ಚಂಡಮಾರುತದಿಂದಾಗಿ 2ನೇ ದಿನವೂ ಮಳೆ ಕಾಡುವ ಮುನ್ಸೂಚನೆ ಇದೆ.