ಬೆಂಗಳೂರು: ತಮಿಳುನಾಡು ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿ ಇತ್ತೀಚಿಗೆ ಆಯೋಜಿಸಿದ್ದ 16 ನೇ ಈಶ ಗ್ರಾಮೋತ್ಸವದಲ್ಲಿ, ಕರ್ನಾಟಕದ ಮಹಿಳೆಯರ ಥ್ರೋಬಾಲ್ ಮತ್ತು ಪುರುಷರ ವಾಲಿಬಾಲ್ ತಂಡಗಳು ಚಾಂಪಿಯನ್ ಶಿಪ್ ಆಗಿ ಹೊರಹೊಮ್ಮಿವೆ.
ಕರ್ನಾಟಕದ ಮೂರ್ನಾಡಿನ (ಮಾರಗೋಡು) ಕಾಂತೂರು ಫ್ರೆಂಡ್ಸ್ ತಂಡವು ಮಹಿಳೆಯರ ಥ್ರೋಬಾಲ್ ಚಾಂಪಿಯನ್‌ಶಿಪ್‌ನಲ್ಲಿ, ಕೊಯಂಬತ್ತೂರಿನ ಪಿಜಿ ಪುದೂರ್ ತಂಡವನ್ನು ನೇರ ಸೆಟ್‌ಗಳಲ್ಲಿ ಸೋಲಿಸಿ ವಿಜೇತರಾದರು.
ಇನ್ನು ಚಿಕ್ಕಮಗಳೂರಿನ ಅಲೀಫ್ ಸ್ಟಾರ್ ತಂಡವು ಪುರುಷರ ವಾಲಿಬಾಲ್ ಪಂದ್ಯದಲ್ಲಿ ಉಡುಪಿಯ ಪಲ್ಲಿ ಫ್ರೆಂಡ್ಸ್ ತಂಡವನ್ನು ರೋಮಾಂಚಕ ಪೈಪೋಟಿಯಲ್ಲಿ ಮಣಿಸಿ ಗೆದ್ದು ಬಿಗಿತು.
ಈಶ ಯೋಗ ಕೇಂದ್ರದಲ್ಲಿರುವ 112 ಅಡಿ ಎತ್ತರದ ಆದಿಯೋಗಿಯ ಸಮ್ಮುಖದಲ್ಲಿ ಅದ್ಭುತ ಅಂತಿಮ ಪಂದ್ಯಗಳು ನಡೆದವು. ವಿಜೇತ ತಂಡಗಳು 5 ಲಕ್ಷ ರೂ. ನಗದು ಬಹುಮಾನವನ್ನು ಗೆದ್ದುಕೊಳ್ಳುವ ಮೂಲಕ ಕಾರ್ಯಕ್ರಮ ಅದ್ಭುತ ತೆರೆ ಕಂಡಿತು.
ಸದ್ಗುರುಗಳ ಜೊತೆಗೆ ಕ್ರಿಕೆಟ್ ದಿಗ್ಗಜರಾದ ವೀರೇಂದ್ರ ಸೆಹ್ವಾಗ್ ಮತ್ತು ವೆಂಕಟೇಶ್ ಪ್ರಸಾದ್ ಈ ಐತಿಹಾಸಿಕ ಸಂದರ್ಭಕ್ಕೆ ಮೆರುಗು ನೀಡಿದರು. ಭಾರತ ಮತ್ತು ವಿದೇಶಗಳಿಂದ ಸಾವಿರಾರು ಪ್ರೇಕ್ಷಕರು ಈ ಕಾರ್ಯಕ್ರಮವನ್ನು ವೀಕ್ಷಿಸಲು ಆಗಮಿಸಿದ್ದರು.
ಈಶ ಗ್ರಾಮೋತ್ಸವವು ದಕ್ಷಿಣ ಭಾರತದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿ ರಾಜ್ಯಗಳಾದ್ಯಂತ ನಡೆಯುವ ಎರಡು ತಿಂಗಳ ಕ್ರೀಡಾ ಮಹೋತ್ಸವವಾಗಿದೆ. 162ಕ್ಕೂ ಹೆಚ್ಚು ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಈ ಉತ್ಸವದಲ್ಲಿ 43,000ಕ್ಕೂ ಹೆಚ್ಚು ಆಟಗಾರರು ಭಾಗವಹಿಸಿದರು. ಇದರಲ್ಲಿ 10,000ಕೂ ಹೆಚ್ಚು ಗ್ರಾಮೀಣ ಮಹಿಳೆಯರಿದ್ದು ಅದರಲ್ಲಿ ಹೆಚ್ಚಿನವರು ಗೃಹಿಣಿಯರು - ವಾಲಿಬಾಲ್ ಮತ್ತು ಥ್ರೋಬಾಲ್ ಪಂದ್ಯಗಳಲ್ಲಿ ಭಾಗವಹಿಸಿದರು.
ಇದನ್ನೂ ಓದಿ: ಉದ್ದೇಶಪೂರ್ವಕವಾಗಿ ಅಶಾಂತಿ ವಾತಾವರಣ ಸೃಷ್ಟಿಯ ಆರೋಪ
2004ಲ್ಲಿ ಸದ್ಗುರುಗಳು ಪ್ರಾರಂಭಿಸಿದ ಈಶ ಗ್ರಾಮೋತ್ಸವವು ಗ್ರಾಮೀಣ ಸಮುದಾಯಗಳ ಜೀವನದಲ್ಲಿ ಕ್ರೀಡೆ ಮತ್ತು ಆಟದ ಮನೋಭಾವವನ್ನು ತರುವ ಗುರಿಯನ್ನು ಹೊಂದಿದೆ. ಈ ಉತ್ಸವವು ವೃತ್ತಿಪರ ಆಟಗಾರರನ್ನು ಹೊರತುಪಡಿಸಿ, ದಿನಗೂಲಿ ಕಾರ್ಮಿಕರು, ಮೀನುಗಾರರು ಮತ್ತು ಗೃಹಿಣಿಯರು ಸೇರಿದಂತೆ ಸಾಮಾನ್ಯ ಗ್ರಾಮೀಣ ಜನರಿಗೆ ತಮ್ಮ ದೈನಂದಿನ ಚಟುವಟಿಕೆಗಳಿಂದ ದೂರ ಸರಿದು, ಕ್ರೀಡೆಯ ಆಚರಣೆ ಮತ್ತು ಒಗ್ಗಟ್ಟಿನ ಶಕ್ತಿಯನ್ನು ಅನುಭವಿಸಲು ಒಂದು ವೇದಿಕೆಯನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗೆ 93799 01191 ಸಂಖ್ಯೆಗೆ ಸಂಪರ್ಕಿಸಿ.