ಕ್ರೀಡೆ

ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕಕ್ಕೆ 3ನೇ ಜಯ, ಹೆಚ್ಚಿದ ನಾಕೌಟ್ ಆಸೆ

ಪ್ರಸಾದ್​ ಶೆಟ್ಟಿಗಾರ್​

ತಿರುವನಂತಪುರ: ಸಂಘಟಿತ ಬೌಲಿಂಗ್ ಮತ್ತು ಬ್ಯಾಟಿಂಗ್ ನಿರ್ವಹಣೆಯ ಬಲದಿಂದ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ದೇಶೀಯ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಸತತ 2ನೇ ಗೆಲುವು ದಾಖಲಿಸಿ ನಾಕೌಟ್ ಆಸೆ ಹೆಚ್ಚಿಸಿಕೊಂಡಿದೆ. ಬರೋಡ ವಿರುದ್ಧ ಭಾನುವಾರ ನಡೆದ ತನ್ನ 4ನೇ ಲೀಗ್ ಪಂದ್ಯದಲ್ಲಿ ಕರ್ನಾಟಕ ತಂಡ ವಿಜೆಡಿ ನಿಯಮದನ್ವಯ 6 ವಿಕೆಟ್‌ಗಳಿಂದ ಗೆಲುವು ದಾಖಲಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಬರೋಡ ತಂಡ 48.3 ಓವರ್‌ಗಳಲ್ಲಿ 176 ರನ್‌ಗೆ ಸರ್ವಪತನ ಕಂಡಿತು. ಪ್ರತಿಯಾಗಿ ಕರ್ನಾಟಕ ತಂಡ 38.4 ಓವರ್‌ಗಳಲ್ಲಿ 4 ವಿಕೆಟ್‌ಗೆ 150 ರನ್ ಗಳಿಸಿ ಗೆಲುವಿನಿಂದ ಕೇವಲ 27 ರನ್ ದೂರವಿದ್ದಾಗ ಮಳೆ ಅಡಚಣೆ ತಂದಿತು. ಇದರಿಂದಾಗಿ ವಿಜೆಡಿ ನಿಯಮದನ್ವಯ ಫಲಿತಾಂಶ ನಿರ್ಧರಿಸಲಾಯಿತು.

ಕೌಶಿಕ್, ಕಾರ್ಯಪ್ಪ ಕಡಿವಾಣ

ವೇಗಿ ವಿ. ಕೌಶಿಕ್ (38ಕ್ಕೆ 3) ಮತ್ತು ಸ್ಪಿನ್ನರ್ ಕೆಸಿ ಕಾರ್ಯಪ್ಪ (28ಕ್ಕೆ 3) ಬರೋಡಗೆ ಕಡಿವಾಣ ಹಾಕಿದರು. ಮತ್ತೋರ್ವ ಸ್ಪಿನ್ನರ್ ಪ್ರವೀಣ್ ದುಬೆ (31ಕ್ಕೆ 2) ಉತ್ತಮ ಬೆಂಬಲ ಒದಗಿಸಿದರು. ನಾಯಕ ಕೇದಾರ್ ದೇವಧರ್ (31) ಮತ್ತು ಆದಿತ್ಯ ವ್ಮಾೋಡ್ (27) ಮೊದಲ ವಿಕೆಟ್‌ಗೆ 59 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದ್ದರು. ಆದರೆ ಬಳಿಕ ಬರೋಡ ಕುಸಿಯುತ ಸಾಗಿತು. 59 ರನ್ ಅಂತರದಲ್ಲಿ ಕರ್ನಾಟಕ ತಂಡ ಕೊನೇ 7 ವಿಕೆಟ್ ಉರುಳಿಸಿತು.

ಚೇಸಿಂಗ್‌ಗೆ ಸಿದ್ಧಾರ್ಥ್ ನೆರವು

ನಾಯಕ ಮನೀಷ್ ಪಾಂಡೆ (19) ಮತ್ತು ಕರುಣ್ ನಾಯರ್ (0) ರನೌಟ್ ಆಗಿದ್ದರಿಂದ ಕರ್ನಾಟಕ ಆಘಾತ ಎದುರಿಸಿದರೂ, ವನ್‌ಡೌನ್ ಬ್ಯಾಟರ್ ಕೆವಿ ಸಿದ್ಧಾರ್ಥ್ (46*) ಉಪಯುಕ್ತ ಆಟವಾಡಿ ತಂಡದ ಗೆಲುವಿಗೆ ನೆರವಾದರು. ಆರ್. ಸಮರ್ಥ್ (35) ಉತ್ತಮ ಆರಂಭ ನೀಡಿದ್ದರೆ, ವಿಕೆಟ್ ಕೀಪರ್-ಬ್ಯಾಟರ್ ಎಸ್. ಶರತ್ (21*) 5ನೇ ವಿಕೆಟ್‌ಗೆ 47 ರನ್ ಜತೆಯಾಟವಾಡಿ ಸಿದ್ಧಾರ್ಥ್‌ಗೆ ಉತ್ತಮ ಬೆಂಬಲ ಒದಗಿಸಿದ್ದರು.

ಬರೋಡ: 48.3 ಓವರ್‌ಗಳಲ್ಲಿ 176 (ಕೇದಾರ್ ದೇವಧರ್ 31, ವ್ಮಾೋಡ್ 27, ಕೃನಾಲ್ ಪಾಂಡ್ಯ 24, ಭಾನು ಪನಿಯ 40, ವಿ. ಕೌಶಿಕ್ 38ಕ್ಕೆ 3, ಕೆಸಿ ಕಾರ್ಯಪ್ಪ 28ಕ್ಕೆ 3, ಪ್ರವೀಣ್ ದುಬೆ 31ಕ್ಕೆ 2), ಕರ್ನಾಟಕ: 38.4 ಓವರ್‌ಗಳಲ್ಲಿ 4 ವಿಕೆಟ್‌ಗೆ 150 (ಸಮರ್ಥ್ 35, ರೋಹನ್ ಕದಂ 14, ಕೆವಿ ಸಿದ್ಧಾರ್ಥ್ 46*, ಮನೀಷ್ ಪಾಂಡೆ 19, ಕರುಣ್ 0, ಎಸ್. ಶರತ್ 21*, ಕೃನಾಲ್ ಪಾಂಡ್ಯ 27ಕ್ಕೆ 1, ಕಕಡೆ 11ಕ್ಕೆ 1).

ಕರ್ನಾಟಕಕ್ಕೆ ಮುಂದಿನ ಪಂದ್ಯ

ಎದುರಾಳಿ: ಬಂಗಾಳ

ಯಾವಾಗ: ಮಂಗಳವಾರ

ಆರಂಭ: ಬೆಳಗ್ಗೆ 9.00