ರಾಜ್ಯ ಸೀನಿಯರ್ ಈಜು: ಬಸವನಗುಡಿ ಈಜು ಕೇಂದ್ರ ಸಮಗ್ರ ಚಾಂಪಿಯನ್
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಆತಿಥೇಯ ಬಸವನಗುಡಿ ಈಜು ಕೇಂದ್ರದ (ಬಿಎಸಿ) ತಂಡ ಕೆಎಸ್ಎ ರಾಜ್ಯ ಸೀನಿಯರ್ ಈಜು ಚಾಂಪಿಯನ್ಷಿಪ್ನಲ್ಲಿ (State Senior Swimming Championship) ಸಮಗ್ರ ಪ್ರಶಸ್ತಿ ಗೆದ್ದುಕೊಂಡಿದೆ. ಬಿಎಸಿ ತಂಡ ಒಟ್ಟು 545 ಅಂಕ ಕಲೆಹಾಕುವ ಮೂಲಕ ಈ ಸಾಧನೆ ಮಾಡಿದೆ. ಡಾಲ್ಫಿನ್ ಅಕ್ವೆಟಿಕ್ಸ್ ತಂಡ 285 ಅಂಕಗಳೊಂದಿಗೆ ರನ್ನರ್ಅಪ್ ಸ್ಥಾನ ಗಳಿಸಿತು. 3 ದಿನಗಳ ಕೂಟದಲ್ಲಿ ಒಟ್ಟು 17 ಕೂಟ ದಾಖಲೆ ನಿರ್ಮಾಣಗೊಂಡವು.
ಕೊನೇ ದಿನ 7 ದಾಖಲೆ: ಬಸವನಗುಡಿ ಈಜು ಕೇಂದ್ರದಲ್ಲಿ ಬುಧವಾರ ಮುಕ್ತಾಯಗೊಂಡ ಕೂಟದ 3ನೇ ಹಾಗೂ ಕೊನೇ ದಿನ ಮತ್ತೆ 7 ಕೂಟ ದಾಖಲೆಗಳು ರಚನೆಯಾದವು. ಬಿಎಸಿಯ ಮಣಿಕಂಠ ಎಲ್. ಪುರುಷರ 200 ಮೀ. ಬ್ರೆಸ್ಟ್ಸ್ಟ್ರೊಕ್ ವಿಭಾಗದಲ್ಲಿ 2 ನಿಮಿಷ, 21.10 ಸೆಕೆಂಡ್ಗಳಲ್ಲಿ ಈಜಿ ರಾಜ್ಯ ದಾಖಲೆಯೊಂದಿಗೆ ಚಿನ್ನ ಗೆದ್ದರು. ಬಿಎಸಿಯ ಎಸ್. ಲಕ್ಷ್ಯ ಮಹಿಳೆಯರ 200 ಮೀ. ಬ್ರೆಸ್ಟ್ಸ್ಟ್ರೊಕ್ನಲ್ಲಿ 2 ನಿಮಿಷ, 40.86 ಸೆಕೆಂಡ್ಗಳಲ್ಲಿ ಈಜಿ ದಾಖಲೆ ಸಹಿತ ಬಂಗಾರ ಜಯಿಸಿದರು.
ಡಾಲ್ಫಿನ್ ಅಕ್ವೆಟಿಕ್ಸ್ನ ತನಿಷಿ ಗುಪ್ತಾ ಮಹಿಳೆಯರ 50 ಮೀ. ಬಟರ್ಫ್ಲೈ ವಿಭಾಗದಲ್ಲಿ 27.92 ಸೆಕೆಂಡ್ಗಳಲ್ಲಿ ಈಜುವ ಮೂಲಕ ದಾಖಲೆ ಸಹಿತ ಸ್ವರ್ಣ ಒಲಿಸಿಕೊಂಡರು. ಅವರು 2023ರಲ್ಲಿ ನೀನಾ ವೆಂಕಟೇಶ್ (28.37ಸೆ) ನಿರ್ಮಿಸಿದ್ದ ದಾಖಲೆ ಮುರಿದರು.
ಡಾಲ್ಫಿನ್ನ ವಿದಿತ್ ಎಸ್. ಶಂಕರ್ ಪುರುಷರ 50 ಮೀ. ಬ್ರೆಸ್ಟ್ಸ್ಟ್ರೊಕ್ ವಿಭಾಗದಲ್ಲಿ 28.58 ಸೆಕೆಂಡ್ಗಳಲ್ಲಿ ಈಜಿ ಕೂಟ ದಾಖಲೆಯೊಂದಿಗೆ ಚಿನ್ನ ಜಯಿಸಿದರು. ಲಿಖಿತ್ ಎಸ್ಪಿ (28.69ಸೆ) 7 ವರ್ಷಗಳ ಹಿಂದೆ ನಿರ್ಮಿಸಿದ್ದ ದಾಖಲೆಯನ್ನು ವಿದಿತ್ ಮುರಿದರು.
ಬಿಎಸಿಯ ದರ್ಶನ್ ಎಸ್. ಪುರುಷರ 200 ಮೀ. ಬಟರ್ಫ್ಲೈ ವಿಭಾಗದಲ್ಲಿ 2 ನಿಮಿಷ, 2.57 ಸೆಕೆಂಡ್ಗಳಲ್ಲಿ ಈಜಿ, 17 ವರ್ಷಗಳ ಹಿಂದೆ ರೆಹನ್ ಪೂಣಚ (2ನಿ,3.21ಸೆ) ನಿರ್ಮಿಸಿದ್ದ ದಾಖಲೆ ಮುರಿಯುವ ಮೂಲಕ ಸ್ವರ್ಣ ಪದಕಕ್ಕೆ ಕೊರಳೊಡ್ಡಿದರು.
ಇನ್ನು ರಿಲೇ ಸ್ಪರ್ಧೆಯಲ್ಲಿ 2 ದಾಖಲೆ ನಿರ್ಮಾಣಗೊಂಡವು. ಮಹಿಳೆಯರ 4/200 ಮೀ. ಫ್ರೀಸ್ಟೈಲ್ ರಿಲೇಯಲ್ಲಿ ತಿಸ್ಯಾ, ಅದಿತಿ, ವಿದಿತಾ, ಶಿರಿನ್ ಒಳಗೊಂಡ ಬಿಎಸಿ ತಂಡ 8 ನಿಮಿಷ, 57.08 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿ ದಾಖಲೆ ಸಹಿತ ಸ್ವರ್ಣ ಜಯಿಸಿತು. ಮಹಿಳೆಯರ 4/100 ಮೀ. ಮೆಡ್ಲೆ ರಿಲೇಯಲ್ಲಿ ಸುವಾನ, ಲಿನೇಷಾ, ತನಿಷಿ ಗುಪ್ತಾ, ಧಿನಿಧಿ ದೇಸಿಂಘು ಒಳಗೊಂಡ ಡಾಲ್ಫಿನ್ ತಂಡ 4 ನಿಮಿಷ, 25.06 ಸೆಕೆಂಡ್ಗಳಲ್ಲಿ ಈಜಿ ದಾಖಲೆ ಬರೆಯುವ ಮೂಲಕ ಚಿನ್ನ ಒಲಿಸಿಕೊಂಡಿತು.
ದರ್ಶನ್, ತನಿಷಿಗೆ ಪ್ರಶಸ್ತಿ
ಬಿಎಸಿಯ ದರ್ಶನ್ ಎಸ್. ಮತ್ತು ಡಾಲ್ಫಿನ್ ಅಕ್ವೆಟಿಕ್ಸ್ನ ತನಿಷಿ ಗುಪ್ತಾ ಕ್ರಮವಾಗಿ ಪುರುಷರ ಮತ್ತು ಮಹಿಳಾ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಎನಿಸಿದರು. ದರ್ಶನ್ ಕೂಟದಲ್ಲಿ 2 ದಾಖಲೆ ಸಹಿತ ಒಟ್ಟು 43 ಅಂಕ ಕಲೆಹಾಕಿದರೆ, ತನಿಷಿ ಗುಪ್ತಾ 3 ದಾಖಲೆಗಳ ಸಹಿತ 53 ಅಂಕ ಗಳಿಸಿ ಪ್ರಶಸ್ತಿ ಒಲಿಸಿಕೊಂಡರು.