ಕರ್ನಾಟಕ ಕಬಡ್ಡಿ ಪ್ರೀಮಿಯರ್​ ಲೀಗ್​ ಪಂದ್ಯದ ನೋಟ ಏಜೆನ್ಸಿ
ಕ್ರೀಡೆ

ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್: ಉತ್ತರ ಕನ್ನಡ ತಂಡಕ್ಕೆ ಸತತ ಎರಡನೇ ಗೆಲುವು

ಗೆಲುವಿನ ಖಾತೆ ತೆರೆದ ವಿಜಯಪುರ, ಮಂಗಳೂರು ತಂಡಗಳು

ಬೆಂಗಳೂರು: ಉತ್ತರ ಕನ್ನಡ ಸ್ಟಾಲಿಯಾನ್ಸ್ ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ ನಲ್ಲಿ ಸತತ ಎರಡನೇ ಜಯ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಈ ಮಧ್ಯೆ, ಮಂಗಳೂರು ಇಂಡಿಯನ್ಸ್ ಹಾಗೂ ವಿಜಯಪುರ ತಂಡಗಳು ಗೆಲುವಿನ ಖಾತೆ ತೆರೆದಿವೆ.

ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ದಿನದ ಮೂರನೇ ಪಂದ್ಯದಲ್ಲಿ ವಿಜಯಪುರ ಲಯನ್ಸ್ ತಂಡವು 38-34 ಅಂಕಗಳ ಅಂತರದಿಂದ ಬೆಳಗಾವಿ ಬುಲ್ಸ್ ತಂಡಕ್ಕೆ ಆಘಾತ ನೀಡಿತು. ಆರಂಭದಿಂದಲೇ ದಾಳಿಯ ಆರ್ಭಟ ನಡೆಸಿದ ಲಯನ್ಸ್ ಆಟಗಾರರು ಪಂದ್ಯ ಆರಂಭವಾದ ಕೆಲವೇ ನಿಮಿಷಗಳಲ್ಲಿ ಬುಲ್ಸ್ ತಂಡವನ್ನು ಆಲೌಟ್ ಮಾಡಿ ಆಲೌಟ್ ಪಾಯಿಂಟ್ಸ್ ಗಳಿಸಿತು. ಹೀಗಾಗಿ ಮೊದಲಾರ್ಧ ಮುಕ್ತಾಯಕ್ಕೆ18- 11 ಅಂಕಗಳ ಅಂತರಿಂದ ಮೇಲುಗೈ ಸಾಧಿಸಿದ ವಿಜಯಪುರ ತಂಡ, ದ್ವಿತೀಯಾರ್ಧದಲ್ಲಿ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯಿತು. ಈ ಮಧ್ಯೆ, ಬುಲ್ಸ್ ಮೊದಲ ಸೋಲನ್ನು ತಪ್ಪಿಸಿಕೊಳ್ಳಲು ಪುಟಿದೇಳಲು ಯತ್ನಿಸಿತು. ತಂಡದ ಹಿನ್ನಡೆಯ ಅಂತರವನ್ನು 31- 35ಕ್ಕೆ ತಗ್ಗಿಸಿತು. ಆದರೆ ಇದಕ್ಕೆ ಅನುಗುಣವಾಗಿ ಕಾರ್ಯತಂತ್ರ ರೂಪಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಆರಂಭಿಕ ಗೆಲುವಿನ ನಂತರ ಮೊದಲ ಸೋಲಿಗೆ ಬುಲ್ಸ್ ಒಳಗಾಗಬೇಕಾಯಿತು.

ಉತ್ತರ ಕನ್ನಡ ತಂಡಕ್ಕೆ 2ನೇ ಜಯ: ಜಿದ್ದಾಜಿದ್ದಿನ ಪಂದ್ಯದಲ್ಲಿ ಮೈಸೂರು ಮಹಾಸೇನೆ ತಂಡವನ್ನು33-32 ಅಂಕಗಳ ಅಂತರದಿಂದ ಬಗ್ಗು ಬಡಿದ ಉತ್ತರ ಕನ್ನಡ ಸ್ಟಾಲಿಯಾನ್ಸ್ ತಂಡ ಲೀಗ್ ನಲ್ಲಿ ಸತತ ಎರಡನೇ ಜಯ ಗಳಿಸಿ, ಒಟ್ಟು 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿತು.

ಪಂದ್ಯದ ಮೊದಲ ಅವಧಿಯಲ್ಲಿ ಮೈಸೂರು ತಂಡ 17- 11 ಅಂಕಗಳಿಂದ ಮೇಲುಗೈ ಸಾಧಿಸಿದರೆ, ದ್ವಿತೀಯಾರ್ಧದಲ್ಲಿ ಉತ್ತರ ಕನ್ನಡ ತಂಡವು 22 -14ರಲ್ಲಿ ತಿರುಗೇಟು ನೀಡಿತು. ಎರಡೂ ತಂಡಗಳು ಟ್ಯಾಕಲ್ ಮತ್ತು ರೇಡಿಂಗ್ ನಲ್ಲಿ ಆಕ್ರಮಣಕಾರಿ ಆಟವಾಡಿದರೂ ಉತ್ತರ ಕನ್ನಡ ತಂಡ ಕೊನೆಯ ಕ್ಷಣದ ಒತ್ತಡವನ್ನು ಮೆಟ್ಟಿನಿಂತಿತು. ಸ್ಫೂರ್ತಿದಾಯಕ ಪ್ರದರ್ಶನ ನೀಡಿದ ಹೊರತಾಗಿಯೂ ಸತತ 2ನೇ ಸೋಲಿಗೆ ಗುರಿಯಾದ ಮೈಸೂರು ತಂಡ ಖಾತೆ ತೆರೆಯಲು ವಿಫಲಗೊಂಡಿತು.

ಖಾತೆ ತೆರೆದ ಮಂಗಳೂರು ಇಂಡಿಯನ್ಸ್: ಮಂಗಳೂರು ಇಂಡಿಯನ್ಸ್ ತಂಡ ಕರ್ನಾಟಕ ಕಬಡ್ಡಿ ಪ್ರೀಮಯಿರ್ ಲೀಗ್ ನ ತನ್ನ ಎರಡನೇ ಪಂದ್ಯದಲ್ಲಿ ಗೆಲುವಿನ ಲಯಕ್ಕೆ ಮರಳುವ ಮೂಲಕ ಲೀಗ್ ನಲ್ಲಿ ಖಾತೆ ತೆರೆದಿದೆ.

ಗುರುವಾರ ಹೊಯ್ಸಳ ಎಂಪೈರ್ ಹಾಸನ ತಂಡದ ವಿರುದ್ಧ 8 ಅಂಕಗಳ ಅಂತರದಿಂದ ಪರಾಭವಗೊಂಡಿದ್ದ ಮಂಗಳೂರು ತಂಡ, ಬೆಂಗಳೂರು ಬಿಸನ್ಸ್ ವಿರುದ್ಧ 33-32 ಅಂಕಗಳ ಅಂತರದಿಂದ ರೋಚಕ ಗೆಲುವು ಸಾಧಿಸಿತು. ಹೀಗಾಗಿ ಮೊದಲೆರಡು ಪಂದ್ಯಗಳಲ್ಲಿ ಸೋಲು –ಗೆಲುವು ಕಂಡ ಮಂಗಳೂರು ಸದ್ಯ 5 ಅಂಕಗಳನ್ನು ಕಲೆಹಾಕಿದೆ.

ಮೊದಲಾರ್ಧಕ್ಕೆ 21-14ರಲ್ಲಿ ಮುನ್ನಡೆ ಸಾಧಿಸಿದ ಮಂಗಳೂರು ತಂಡ, ದ್ವಿತೀಯಾರ್ಧದಲ್ಲೂ ಇದೇ ಲಯವನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. ಬೆಂಗಳೂರು ಆಟಗಾರರು ದ್ವಿತೀಯಾರ್ಧದಲ್ಲಿ ಪುಟಿದೇಳಲು ಯತ್ನಿಸಿದರೂ ಇಂಡಿಯನ್ಸ್ ಕಾರ್ಯತಂತ್ರದ ಮುಂದೆ ಮಂಕಾಯಿತು. ಕೊನೆಯ ಕ್ಷಣದ ಒತ್ತಡವನ್ನು ಮೆಟ್ಟಿನಿಂದ ಮಂಗಳೂರು 33-32ರಲ್ಲಿ ರೋಚಕ ಜಯ ಗಳಿಸಿತು.

ಅ.3ರಂದು ನಡೆಯಲಿರುವ ಪಂದ್ಯಗಳು: ಅಕ್ಟೋಬರ್ 3ರಂದು ಹೊಯ್ಸಳ ಎಂಪೈರ್ ಹಾಸನ್ ಮತ್ತು ಮೈಸೂರು ಮಹಾಸೇನೆ (ಸಂಜೆ 6ಕ್ಕೆ), ಬೆಂಗಳೂರು ಬಿಸನ್ಸ್ ಮತ್ತು ಚಾಲುಕ್ಯಸೇನೆ ಬಾಗಲಕೋಟೆ (ಸಂಜೆ 7ಕ್ಕೆ), ಬೆಳಗಾವಿ ಬುಲ್ಸ್ (ರಾತ್ರಿ 8ಕ್ಕೆ) ಮತ್ತು ಮಂಗಳೂರು ಇಂಡಿಯನ್ಸ್ ಮತ್ತು ವಿಜಯಪುರ ಲಯನ್ಸ್(ರಾತ್ರಿ 9ಕ್ಕೆ) ನಡೆಯಲಿವೆ. ಪಂದ್ಯಗಳು ಟಿವಿ 5ನಲ್ಲಿ ನೇರ ಪ್ರಸಾರವಾಗಲಿದೆ.