ಹೊಯ್ಸಳ ಎಂಪೈರ್‌ vs ಬೆಳಗಾವಿ ಬುಲ್ಸ್‌ ವಿಜಯವಾಣಿ ಚಿತ್ರ
ಕ್ರೀಡೆ

ಕರ್ನಾಟಕ ಕಬಡ್ಡಿ ಪ್ರೀಮಿಯರ್‌ ಲೀಗ್‌: ಸೆಮಿಫೈನಲ್​ಗೆ ಹಾಸನ, ಮೈಸೂರು ಲಗ್ಗೆ

ಹೊಯ್ಸಳ ಎಂಪೈರ್‌ ಹಾಸನ, ಮೈಸೂರು ಮಹಾಸೇನೆ, ಮಂಗಳೂರು ಇಂಡಿಯನ್ಸ್ ಮತ್ತು ಉತ್ತರ ಕನ್ನಡ ಸ್ಟಾಲಿಯಾನ್ಸ್ ತಂಡಗಳು ಕರ್ನಾಟಕ ಕಬಡ್ಡಿ ಪ್ರೀಮಿಯರ್‌ ಲೀಗ್‌ನ ಉದ್ಘಾಟನಾ ಆವೃತ್ತಿಯಲ್ಲಿ ಸೆಮಿಫೈನಲ್‌ ಪ್ರವೇಶಿಸುವಲ್ಲಿ ಯಶಸ್ವಿಯಾಗಿವೆ. ಗುರುವಾರ ಎರಡು ಸೆಮಿಫೈನಲ್, ಫೈನಲ್‌ ಹಣಾಹಣಿ ನಡೆಯಲಿದೆ.

ಬೆಂಗಳೂರು: ಹೊಯ್ಸಳ ಎಂಪೈರ್ ಹಾಸನ ಮತ್ತು ಮೈಸೂರು ಮಹಾಸೇನೆ ತಂಡಗಳು ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ ಉದ್ಘಾಟನಾ ಆವೃತ್ತಿಯಲ್ಲಿ ಸೆಮಿಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿವೆ. ಬಾಗಲಕೋಟೆ ತಂಡವನ್ನು ಮಣಿಸಿದ ಮಂಗಳೂರು ಇಂಡಿಯನ್ಸ್ ಸಹ ಉಪಾಂತ್ಯಕ್ಕೆ ಲಗ್ಗೆಹಾಕಿದೆ. ಉತ್ತರ ಕನ್ನಡ ಸ್ಟಾಲಿಯಾನ್ಸ್ ತನ್ನ ಕೊನೆಯ ಪಂದ್ಯದಲ್ಲಿ ಬೆಂಗಳೂರು ತಂಡವನ್ನು 35-24 ಅಂಕಗಳ ಅಂತರದಿಂದ ಗೆದ್ದು ನಾಲ್ಕರ ಘಟ್ಟವನ್ನು ಖಚಿಪಡಿಸಿಕೊಂಡಿತು. ಎರಡು ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಗುರುವಾರ ನಡೆಯಲಿವೆ.

ಕೋರಮಂಗಲದ ಒಳಗಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಆರಂಭಿಕ ಪಂದ್ಯದಲ್ಲಿ ಹೊಯ್ಸಳ ಎಂಪೈರ್ ತಂಡ 8 ಅಂಕಗಳ ಅಂತರದಿಂದ (31-23) ಬೆಳಗಾವಿ ಬುಲ್ಸ್ ತಂಡವನ್ನು ಮಣಿಸಿತು. ಈ ಗೆಲುವಿನೊಂದಿಗೆ ಆಡಿದ ಒಟ್ಟು 7 ಪಂದ್ಯಗಳ ಪೈಕಿ 6ನೇ ಜಯ ಗಳಿಸಿದ ಎಂಪೈರ್ ತಂಡ ಒಟ್ಟು 30 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಿಯಾಗಿ ಹೊರಹೊಮ್ಮಿತು. ಸತತ ನಾಲ್ಕನೇ ಹಾಗೂ ಐದನೇ ಸೋಲಿಗೆ ಒಳಗಾದ ಬೆಳಗಾವಿ ಬುಲ್ಸ್ ತಂಡ ಅಂಕಪಟ್ಟಿಯ 7ನೇ ತಂಡವಾಗಿ ಅಭಿಯಾನ ಮುಗಿಸಿತು. ಪಂದ್ಯದ ಮೊದಲಾರ್ಧಕ್ಕೆ 10-13ರಲ್ಲಿ ಅಲ್ಪ ಹಿನ್ನಡೆಯಲ್ಲಿದ್ದ ಬೆಳಗಾವಿ, ದ್ವಿತೀಯಾರ್ಧದಲ್ಲಿ ಸಂಘನಾತ್ಮಕ ಹೋರಾಟ ನೀಡಲು ಸಾಧ್ಯವಾಗಲಿಲ್ಲ. ಹೀಗಾಗಿ ಸಸತ ಸೋಲುಗಳಿಂದ ಹೊರಬರಲು ವಿಫಲಗೊಂಡಿತು. ದ್ವಿತೀಯಾರ್ಧದಲ್ಲಿ ಪ್ರಬಲ ಪೈಪೋಟಿ ಎದುರಿಸಿದ ಹಾಸನ, ಎರಡನೇ ಅವಧಿಯಲ್ಲಿನಾಲ್ಕು ಬೋನಸ್ ಅಂಕಗಳ ಜತೆಗೆ ನಾಲ್ಕು ಆಲೌಟ್ ಅಂಕಗಳನ್ನು ಗಳಿಸಿ ಪ್ರಭುತ್ವ ಮೆರೆಯಿತು.

ಮಹಾಸೇನೆಗೆ ಮಂಡಿಯೂರಿದ ವಿಜಯಪುರ: ದಿನದ ದ್ವಿತೀಯ ಪಂದ್ಯದಲ್ಲಿ ಮೈಸೂರು ಮಹಾಸೇನೆ ತಂಡ 36-28 ಅಂಕಗಳ ಅಂತರದಿಂದ ವಿಜಯಪುರ ಲಯನ್ಸ್ ತಂಡವನ್ನು ಮಣಿಸಿ ಎರಡನೇ ತಂಡವಾಗಿ ಅಗ್ರ ನಾಲ್ಕರ ಘಟ್ಟಕ್ಕೆ ಮುನ್ನಡೆಯುವಲ್ಲಿ ಯಶಸ್ವಿಯಾಯಿತು.

ಪಂದ್ಯದ ಆರಂಭದಲ್ಲಿ11-1ರಲ್ಲಿ ಮುನ್ನಡೆಯಲ್ಲಿದ್ದ ಮೈಸೂರು ತಂಡ ನಂತರ ವಿರಾಮಕ್ಕೆ 22-14ರಲ್ಲಿ ಮುನ್ನಡೆ ಕಂಡುಕೊಂಡಿತು. ದ್ವಿತೀಯಾರ್ಧದಲ್ಲಿ ಲಯನ್ಸ್ ಆಟಗಾರರು ಪುಟಿದೇಳುವ ಯತ್ನ ಮಾಡಿದರು. ಆದರೆ ಮೈಸೂರು ಆಟಗಾರರು ಛಲಬಿಡದೆ ನಿರಂತರ ಮುನ್ನಡೆ ಸಾಧಿಸಿ, ಎದುರಾಳಿ ತಂಡದ ಮೇಲೆ ಒತ್ತಡ ಹೇರಿದರು. ಪಂದ್ಯ ಉಭಯ ಅವಧಿಗಳಲ್ಲಿತಲಾ ಎರಡು ಬಾರಿ ಎರಡೂ ತಂಡಗಳು ಆಲೌಟ್ ಮಾಡಿ ಪಂದ್ಯದ ರೋಚಕತೆಯನ್ನು ಹಿಗ್ಗಿಸಿದವು. ಆದರೆ ಸ್ಥಿರ ಪ್ರದರ್ಶನ ನೀಡಿದ ಮೈಸೂರು 8 ಅಂಕಗಳಿಂದ ಲಯನ್ಸ್ ತಂಡದ ಹೋರಾಟವನ್ನು ಕೊನೆಗೊಳಿಸಿತು. ಈ ಜಯದೊಂದಿಗೆ ಆಡಿದ 7 ಪಂದ್ಯಗಳ ಪೈಕಿ 4 ಜಯ ಮತ್ತು 3 ಸೋಲು ಕಂಡ ಮೈಸೂರು ತಂಡ 20 ಅಂಕಗಳೊಂದಿಗೆ ಸೆಮಿಫೈನಲ್ಗೆ ಲಗ್ಗೆ ಹಾಕಿತು. ಅತ್ತ ವಿಜಯಪುರ ಲಯನ್ಸ್ ತಂಡ ಆಡಿದ 7 ಪಂದ್ಯಗಳ ಪೈಕಿ 3 ಗೆಲುವು ಮತ್ತು 4 ಸೋಲುಗಳೊಂದಿಗೆ 15 ಅಂಕಗಸಲಷ್ಟೇ ಶಕ್ತಗೊಂಡಿತು.

3ನೇ ಪಂದ್ಯದಲ್ಲಿ ಮಂಗಳೂರು ತಂಡಕ್ಕೆ ರೋಚಕ ಜಯ

ಸುಶೀಲ್ ಕಾಂಬ್ರೇಕರ್ ಅವರ ಅತ್ಯುತ್ತಮ ರೇಡಿಂಗ್ನಿಂದಾಗಿ ಮಂಗಳೂರು ಇಂಡಿಯನ್ಸ್ ತಂಡ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಚಾಲುಕ್ಯಸೇನೆ ಬಾಗಲಕೋಟೆ ತಂಡವನ್ನು ಮಣಿಸಿ 47-37 ಅಂಕಗಳಿಂದ ಮಣಿಸಿ ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆ ಹಾಕಿತು.

ಆಡಿದ 7 ಪಂದ್ಯಗಳ ಪೈಕಿ 4 ಜಯ ಹಾಗೂ 3 ಸೋಲು ಕಂಡ ಮಂಗಳೂರು ಒಟ್ಟು 20 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿನಾಲ್ಕನೇ ಸ್ಥಾನ ಪಡೆಯಿತು. ಇಷ್ಟೇ ಅಂಕಗಳನ್ನು ಹೊಂದಿದ್ದರೂ ಸಹ ಬಾಗಲಕೋಟೆ ತಂಡ ಸ್ಕೋರ್ ಕೊರತೆಯಿಂದಾಗಿ ಐದನೇ ಸ್ಥಾನಕ್ಕೆ ಕುಸಿಯಿತು.

ಪಂದ್ಯದ ಪೂರ್ವಾರ್ಧಕ್ಕೆ 17-14ರಲ್ಲಿ ಮುನ್ನಡೆಯಲ್ಲಿದ್ದ ಮಂಗಳೂರು ನಂತರ ಎದುರಾಳಿಯ ದಿಟ್ಟ ಹೋರಾಟದಿಂದ ಪೂರ್ಣಾವಧಿಗೆ ಉಭಯ ತಂಡಗಳು 33-33ರಲ್ಲಿ ಸಮಬಲ ಸಾಧಿಸಿದವು. ಇದರೊಂದಿಗೆ ಹಾಲಿ ಟೂರ್ನಿಯಲ್ಲಿ ಎರಡನೇ ಪಂದ್ಯ ಟೈ ಆದಂತಾಯಿತು. ನಂತರ ಫಲಿತಾಂಶಕ್ಕಾಗಿ ನಡೆದ 5 ರೇಡ್ಗಳಲ್ಲಿ ಇಂಡಿಯನ್ಸ್ ಮೇಲುಗೈ ಸಾಧಿಸಿತು.

ಸೆಮಿಫೈನಲ್​ಗಳು

ಹೊಯ್ಸಳ ಎಂಪೈರ್ ಹಾಸನ ಮತ್ತು ಮಂಗಳೂರು ಇಂಡಿಯನ್ಸ್ (ಸಂಜೆ 6ಕ್ಕೆ)

ಮೈಸೂರು ಮಹಾಸೇನೆ ಮತ್ತು ಉತ್ತರ ಕನ್ನಡ ಸ್ಟಾಲಿಯಾನ್ಸ್ (ಸಂಜೆ 7ಕ್ಕೆ)

ಫೈನಲ್ (ರಾತ್ರಿ 9ಕ್ಕೆ)