ಕ್ರೀಡೆ

ಇಂದಿನಿಂದ ಕರ್ನಾಟಕದ ಐಪಿಎಲ್​; ಮಹಾರಾಜ ಟ್ರೋಫಿಯಲ್ಲಿ ಬೆಂಗಳೂರು-ಗುಲ್ಬರ್ಗಾ ನಡುವೆ ಉದ್ಘಾಟನಾ ಪಂದ್ಯ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

"ಕರ್ನಾಟಕದ ಐಪಿಎಲ್​' ಎಂದೇ ಕರೆಯಬಹುದಾದ ಮಹಾರಾಜ ಟ್ರೋಫಿ ಕೆಎಸ್​ಸಿಎ ಟಿ20 ಟೂರ್ನಿಗೆ ಗುರುವಾರ ಚಾಲನೆ ಸಿಗಲಿದೆ. ಬೆಂಗಳೂರು ಬ್ಲಾಸ್ಟರ್ಸ್​ ಹಾಗೂ ಗುಲ್ಬರ್ಗಾ ಮಿಸ್ಟಿಕ್ಸ್​ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಸೆಣಸಲಿವೆ. ಶಿವಮೊಗ್ಗ ಲಯನ್ಸ್​ ಹಾಗೂ ಹಾಲಿ ರನ್ನರ್​ ಅಪ್​ ಮೈಸೂರು ವಾರಿಯರ್ಸ್​ ಮೊದಲ ದಿನದ 2ನೇ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ. ಹಾಲಿ ಚಾಂಪಿಯನ್​ ಹುಬ್ಬಳ್ಳಿ ಟೈಗರ್ಸ್​ ತಂಡ ಆಗಸ್ಟ್​ 16ರಂದು ಮಂಗಳೂರು ಡ್ರಾಗನ್ಸ್​ ತಂಡವನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ. ಈ ಬಾರಿ ಟೂರ್ನಿಯ ಎಲ್ಲ ಪಂದ್ಯಗಳು ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ನಡೆಯಲಿವೆ. ಯುವ ಆಟಗಾರರಿಗೆ ಐಪಿಎಲ್ ಫ್ರಾಂಚೈಸಿಗಳ ಗಮನಸೆಳೆಯಲು ಈ ಟೂರ್ನಿ ಉತ್ತಮ ವೇದಿಕೆ ಎನಿಸಿದೆ. ಟೀಮ್​ ಇಂಡಿಯಾದ ಮಾಜಿ ಕೋಚ್​ ಹಾಗೂ ದಿಗ್ಗಜ ಬ್ಯಾಟರ್​ ರಾಹುಲ್​ ದ್ರಾವಿಡ್​ ಅವರ ಪುತ್ರ ಸಮಿತ್​ ದ್ರಾವಿಡ್​ (ಮೈಸೂರು ವಾರಿಯರ್ಸ್​) ಈ ಬಾರಿ ಮಹಾರಾಜ ಟ್ರೋಫಿಯ ವಿಶೇಷ ಆಕರ್ಷಣೆ ಎನಿಸಿದ್ದಾರೆ.

ತಂಡ: 6

ಪಂದ್ಯ: 33

ದಿನ: 18

ಸ್ಟಾರ್​ ಕ್ರಿಕೆಟಿಗರ ಹಾಜರಿ

ಟೀಮ್​ ಇಂಡಿಯಾ ಬ್ಯಾಟರ್​ ಕೆಎಲ್​ ರಾಹುಲ್​ ಹೊರತಾಗಿ ರಾಜ್ಯದ ಎಲ್ಲ ಪ್ರಮುಖ ಆಟಗಾರರು ಈ ಬಾರಿ ಮಹಾರಾಜ ಟ್ರೋಫಿಯಲ್ಲಿ ಆಡಲಿದ್ದಾರೆ. ಮೈಸೂರು ತಂಡದಲ್ಲಿರುವ ವೇಗಿ ಪ್ರಸಿದ್ಧಕೃಷ್ಣ ಪಾಲ್ಗೊಳ್ಳುವಿಕೆ ಮಾತ್ರ ಫಿಟ್ನೆಸ್​ಅನ್ನು ಅವಲಂಬಿಸಿದೆ. ಉಳಿದಂತೆ ಮಯಾಂಕ್​ ಅಗರ್ವಾಲ್​, ಮನೀಷ್​ ಪಾಂಡೆ, ದೇವದತ್​ ಪಡಿಕಲ್​, ಕೆ. ಗೌತಮ್​, ವೈಶಾಕ್​ ವಿಜಯ್​ಕುಮಾರ್​ ಮುಂತಾದ ಎಲ್ಲ ಪ್ರಮುಖ ಆಟಗಾರರು ಕಣಕ್ಕಿಳಿಯಲಿದ್ದಾರೆ.

ತಂಡಗಳು

*ಹುಬ್ಬಳ್ಳಿ ಟೈಗರ್ಸ್​

ನಾಯಕ: ಮನೀಷ್​ ಪಾಂಡೆ

ಪ್ರಮುಖ ಆಟಗಾರರು: ವಿದ್ವತ್​ ಕಾವೇರಪ್ಪ, ಕೆಸಿ ಕಾರ್ಯಪ್ಪ, ರಿಷಿ ಬೋಪಣ್ಣ, ಮೊಹಮದ್​ ತಾಹ.

*ಮೈಸೂರು ವಾರಿಯರ್ಸ್​

ನಾಯಕ: ಕರುಣ್​ ನಾಯರ್​

ಪ್ರಮುಖ ಆಟಗಾರರು: ಕೆ. ಗೌತಮ್​, ಪ್ರಸಿದ್ಧ ಕೃಷ್ಣ, ಜೆ. ಸುಚಿತ್​, ಮನೋಜ್​ ಭಾಂಡಗೆ.

*ಶಿವಮೊಗ್ಗ ಲಯನ್ಸ್​

ನಾಯಕ: ನಿಹಾಲ್​ ಉಲ್ಲಾಳ್​

ಪ್ರಮುಖ ಆಟಗಾರರು: ಅಭಿನವ್​ ಮನೋಹರ್​, ವಿ. ಕೌಶಿಕ್​, ಟಿ. ಪ್ರದಿಪ್​, ಹಾರ್ದಿಕ್​ ರಾಜ್​.

*ಗುಲ್ಬರ್ಗಾ ಮಿಸ್ಟಿಕ್ಸ್​

ನಾಯಕ: ದೇವದತ್​ ಪಡಿಕ್ಕಲ್​

ಪ್ರಮುಖ ಆಟಗಾರರು: ವೈಶಾಕ್​ ವಿಜಯ್​ಕುಮಾರ್​, ಲವನೀತ್​ ಸಿಸೋಡಿಯಾ, ಪ್ರವಿಣ್​ ದುಬೆ, ಸ್ಮರಣ್​ ಆರ್​.

*ಬೆಂಗಳೂರು ಬ್ಲಾಸ್ಟರ್ಸ್​

ನಾಯಕ: ಮಯಾಂಕ್​ ಅಗರ್ವಾಲ್​

ಪ್ರಮುಖ ಆಟಗಾರರು: ಶುಭಾಂಗ್​ ಹೆಗ್ಡೆ, ಅನಿರುದ್ಧ ಜೋಶಿ, ಪ್ರತಿಕ್​ ಜೈನ್​, ಚೇತನ್​ ಎಲ್​ಆರ್​.

*ಮಂಗಳೂರು ಡ್ರ್ಯಾಗನ್ಸ್​

ನಾಯಕ: ಶ್ರೇಯಸ್​ ಗೋಪಾಲ್​

ಪ್ರಮುಖ ಆಟಗಾರರು: ಸಿದ್ಧಾರ್ಥ್​ ಕೆವಿ, ನಿಕಿನ್​ ಜೋಸ್​, ರೋಹನ್​ ಪಾಟೀಲ್​, ಅಭಿಲಾಷ್​ ಶೆಟ್ಟಿ.

ಟೂರ್ನಿ ಸ್ವರೂಪ

ಟೂರ್ನಿಯಲ್ಲಿ ಆಡುವ ಎಲ್ಲ 6 ತಂಡಗಳು ಲೀಗ್​ ಹಂತದಲ್ಲಿ ತಲಾ 2 ಬಾರಿ ಪರಸ್ಪರ ಮುಖಾಮುಖಿ ಆಗಲಿವೆ. ಆಗಸ್ಟ್​ 29ರವರೆಗೆ ಲೀಗ್​ ಪಂದ್ಯಗಳು ನಡೆಯಲಿದ್ದು, ಪ್ರತಿದಿನ 2 ಲೀಗ್​ ಪಂದ್ಯಗಳು ನಡೆಯಲಿವೆ. ಕೊನೆಗೆ ಅಂಕಪಟ್ಟಿಯ ಅಗ್ರ 4 ತಂಡಗಳು ಉಪಾಂತ್ಯಕ್ಕೆ ಅರ್ಹತೆ ಪಡೆಯಲಿವೆ. ಆಗಸ್ಟ್​ 30, 31ರಂದು ಸೆಮಿೈನಲ್ಸ್​ ಹಾಗೂ ಸೆಪ್ಟೆಂಬರ್​ 1ಕ್ಕೆ ೈನಲ್​ ನಿಗದಿಯಾಗಿದೆ.

*35: ಟೂರ್ನಿಯು ಒಟ್ಟು 35 ಲಕ್ಷ ರೂ. ಬಹುಮಾನ ಮೊತ್ತ ಒಳಗೊಂಡಿದ್ದು, ವಿಜೇತರು 15 ಲಕ್ಷ ರೂ., ರನ್ನರ್​ ಅಪ್​ 10 ಲಕ್ಷ ರೂ. ಪಡೆಯಲಿದ್ದಾರೆ. ಉಳಿದ ಮೊತ್ತವನ್ನು 3-4ನೇ ಸ್ಥಾನ ಪಡೆದ ತಂಡಗಳಿಗೆ ಹಂಚಲಾಗುತ್ತದೆ.

ಇಂದಿನ ಪಂದ್ಯಗಳು

ಬೆಂಗಳೂರು-ಗುಲ್ಬರ್ಗಾ

ಆರಂಭ: ಮಧ್ಯಾಹ್ನ 3.00

ಶಿವಮೊಗ್ಗ-ಮೈಸೂರು

ಆರಂಭ: ರಾತ್ರಿ 7.00

*ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​ 2, ಸ್ಟಾರ್​ ಸ್ಪೋರ್ಟ್ಸ್​ ಕನ್ನಡ; ಫ್ಯಾನ್​ ಕೋಡ್​ (ಒಟಿಟಿ).