ಕ್ರೀಡೆ

ಕರ್ನಾಟಕ-ಹರಿಯಾಣ ನಿರ್ಣಾಯಕ ಫೈಟ್​: ಐದು ವರ್ಷಗಳ ಬಳಿಕ ರಾಹುಲ್​ ಕಣಕ್ಕೆ

ಬೆಂಗಳೂರು: ಪಂಜಾಬ್​ ವಿರುದ್ಧ ಇನಿಂಗ್ಸ್​ ಗೆಲುವಿನೊಂದಿಗೆ ಬೋನಸ್​ ಸಹಿತ 7 ಅಂಕ ಕಲೆಹಾಕಿ ನಾಕೌಟ್​ ಹಂತಕ್ಕೇರುವ ಆಸೆಗೆ ಹೆಚ್ಚಿನ ಬಲ ತುಂಬಿಸಿಕೊಂಡಿರುವ ಕರ್ನಾಟಕ ತಂಡ ಪ್ರತಿಷ್ಠಿತ ದೇಶೀಯ ಟೂರ್ನಿ ರಣಜಿ ಟ್ರೋಫಿಯ ತನ್ನ ಏಳನೇ ಹಾಗೂ ಅಂತಿಮ ಲೀಗ್​ ಪಂದ್ಯದಲ್ಲಿ ಹರಿಯಾಣ ಎದುರು ಸೆಣಸಲಿದೆ. ಗುರುವಾರ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ನಿರ್ಣಾಯಕ ಪಂದ್ಯದಲ್ಲಿ ಮಯಾಂಕ್​ ಅಗರ್ವಾಲ್​ ಪಡೆ ಬೋನಸ್​ ಅಂಕದ ಒತ್ತಡದಲ್ಲಿ ಕಣಕ್ಕಿಳಿಯಲಿದೆ. ಟೀಮ್​ ಇಂಡಿಯಾ ಬ್ಯಾಟರ್​ ಕೆಎಲ್​ ರಾಹುಲ್​ ಸೇರ್ಪಡೆ ರಾಜ್ಯ ತಂಡದ ಬಲ ಹೆಚ್ಚಿಸಿದೆ.

ಟೂರ್ನಿಯ ಸಿ ಗುಂಪಿನ ಕ್ವಾರ್ಟರ್​ಫೈನಲ್​ ರೇಸ್​ನಲ್ಲಿ ಕರ್ನಾಟಕ, ಹರಿಯಾಣ ಹಾಗೂ ಕೇರಳ ತಂಡಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಹಾಲಿ ರಣಜಿ ಟ್ರೋಫಿಯ ಮೊದಲ ಚರಣದಲ್ಲಿ ಎಂಟು ಬಾರಿಯ ಚಾಂಪಿಯನ್​ ಕರ್ನಾಟಕ ತಂಡದ ನಿರ್ವಹಣೆ ತೃಪ್ತಿದಾಯಕವಾಗಿರಲಿಲ್ಲ. ಆದರೆ ವಿಜಯ್​ ಹಜಾರೆ ಟ್ರೋಫಿ ಜಯಿಸುವ ಮೂಲಕ ಲಯ ಕಂಡುಕೊಂಡಿರುವ ಕರ್ನಾಟಕ ತಂಡ ಭರ್ಜರಿ ಕಂಬ್ಯಾಕ್​ ಮಾಡಿದ್ದು, ಜತೆಗೆ ಎರಡನೇ ಚರಣದಲ್ಲಿ ಆತ್ಮವಿಶ್ವಾಸ ವೃದ್ದಿಸಿಕೊಂಡಿದೆ. ಯುವ&ಅನುಭವಿ ಆಟಗಾರರ ಕಾಂಬಿನೇಷನ್​ನಲ್ಲಿ ಮಯಾಂಕ್​ ಪಡೆ ಸದ್ಯ ಭರ್ಜರಿ ಾಮ್​ರ್ನಲ್ಲಿರುವುದು ನಾಕೌಟ್​ ರೇಸ್​ನಲ್ಲಿ ಸವಾಲು ಜೀವಂತವಿರಿಸಿದೆ. ಗುಂಪಿನ ಅಗ್ರಸ್ಥಾನಿ ಹರಿಯಾಣ ಎದುರು ಬೋನಸ್​ ಅಂಕ ಕಲೆಹಾಕುವುದು ಕರ್ನಾಟಕ ತಂಡಕ್ಕೆ ನೈಜ ಸವಾಲೆನಿಸಿದೆ. ಹಿಂದಿನ ಎರಡು ಪಂದ್ಯಗಳಲ್ಲಿ ಸತತ ಎರಡು ಶತಕ ಬಾರಿಸಿರುವ ಆರ್​.ಸ್ಮರಣ್​ ಕರ್ನಾಟಕ ತಂಡದ ಬ್ಯಾಟಿಂಗ್​ ವಿಭಾಗಕ್ಕೆ ಬಲ ತುಂಬಿದ್ದಾರೆ.

ಮಯಾಂಕ್​ ಅಗರ್ವಾಲ್​ ವಿಜಯ್​ ಹಜಾರೆ ಟ್ರೋಫಿಯ ಲಯವನ್ನು ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ. ಎಲ್​ ಶ್ರೀಜಿತ್​, ನಿಕಿನ್​ ಜೋಸ್​ ಸಹ ಉತ್ತಮ ಲಯದಲ್ಲಿರುವುದು ಬ್ಯಾಟಿಂಗ್​ ವಿಭಾಗಕ್ಕೆ ಶಕ್ತಿ ತುಂಬಿದೆ. ಬೌಲಿಂಗ್​ನಲ್ಲಿ ವಿ. ಕೌಶಿಕ್​, ಅಭಿಲಾಷ್​ ಶೆಟ್ಟಿ, ಶ್ರೇಯಸ್​ ಗೋಪಾಲ್​ ಜತೆಗೆ ವಿದ್ವತ್​ ಕಾವೇರಪ್ಪ ವೈವಿಧ್ಯತೆ ತುಂಬಿದ್ದಾರೆ.

ಇತ್ತ ಹರಿಯಾಣ ತಂಡ ಹಿಂದಿನ ಲೀಗ್​ ಪಂದ್ಯದಲ್ಲಿ ಬಂಗಾಳ ಎದುರು 280 ರನ್​ಗಳ ಗೆಲುವಿನೊಂದಿಗೆ ಗುಂಪಿನಲ್ಲಿ ಅಗ್ರಸ್ಥಾನ ಸಂಪಾದಿಸಿ ಆತ್ಮವಿಶ್ವಾಸ ವೃದ್ಧಿಸಿಕೊಂಡಿದೆ. ಹರಿಯಾಣ ಪರ ಹಿಮಾಂಶು ರಾಣಾ ಆಡಿರುವ ಆರು ಪಂದ್ಯಗಳಲ್ಲಿ 419 ರನ್​ ಕಲೆಹಾಕಿದ್ದು, ಜಯಂತ್​ ಯಾದವ್​ 23 ವಿಕೆಟ್​ ಕಬಳಿಸಿ ಬೌಲಿಂಗ್​ ವಿಭಾಗಕ್ಕೆ ಶಕ್ತಿ ತುಂಬಿದ್ದಾರೆ. ಸಂಟಿತ ನಿರ್ವಹಣೆ ತಂಡದ ಯಶಸ್ಸಿಗೆ ಪ್ರಮುಖ ಕಾರಣ ಎನಿಸಿದೆ.

ಮೂರನೇ ಕ್ರಮಾಂಕದಲ್ಲಿ ರಾಹುಲ್​!

ದೇಶೀಯ ಕ್ರಿಕೆಟ್​ನಲ್ಲಿ ಕಡ್ಡಾಯವಾಗಿ ಆಡಬೇಕೆಂಬ ಬಿಸಿಸಿಐ ಮಾರ್ಗಸೂಚಿಯನ್ವಯ ಬ್ಯಾಟರ್​ ಕೆಎಲ್​ ರಾಹುಲ್​ 5 ವರ್ಷಗಳ ಬಳಿಕ ರಣಜಿ ಟ್ರೋಫಿ ಪಂದ್ಯ ಆಡಲು ಸಜ್ಜಾಗಿದ್ದಾರೆ. 2020 ೆಬ್ರವರಿಯಲ್ಲಿ ಕೊನೆಯದಾಗಿ ರಣಜಿ ಪಂದ್ಯ ಆಡಿದ್ದ 32 ವರ್ಷದ ರಾಹುಲ್​, ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿಯಲಿದ್ದಾರೆ ಎಂದು ಕೋಚ್​ ಯರೇ ಗೌಡ ಖಾತ್ರಿಪಡಿಸಿದ್ದಾರೆ.

ರಾಜ್ಯ ತಂಡದ ಪರ ಕಣಕ್ಕಿಳಿಯಲು ರಾಹುಲ್​ಗೆ ಇದಕ್ಕಿಂತ ಸೂಕ್ತ ಸಮಯ ಬರಲು ಸಾಧ್ಯವಿಲ್ಲ. ಹರಿಯಾಣ ವಿರುದ್ಧ ಮೂರನೇ ಕ್ರಮಾಂಕದಲ್ಲಿ ರಾಹುಲ್​ ಆಡಲಿದ್ದು, ಬ್ಯಾಟಿಂಗ್​ ಕ್ರಮಾಂಕ್ಕೆ ಸಾಕಷ್ಟು ಅನುಭವವನ್ನು ತುಂಬಲಿದ್ದಾರೆ. ಜತೆಗೆ ಪಂದ್ಯದ ಪರಿಸ್ಥಿತಿ ತಕ್ಕಂತೆ ಯಾವ ಬ್ಯಾಟರ್​ ಯಾವ ಕ್ರಮಾಂಕದಲ್ಲಿ ಸರಿ ಹೊಂದುತ್ತಾರೆ ಎಂಬುದನ್ನು ನಿರ್ಧರಿಸಲಾಗುವುದು ಎಂದು ಯರೇ ಗೌಡ ಮಾಹಿತಿ ನೀಡಿದರು. ಜತೆಗೆ ಗಾಯದಿಂದಾಗಿ ಕಳೆದ ಕೆಲ ತಿಂಗಳಿನಿಂದ ಸ್ಪರ್ಧಾತ್ಮಕ ಕ್ರಿಕೆಟ್​ನಿಂದ ಹೊರಗಿದ್ದ ವಿದ್ವತ್​ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಬಹಿರಂಗಪಡಿಸಿದರು.

ಆರಂಭ: ಬೆಳಗ್ಗೆ 9.30

ಸ್ಥಳ: ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು (ಉಚಿತ ಪ್ರವೇಶ)

ನಾಕೌಟ್​ ಲೆಕ್ಕಾಚಾರ

ಕರ್ನಾಟಕ ತಂಡ ನಾಕೌಟ್​ ಹಂತಕ್ಕೇರಲು ಕೊನೇ ಪಂದ್ಯದಲ್ಲಿ ಬೋನಸ್​ ಅಂಕ ಗಳಿಸಬೇಕಾದ ಒತ್ತಡದಲ್ಲಿ ಸಿಲುಕಿದೆ. ಅಂದರೆ ಇನಿಂಗ್ಸ್​ ಅಥವಾ 10 ವಿಕೆಟ್​ ಗೆಲುವು ಒಲಿಸಿಕೊಂಡರೆ ಅಷ್ಟೇ ಕ್ವಾರ್ಟರ್​ೈನಲ್​ ರೇಸ್​ನಲ್ಲಿ ಉಳಿಯಲಿದ್ದು, ಜತೆಗೆ ಕೇರಳ ಹಾಗೂ ಬಿಹಾರ ನಡುವಿನ ಪಂದ್ಯದ ಲಿತಾಂಶದ ಮೇಲೆ ಭವಿಷ್ಯ ನಿರ್ಧರಿತವಾಗಲಿದೆ. ಕರ್ನಾಟಕ ತಂಡ ಇದುವರೆಗೆ ಆಡಿರುವ 6 ಪಂದ್ಯಗಳಲ್ಲಿ 2 ಗೆಲುವು, 4ಡ್ರಾ ಸಾಧಿಸಿ 19 ಅಂಕದೊಂದಿಗೆ ಗುಂಪಿನ ಮೂರನೇ ಸ್ಥಾನದಲ್ಲಿದೆ. ಹರಿಯಾಣ 3 ಗೆಲುವು, 3 ಡ್ರಾ ಸಾಧಿಸಿ 26 ಪಾಯಿಂಟ್ಸ್​ನೊಂದಿಗೆ ಅಗ್ರಸ್ಥಾನ, ಕೇರಳ 2 ಗೆಲುವು, 4 ಡ್ರಾದೊಂದಿಗೆ ಒಟ್ಟು 21 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಕೇರಳ ತಂಡ ತನ್ನ ಕೊನೇ ಪಂದ್ಯದಲ್ಲಿ ಸೋತರೆ ಅಥವಾ ಡ್ರಾಕ್ಕೆ ತೃಪ್ತಿಪಟ್ಟರಷ್ಟೇ ಕರ್ನಾಟಕ, ಹರಿಯಾಣ ಎದುರು ಸಾಮಾನ್ಯ ಗೆಲುವು ಕಂಡು ನಾಕೌಟ್​ಗೇರಬಹುದಾಗಿದೆ. ಕೇರಳ ಗೆದ್ದರೆ ಕರ್ನಾಟಕ, ಹರಿಯಾಣ ಎದುರು 7 ಅಂಕ ಪಡೆಯಲೇಬೇಕು. ಆಗ ಹರಿಯಾಣ&ಕರ್ನಾಟಕ ಎರಡೂ ತಂಡಗಳು 26 ಅಂಕಗಳ ಸಮಬಲ ಸಾಧಿಸಲಿವೆ. ಹೆಚ್ಚಿನ ಬೋನಸ್​ ಅಂಕ ಪಡೆದ ಆಧಾರದಲ್ಲಿ ಕರ್ನಾಟಕ ತಂಡ ಮುಂದಿನ ಸುತ್ತಿಗೇರುವ ಅವಕಾಶ ಹೊಂದಿದೆ. ಪ್ರತಿ ಗುಂಪಿನ ಅಗ್ರ 2 ತಂಡಗಳು ಕ್ವಾರ್ಟರ್​ೈನಲ್​ಗೇರಲಿವೆ.