ಹುಬ್ಬಳ್ಳಿ: ವಿಕೆಟ್ ಕೀಪರ್, ಬ್ಯಾಟರ್ ಮಯಾಂಕ್ ಸಿಧು ಬಾರಿಸಿದ ಅಜೇಯ ಅರ್ಧ ಶತಕ (56ರನ್, 150ಎಸೆತ, 3 ಬೌಂ.)ದ ನೆರವಿನಿಂದ ಪ್ರವಾಸಿ ತಂಡ ಚಂಡೀಗಢ, ಆತಿಥೇಯ ಕರ್ನಾಟಕದ ವಿರುದ್ಧ ಪ್ರತಿಷ್ಠಿತ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸಿ ಗುಂಪಿನ 7ನೇ ಮತ್ತು ಕೊನೆಯ ಲೀಗ್ ಪಂದ್ಯದಲ್ಲಿ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಯಿತು. ಕರ್ನಾಟಕ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಪ್ರಥಮ ಇನ್ನಿಂಗ್ಸ್ ಮುನ್ನಡೆಯ ಆಧಾರದಲ್ಲಿ ಕರ್ನಾಟಕ 3 ಅಂಕಗಳನ್ನು ಸಂಪಾದಿಸಿದರೆ, ಚಂಡೀಗಢ 1 ಅಂಕ ಗಳಿಸಿತು. ಈ ಪಂದ್ಯದಲ್ಲಿ ಕರ್ನಾಟಕ ಗೆಲುವು ಸಾಧಿಸಿದ್ದರೆ, ಸಿ ಗುಂಪಿನ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸುತ್ತಿತ್ತು. ಪಂಜಾಬ್ ವಿರುದ್ಧ ಕೊನೆಯ ಲೀಗ್ ಪಂದ್ಯದಲ್ಲಿ ಇಂದು ಜಯ ದಾಖಲಿಸಿದ ತಮಿಳುನಾಡು 28 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದಿದೆ. ಕರ್ನಾಟಕ 27 ಅಂಕ ಗಳಿಸಿ, 2ನೇ ಸ್ಥಾನಕ್ಕೆ ತೃಪ್ತಿ ಪಟ್ಟಿದೆ.
ಇಲ್ಲಿಯ ರಾಜನಗರ ಕೆಎಸ್ಸಿಎ ಮೈದಾನದಲ್ಲಿ ಪಂದ್ಯದ ನಾಲ್ಕನೇ ಹಾಗೂ ಕೊನೆಯ ದಿನವಾದ ಸೋಮವಾರ ಚಹಾ ವಿರಾಮದ ಬಳಿಕ ಚಂಡೀಗಢ ದ್ವಿತೀಯ ಇನ್ನಿಂಗ್ಸ್ನಲ್ಲಿ 5 ವಿಕೆಟ್ಗೆ 236 ರನ್ ಗಳಿಸಿದಾಗ ಉಭಯ ತಂಡಗಳು ಡ್ರಾ ಗೆ ಸಹಮತ ವ್ಯಕ್ತಪಡಿಸಿ, ಆಟವನ್ನು ನಿಲ್ಲಿಸಿದವು.
ಸಂಕ್ಷಿಪ್ತ ಸ್ಕೋರ್
ಚಂಡೀಗಢ: 267 ಮತ್ತು 80 ಓವರ್ಗಳಲ್ಲಿ 5 ವಿಕೆಟ್ಗೆ 236ರನ್ (ಶಿವಂ ಭಾಂಬ್ರಿ 33, ಅರ್ಸ್ಲನ್ ಖಾನ್ 63, ಮನನ್ ವೊಹ್ರಾ 23, ಅಂಕಿತ್ ಕೌಶಿಕ್ 15, ಮಯಾಂಕ್ ಸಿಧು 56ಅ, ಕರಣ್ ಕೈಲಾ 25ಅ, ವಾಸುಕಿ ಕೌಶಿಕ್ 26ಕ್ಕೆ 2, ಎಂ. ವೆಂಕಟೇಶ 59ಕ್ಕೆ 1, ಶಶಿಕುಮಾರ್ 55ಕ್ಕೆ 2).
ಕರ್ನಾಟಕ: 136.5 ಓವರ್ಗಳಲ್ಲಿ 5 ವಿಕೆಟ್ಗೆ 563ರನ್ ಡಿಕ್ಲೇರ್.