ಜೈಪುರ: ಕೂದಲೆಳೆ ಅಂತರದಲ್ಲಿ ನೇರ ಎಂಟರಘಟ್ಟಕ್ಕೇರುವ ಅವಕಾಶ ತಪ್ಪಿಸಿಕೊಂಡ 4 ಬಾರಿ ಚಾಂಪಿಯನ್ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಪ್ರೀಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಭಾನುವಾರ ಆತಿಥೇಯ ರಾಜಸ್ಥಾನ ತಂಡವನ್ನು ಎದುರಿಸಲಿದೆ. ಕೆಎಲ್ ಸೈನಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೇಲ್ನೋಟಕ್ಕೆ ಕರ್ನಾಟಕ ತಂಡವೇ ಫೇವರಿಟ್ ಎನಿಸಿದೆ. ದಕ್ಷಿಣ ಆಫ್ರಿಕಾ ಪ್ರವಾಸದಿಂದ ವಾಪಸಾಗಿರುವ ದೇವದತ್ ಪಡಿಕಲ್, ಕೆ.ಗೌತಮ್ ಹಾಗೂ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ತಂಡದ ಮೀಸಲು ಆಟಗಾರನಾಗಿದ್ದ ವೇಗಿ ಪ್ರಸಿದ್ಧ ಕೃಷ್ಣ ತಂಡ ಕೂಡಿಕೊಂಡಿದ್ದು, ನಾಯಕ ಮನೀಷ್ ಪಾಂಡೆಗೆ ಹನ್ನೊಂದರ ಬಳಗದ ಆಯ್ಕೆಯೇ ಚಿಂತೆಗೀಡು ಮಾಡಿದೆ. ಕರ್ನಾಟಕ ಬ್ಯಾಟಿಂಗ್ ಹಾಗೂ ರಾಜಸ್ಥಾನ ಬೌಲಿಂಗ್ ನಡುವಿನ ಕದನ ಎಂದೇ ವಿಶ್ಲೇಷಿಸಲಾಗುತ್ತಿದೆ.
*ಆತ್ಮವಿಶ್ವಾಸದಲ್ಲಿ ಕರ್ನಾಟಕ
ದೇವದತ್ ಪಡಿಕಲ್ ಆಗಮನದಿಂದಾಗಿ ಆರ್.ಸಮರ್ಥ್ ಜತೆಗೂಡಿ ಇನಿಂಗ್ಸ್ ಆರಂಭಿಸುವುದು ಖಚಿತವಾಗಿದೆ. ಮೂವರು ಸ್ಟಾರ್ ಆಟಗಾರರ ಆಗಮನದಿಂದಾಗಿ ಹನ್ನೊಂದರ ಬಳಗದ ಆಯ್ಕೆಗೇ ತಂಡದ ಚಿಂತಕರ ಛಾವಡಿ ಹೆಚ್ಚು ತಲೆಕೆಡಿಸಿಕೊಳ್ಳಬೇಕಿದೆ. ಪಡಿಕಲ್ ಆಗಮನದಿಂದಾಗಿ ಉತ್ತಮ ಲಯದಲ್ಲಿರುವ ರೋಹನ್ ಕದಂ ಅಥವಾ ಕೆವಿ ಸಿದ್ದಾರ್ಥ್ ಇಬ್ಬರಲ್ಲಿ ಒಬ್ಬರು ಹೊರಗುಳಿಯುವುದ ಅನಿವಾರ್ಯ. ಇಲ್ಲವಾದಲ್ಲಿ, ರನ್‌ಗಳಿಸಲು ಪರದಾಡುತ್ತಿರುವ ಅನುಭವಿ ಕರುಣ್ ನಾಯರ್ ಅವರನ್ನು ಕೈಬಿಟ್ಟರೂ ಅಚ್ಚರಿಯಿಲ್ಲ. ನಾಯಕ ಮನೀಷ್ ಪಾಂಡೆ ಉತ್ತಮ ಫಾರ್ಮ್‌ನಲ್ಲಿರುವುದು ತಂಡದ ಪ್ಲಸ್ ಪಾಯಿಂಟ್. ಮತ್ತೊಂದೆಡೆ, ಸ್ಪಿನ್ನರ್ ಕೆ.ಗೌತಮ್ ಆಗಮನದಿಂದಾಗಿ ಬೌಲಿಂಗ್‌ನಲ್ಲಿ ಮಿಂಚುತ್ತಿರುವ ಜೆ.ಸುಚಿತ್, ಕೆಸಿ ಕಾರ್ಯಪ್ಪ ನಡುವೆ ಪೈಪೋಟಿ ಏರ್ಪಡಲಿದೆ. ಅನುಭವಿ ವೇಗಿ ಪ್ರಸಿದ್ಧ ಕೃಷ್ಣ ತಂಡದ ಬೌಲಿಂಗ್ ಸಾರಥ್ಯ ವಹಿಸಲಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲೂ ಬಲಿಷ್ಠವಾಗಿರುವ ಕರ್ನಾಟಕ ತಂಡ ಸುಲಭ ಗೆಲುವಿನ ಕನಸಿನಲ್ಲಿದೆ. ತಿರುವಂತನಪುರಂನಲ್ಲಿ ನಡೆದ ಲೀಗ್ ಹಂತದಲ್ಲಿ ತಮಿಳುನಾಡು ಎದುರು ಹೀನಾಯ ಸೋಲು ಕಂಡಿದ್ದು ಬಿಟ್ಟರೆ, ಉತ್ತಮ ನಿರ್ವಹಣೆ ತೋರಿತ್ತು. ಅಲ್ಲದೆ, ಕಡೇ ಲೀಗ್ ಪಂದ್ಯದಲ್ಲಿ ಬಂಗಾಳ ವಿರುದ್ಧ ಸೋತ ಪರಿಣಾಮ ನೇರ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಅವಕಾಶ ತಪ್ಪಿಸಿಕೊಂಡಿತ್ತು.
* ರಾಜಸ್ಥಾನಕ್ಕೆ ಬೌಲರ್‌ಗಳೇ ಶ್ರೀರಕ್ಷೆ
ರಾಜಸ್ಥಾನ ತಂಡಕ್ಕೆ ಬೌಲರ್‌ಗಳೇ ತಂಡದ ದೊಡ್ಡ ಆಸ್ತಿಯಾಗಿದ್ದಾರೆ. ವೇಗಿಗಳಾದ ಖಲೀಲ್ ಅಹಮದ್, ಅಂಕಿತ್ ಚೌಧರಿ, ಕಮಲೇಶ್ ನಾಗರಕೋಟಿ ಹಾಗೂ ಸ್ಪಿನ್ನರ್ ರವಿ ಬಿಷ್ಣೋಯಿ ಒಳಗೊಂಡ ಬೌಲಿಂಗ್ ಪಡೆ ಬಲಿಷ್ಠವಾಗಿದೆ.ಲೀಗ್ ಹಂತದಲ್ಲಿ ಉತ್ತಮ ನಿರ್ವಹಣೆ ತೋರಿದ ವಿಶ್ವಾಸದಲ್ಲಿರುವ ರಾಜಸ್ಥಾನ ತಂಡ ಬಲಿಷ್ಠ ಕರ್ನಾಟಕ ವಿರುದ್ಧದ ಹೋರಾಟಕ್ಕೆ ಸಜ್ಜಾಗಿದೆ. ನಾಯಕ ದೀಪಕ್ ಹೂಡಾ, ಮಹಿಪಾಲ್ ಲೋಮ್ರರ್, ಅಭಿಜಿತ್ ತೋಮರ್‌ರಂಥ ಬ್ಯಾಟರ್‌ಗಳ ಸೇವೆಯನ್ನು ತಂಡ ನೆಚ್ಚಿಕೊಂಡಿದೆ.
ಪಂದ್ಯ ಆರಂಭ: ಬೆಳಗ್ಗೆ 9 ಗಂಟೆಗೆ
ದಿನದ ಇತರ ಪಂದ್ಯಗಳು
ಉತ್ತರ ಪ್ರದೇಶ-ಮಧ್ಯ ಪ್ರದೇಶ
ವಿದರ್ಭ-ತ್ರಿಪುರ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್-2