ಕ್ರೀಡೆ

ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿ ; ಇಂದು ಕರ್ನಾಟಕ-ಬಂಗಾಳ ಮುಖಾಮುಖಿ

ತಿರುವನಂತಪುರ: ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ 4 ಬಾರಿಯ ಚಾಂಪಿಯನ್ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಬಂಗಾಳ ತಂಡವನ್ನು ಮಂಗಳವಾರ ಎದುರಿಸಲಿದೆ. ಎಲೈಟ್ ಬಿ ಗುಂಪಿನಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶ ಹೊಂದಿರುವ ಕರ್ನಾಟಕ ತಂಡ ಬಂಗಾಳ ಎದುರು ಭಾರಿ ಅಂತರದಲ್ಲಿ ಜಯಿಸಬೇಕಿದೆ. ಅಗ್ರಸ್ಥಾನ ಪಡೆದ ತಂಡ ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರೆ, ಎರಡನೇ ಸ್ಥಾನಿ ತಂಡ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಆಡಲಿದೆ.

ಭಾನುವಾರ ಪುದುಚೇರಿ ಎದುರು ಅಚ್ಚರಿಯ ಸೋಲು ಕಂಡಿರುವ ತಮಿಳುನಾಡು, ತನ್ನ ಕಡೇ ಪಂದ್ಯದಲ್ಲಿ ಬರೋಡ ಎದುರು ಸೋತರೆ ಕರ್ನಾಟಕ ಕ್ವಾರ್ಟರ್ ಫೈನಲ್ ಪ್ರವೇಶಿಸಲಿದೆ. ತಮಿಳುನಾಡು ಗೆದ್ದರೂ, ರನ್‌ರೇಟ್ ಲೆಕ್ಕಾಚಾರದಲ್ಲಿ ಅದನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರುವ ಅವಕಾಶವೂ ಕರ್ನಾಟಕಕ್ಕಿದೆ. ಬಹುತೇಕ ನಾಕೌಟ್ ಹಂತ ಖಚಿತಪಡಿಸಿಕೊಂಡಿರುವ ಮನೀಷ್ ಪಾಂಡೆ ಬಳಗ ಹೀನಾಯ (ಭಾರಿ ಅಂತರದ ಸೋಲು) ಸೋಲು ಕಂಡರಷ್ಟೇ ಟೂರ್ನಿಯಿಂದ ಹೊರಬೀಳಲಿದೆ. ಕರ್ನಾಟಕ ತಂಡಕ್ಕೆ ಯುವ ಬೌಲರ್‌ಗಳು ಆಸರೆಯಾಗುತ್ತಿದ್ದರೆ, ಅನುಭವಿ ಬ್ಯಾಟರ್‌ಗಳ ಪಡೆ ಕೂಡ ಅಲ್ಪಮಟ್ಟಿಗೆ ಯಶಸ್ವಿಯಾಗಿದೆ.

ಪಂದ್ಯ ಆರಂಭ: ಬೆಳಗ್ಗೆ 9