ನವದೆಹಲಿ: ಬಾರ್ಡರ್ ಗವಾಸ್ಕರ್ ಟ್ರೋಫಿ 2024-25ರ ಆಸ್ಟ್ರೇಲಿಯಾ ವಿರುದ್ಧದ ಟೂರ್ನಿ ಇಂದಿನಿಂದ ಆರಂಭಗೊಂಡಿದೆ. ಕಾಂಗರೂ ಪಡೆ ವಿರುದ್ಧ ಟಾಸ್ ಗೆದ್ದಿರುವ ಭಾರತದ ನಾಯಕ ಜಸ್ಪ್ರಿತ್ ಬುಮ್ರಾ, ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು ತಂಡದಲ್ಲಿ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮ ಅನುಪಸ್ಥಿತಿ ಭಾರತಕ್ಕೆ ಕಾಡುತ್ತಿರುವ ನಡುವೆಯೇ ಪಂದ್ಯ ನಡೆಯುತ್ತಿರುವುದು ಕೆಲವರಲ್ಲಿ ಬೇಸರ ಮೂಡಿಸಿದ್ದೇ ಆದರೂ, ಗೆಲುವಿನ ಮೂಲಕ ಟೀಮ್ ಇಂಡಿಯಾ ಶುಭಾರಂಭ ಮಾಡಲಿ ಎಂದು ಆಶಿಸಿದ್ದಾರೆ. ಒಂದೆಡೆ ಟೆಸ್ಟ್ ಸ್ಪೆಷಲಿಸ್ಟ್ ಎಂದೇ ಖ್ಯಾತಿ ಗಳಿಸಿರುವ ಚೇತೇಶ್ವರ ಪೂಜಾರ ಅವರ ಉಪಸ್ಥಿತಿ ತಂಡದಲ್ಲಿ ಇರಬೇಕಿತ್ತು ಎಂಬುದರ ಕುರಿತು ಭಾರತದ ಮಾಜಿ ಹಿರಿಯ ಕ್ಯಾಪ್ಟನ್ ಕಪಿಲ್ ದೇವ್ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಪ್ಲೀಸ್ ಮೀನುಗಳನ್ನು ತಿನ್ನಬೇಡಿ ಅವುಗಳಿಗೂ ನೋವಿದೆ… ಮತ್ಸ್ಯಕನ್ಯೆ ವೇಷದಲ್ಲಿ ಯುವತಿಯ ಮನವಿ! Matsyakanya
ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಟೆಸ್ಟ್ ಪಂದ್ಯಗಳಲ್ಲಿ ಗೆಲುವಿನ ರೂವಾರಿ ಆಗಿ ಮಿಂಚಿದ್ದ ಪೂಜಾರ, ಈ ಬಾರಿಯ ಗವಾಸ್ಕರ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಪರ ಆಡಬೇಕಿತ್ತು ಎಂದು ಅನೇಕರು ಅಭಿಪ್ರಾಯಿಸಿದ್ದರು. ಆದರೆ, ಅದು ಅಂದುಕೊಂಡಂತೆ ನಡೆಯಲಿಲ್ಲ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡದ ವಿರುದ್ಧ ಅತ್ಯುತ್ತಮ ಬ್ಯಾಟಿಂಗ್ ಸಾಮರ್ಥ್ಯ ಪ್ರದರ್ಶನ ನೀಡಿದ್ದ ಪೂಜಾರ ಅವರ ಅನುಪಸ್ಥಿತಿ ಬಗ್ಗೆ ಮಾತನಾಡಿದ ಕಪಿಲ್ ದೇವ್, ಬಾರ್ಡರ್ ಗವಾಸ್ಕರ್ ಟ್ರೋಫಿ ಟೂರ್ನಿಯಲ್ಲಿ ಭಾರತಕ್ಕೆ ಹಾಗೂ ತಂಡದಲ್ಲಿ ಯಾರೆಲ್ಲಾ ಇದ್ದಾರೋ ಅವರ ಬಗ್ಗೆ ಮಾತನಾಡುವುದು ಸರಿ. ಇಲ್ಲದಿರುವ ಆಟಗಾರರ ಕುರಿತು ಅಭಿಪ್ರಾಯ ವ್ಯಕ್ತಪಡಿಸುವ ಅಗತ್ಯವಿಲ್ಲ ಎಂದಿದ್ದಾರೆ.
“ಇವರೆಲ್ಲಾ ಅತ್ಯುತ್ತಮ ಆಟಗಾರರು. ಅದಕ್ಕಾಗಿಯೇ ನೀವು ಅವರನ್ನು ಆಡುವಂತೆ ಮಾಡುತ್ತಿದ್ದೀರಿ. ಸುನಿಲ್ ಗವಾಸ್ಕರ್ ಮತ್ತು ಸಚಿನ್ ತೆಂಡೂಲ್ಕರ್ ಅವರಂತಹ ದಿಗ್ಗಜ ಆಟಗಾರರು ಭಾರತಕ್ಕೆ ಬೇಕಾ? ಆಸ್ಟ್ರೇಲಿಯಾ ಡಾನ್ ಬ್ರಾಡ್‌ಮನ್ ಅವರನ್ನು ಹುಡುಕುತ್ತಿದೆಯೇ ಹೇಳಿ? ತಂಡದ ಭಾಗವಾಗಿರದ ಆಟಗಾರರ ಬಗ್ಗೆ ನಾವು ಮಾತನಾಡಬಾರದು. ಸದ್ಯಕ್ಕೆ ಬುಮ್ರಾ ಹೆಚ್ಚು ತಲೆಕೆಡಿಸಿಕೊಳ್ಳಬಾರದು, ಸುಮ್ಮನೇ ಆಡಬೇಕು. ಪಂದ್ಯ ಪ್ರಾರಂಭವಾಗಲಿ. ಆನಂತರ ಅವರ ದಾರಿಯನ್ನು ಅವರೇ ಕಂಡುಕೊಳ್ಳುತ್ತಾರೆ. ನಾವು ನಮ್ಮ ನಿರೀಕ್ಷೆಗಳನ್ನು ಹೇರಬಾರದು” ಎಂದು ಹೇಳಿದ್ದಾರೆ,(ಏಜೆನ್ಸೀಸ್).