ಬೆಂಗಳೂರು: ವಿಶ್ವದ ಶ್ರೀಮಂತ ಟಿ20 ಲೀಗ್ ಎನಿಸಿರುವ ಐಪಿಎಲ್ 18ನೇ ಆವೃತ್ತಿಗೆ ಕ್ಷಣಗಣನೆ ಶುರುವಾಗಿದೆ. ಮಾರ್ಚ್ 22ರಂದು ಹಾಲಿ ಚಾಂಪಿಯನ್ ಕೆಕೆಆರ್ ಮತ್ತು ಆರ್‌ಸಿಬಿ ತಂಡಗಳ ಮುಖಾಮುಖಿಯೊಂದಿಗೆ ಐಪಿಎಲ್ ಹಬ್ಬಕ್ಕೆ ಚಾಲನೆ ಸಿಗಲಿದೆ. ಕ್ರಿಕೆಟ್ ಪ್ರೇಮಿಗಳು ಕುತೂಹಲದಿಂದ ಕಾಯುತ್ತಿರುವ ಟೂರ್ನಿಯಲ್ಲಿ ಈ ಬಾರಿ ಕರ್ನಾಟಕದ 13 ಕ್ರಿಕೆಟಿಗರು ಕಣಕ್ಕಿಳಿಯಲಿದ್ದಾರೆ. 2024ರ ನವೆಂಬರ್‌ನಲ್ಲಿ ನಡೆದ ಆಟಗಾರರ ಮೆಗಾ ಹರಾಜಿನಿಂದ 18ನೇ ಆವೃತ್ತಿಯ ಐಪಿಎಲ್ ತಂಡಗಳಲ್ಲಿ ಕೆಲ ಬದಲಾವಣೆಯಾಗಿದ್ದು, ರಾಜ್ಯದ ಕೆಲ ಪ್ರಮುಖ ಆಟಗಾರರ ತಂಡಗಳೂ ಬದಲಾಗಿವೆ.
ರಾಜಸ್ಥಾನ ರಾಯಲ್ಸ್ ಹಾಗೂ ಲಖನೌ ಸೂಪರ್‌ಜೈಂಟ್ಸ್ ಹೊರತುಪಡಿಸಿ ಈ ಬಾರಿ ಇತರ ಎಲ್ಲ ತಂಡಗಳಲ್ಲೂ ಕರ್ನಾಟಕದ ಕ್ರಿಕೆಟಿಗರಿದ್ದಾರೆ. ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಗರಿಷ್ಠ ಮೂವರು ಕನ್ನಡಿಗರಿದ್ದಾರೆ. ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ ಪುನರಾಗಮನದೊಂದಿಗೆ ಈ ಬಾರಿ ಆರ್‌ಸಿಬಿಯಲ್ಲಿ ಇಬ್ಬರು ಕನ್ನಡಿಗರು ಸ್ಥಾನ ಪಡೆದಿದ್ದಾರೆ. ಆದರೆ ಕರ್ನಾಟಕ ತಂಡದ ನಾಯಕನೇ (ಮಯಾಂಕ್ ಅಗರ್ವಾಲ್) ಈ ಬಾರಿ ಐಪಿಎಲ್‌ನಲ್ಲಿ ಕಣಕ್ಕಿಳಿಯುವುದಿಲ್ಲ ಎಂಬುದು ಬೇಸರ ಎನಿಸಿದೆ.
ಕೆಎಲ್ ರಾಹುಲ್ (ಡೆಲ್ಲಿ ಕ್ಯಾಪಿಟಲ್ಸ್, ₹14 ಕೋಟಿ)
ಹಿಂದಿನ 3 ಆವೃತ್ತಿಯಲ್ಲಿ ಲಖನೌ ಸೂಪರ್‌ಜೈಂಟ್ಸ್ ತಂಡ ಮುನ್ನಡೆಸಿದ್ದ ರಾಹುಲ್ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿದ್ದಾರೆ. 2024ರ ಆವೃತ್ತಿಯಲ್ಲಿ ನಾಯಕತ್ವ ಹಾಗೂ ಬ್ಯಾಟಿಂಗ್ ಸ್ಟ್ರೈಕ್‌ರೇಟ್‌ನಿಂದ ್ರಾಂಚೈಸಿ ಮಾಲೀಕರದಿಂದಲೇ ಮೈದಾನದಲ್ಲಿ ಅನುಭವಿಸಿದ್ದ ಮುಜುಗರಕ್ಕೆ ರಾಹುಲ್ ಈ ಬಾರಿ ತಕ್ಕ ಪ್ರತ್ಯುತ್ತರ ನೀಡಬೇಕಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದ ನಿರ್ಣಾಯಕ ಇನಿಂಗ್ಸ್‌ಗಳನ್ನು ಸ್ಫೂರ್ತಿಯಾಗಿಸಿಕೊಂಡು ಡೆಲ್ಲಿ ಕ್ಯಾಪಿಟಲ್ಸ್ ತಂಡ ಚೊಚ್ಚಲ ಪ್ರಶಸ್ತಿ ಜಯಿಸಲೂ ನೆರವಾಗಬೇಕಿದೆ. ಜತೆಗೆ ನಾಯಕತ್ವದ ಭಾರವಿಲ್ಲದೆ ಬ್ಯಾಟಿಂಗ್‌ನತ್ತ ಸಂಪೂರ್ಣ ಗಮನಹರಿಸುವ ಅವಕಾಶವಿದೆ. 2013ರಿಂದಲೂ ಐಪಿಎಲ್‌ನ ಭಾಗವಾಗಿರುವ ರಾಹುಲ್‌ಗೆ ಡೆಲ್ಲಿ ಐದನೇ ತಂಡವಾಗಿದೆ.
ಕರುಣ್ ನಾಯರ್ (ಡೆಲ್ಲಿ ಕ್ಯಾಪಿಟಲ್ಸ್, ₹50 ಲಕ್ಷ)
ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿರುವ ಮತ್ತೋರ್ವ ಕನ್ನಡಿಗ ಕರುಣ್ ನಾಯರ್. ಹಾಲಿ ದೇಶೀಯ ಋತುವಿನಲ್ಲಿ ರನ್ ಪ್ರವಾಹ ಹರಿಸುವ ಮೂಲಕ ಭಾರತ ಟೆಸ್ಟ್ ತಂಡಕ್ಕೆ ಪುನರಾಗಮನದ ನಿರೀಕ್ಷೆಯಲ್ಲಿರುವ ಕರುಣ್‌ಗೆ ಐಪಿಎಲ್ ಪ್ರದರ್ಶನವೂ ವರದಾನವಾಗುವ ಸಾಧ್ಯತೆಗಳಿವೆ. ಈ ಹಿಂದೆ ಕರ್ನಾಟಕ ತಂಡ ಪ್ರತಿಷ್ಠಿತ ರಣಜಿ ಟ್ರೋಫಿ ಜಯಿಸುವಲ್ಲಿ ನೆರವಾಗಿದ್ದ ಕರುಣ್-ರಾಹುಲ್ ಜೋಡಿ ಮತ್ತೊಮ್ಮೆಒಟ್ಟಾಗಿ ಕಣಕ್ಕಿಳಿಯಲಿದೆ. 2023ರಲ್ಲಿ ರಾಹುಲ್ ಗಾಯದ ಸಮಸ್ಯೆಯಿಂದಾಗಿ ಐಪಿಎಲ್‌ನಿಂದ ಹೊರಬಿದ್ದಾಗ ಬದಲಿ ಆಟಗಾರನಾಗಿ ಕರುಣ್ ಸ್ಥಾನ ಪಡೆದಿದ್ದರು. ಆದರೆ ಹನ್ನೊಂದರ ಬಳಗದಲ್ಲಿ ಆಡುವ ಅವಕಾಶ ದೊರೆತಿರಲಿಲ್ಲ.
ಮನೀಷ್ ಪಾಂಡೆ (ಕೆಕೆಆರ್, ₹75 ಲಕ್ಷ)
ಕೆಕೆಆರ್ ತಂಡ ಮೂರು ಬಾರಿ ಐಪಿಎಲ್ ಪ್ರಶಸ್ತಿ ಜಯಿಸಿದಾಗಲೂ ತಂಡದ ಸದಸ್ಯ ಎನಿಸಿರುವ ಮನೀಷ್ ಪಾಂಡೆ, ಈ ಆವೃತ್ತಿಯಲ್ಲೂ ಸ್ಥಾನ ಉಳಿಸಿಕೊಂಡಿದ್ದಾರೆ. 2014ರ ಆವೃತ್ತಿಯ ೈನಲ್‌ನಲ್ಲಿ 94 ರನ್‌ಗಳ ಅಜೇಯ ಆಟ ಕೆಕೆಆರ್‌ಗೆ ಚೊಚ್ಚಲ ಕಿರೀಟ ಒದಗಿಸಿತ್ತು. ಆದರೆ ವಯಸ್ಸು ಹಾಗೂ ಕಳಪೆ ಾರ್ಮ್‌ನಿಂದಾಗಿ ಕರ್ನಾಟಕ ರಾಜ್ಯ ತಂಡದಿಂದಲೇ ಸ್ಥಾನ ಕಳೆದುಕೊಂಡಿರುವ ಮನೀಷ್‌ಗೆ 2025ರ ಆವೃತ್ತಿ ವೃತ್ತಿಜೀವನದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಮನೀಷ್ 2014ರಿಂದ 2017ರವರೆಗೂ ಈ ಹಿಂದೆ ಕೆಕೆಆರ್‌ನ ಭಾಗವಾಗಿದ್ದರು. ಜತೆಗೆ ಐಪಿಎಲ್‌ನ ಎಲ್ಲ ಆವೃತ್ತಿಯಲ್ಲಿ ಕಣಕ್ಕಿಳಿಯಲಿರುವ ನಾಲ್ವರು ತಾರೆಯರಲ್ಲಿ ಮನೀಷ್ ಒಬ್ಬರೆನಿಸಿದ್ದಾರೆ.
ಲವನೀತ್ ಸಿಸೋಡಿಯಾ (ಕೆಕೆಆರ್, ₹30 ಲಕ್ಷ)
ಆರ್‌ಸಿಬಿ ತಂಡದ ಜತೆಗಿದ್ದರೂ 2023ರಲ್ಲಿ ಅವಕಾಶ ವಂಚಿತರಾಗಿದ್ದ ವಿಕೆಟ್ ಕೀಪರ್-ಬ್ಯಾಟರ್ ಲವನೀತ್ ಸಿಸೋಡಿಯಾ, ಈ ಸಲ ಹಾಲಿ ಚಾಂಪಿಯನ್ ಕೆಕೆಆರ್ ತಂಡದ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಹೊಂದಿದ್ದು, ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳಬೇಕಿದೆ.
ಅಭಿನವ್ ಮನೋಹರ್ (ಸನ್‌ರೈಸರ್ಸ್, ₹3.20 ಕೋಟಿ)
ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಈ ಬಾರಿ ಮಯಾಂಕ್ ಅಗರ್ವಾಲ್ ಬದಲಿಗೆ ಸೇರ್ಪಡೆಯಾಗಿರುವ ಮತ್ತೋರ್ವ ಕನ್ನಡಿಗ ಅಭಿನವ್ ಮನೋಹರ್. ದೇಶೀಯ ಟೂರ್ನಿಗಳಲ್ಲಿ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರು ವಾಸಿಯಾಗಿರುವ ಅಭಿನವ್‌ಗೆ ಇದು 2ನೇ ಐಪಿಎಲ್ ತಂಡ. ಹಿಂದಿನ ಮೂರು ಆವೃತ್ತಿಗಳಲ್ಲಿ ಗುಜರಾತ್ ಟೈಟಾನ್ಸ್ ತಂಡದ ಪರ ಆಡಿದ್ದರು. ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮ ಹಾಗೂ ಕ್ಲಾಸೆನ್ ಅವರಂಥ ಸ್ಫೋಟಕ ಬ್ಯಾಟರ್‌ಗಳ ನಡುವೆ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುವ ಸವಾಲಿನ ಜತೆಗೆ ಹೈದರಾಬಾದ್ ತಂಡದಲ್ಲಿ ಫಿನಿಶರ್ ಸ್ಥಾನವನ್ನು ತುಂಬುವ ಜವಾಬ್ದಾರಿ ಅಭಿನವ್ ಮುಂದಿದೆ. ಐಪಿಎಲ್‌ನಲ್ಲಿ 18 ಪಂದ್ಯಗಳನ್ನಾಡಿರುವ ಅಭಿನವ್ 132.75ರ ಸ್ಟ್ರೈಕ್‌ರೇಟ್ ಹೊಂದಿದ್ದಾರೆ.
ವೈಶಾಕ್ ವಿಜಯ್‌ಕುಮಾರ್ (ಪಂಜಾಬ್ ಕಿಂಗ್ಸ್, ₹1.80 ಕೋಟಿ)
ಪಂಜಾಬ್ ಕಿಂಗ್ಸ್ ತಂಡದಲ್ಲಿ ಈ ಬಾರಿ ಇಬ್ಬರು ಕನ್ನಡಿಗರಿದ್ದಾರೆ. ಹಿಂದಿನ ಎರಡು ಆವೃತ್ತಿಗಳಲ್ಲಿ ಆರ್‌ಸಿಬಿ ಬೌಲಿಂಗ್ ವಿಭಾಗದಲ್ಲಿ ಗಮನಸೆಳೆದಿರುವ ವೇಗಿ ವೈಶಾಕ್ ಈ ಬಾರಿ ಪಂಜಾಬ್ ಪಾಲಾಗಿದ್ದಾರೆ. ಕಳೆದ ಆವೃತ್ತಿಯಲ್ಲಿ ಆಡಿದ್ದ ವಿದ್ವತ್ ಕಾವೇರಪ್ಪ ಹೊರಬಿದ್ದ ಬಳಿಕ ಮತ್ತೊಬ್ಬ ಕನ್ನಡಿಗನ ಪ್ರವೇಶ ಎನಿಸಿದೆ. ಪಂಜಾಬ್ ತಂಡದ ತರಬೇತಿ ಬಳಗದಲ್ಲಿ ಕರ್ನಾಟಕದ ಮಾಜಿ ಕ್ರಿಕೆಟಿಗ ಸುನೀಲ್ ಜೋಷಿ ಉಪಸ್ಥಿತಿ ವೈಶಾಕ್‌ಗೆ ಹೆಚ್ಚಿನ ಬಲ ನೀಡಬಲ್ಲದು. ಎಡಗೈ ವೇಗಿ ಅರ್ಷದೀಪ್ ಜತೆಗೆ ವೇಗದ ಬೌಲಿಂಗ್ ವಿಭಾಗದ ಸ್ಥಿರ ನಿರ್ವಹಣೆ ಕಾಯ್ದುಕೊಳ್ಳಬೇಕಿದೆ.
ಪ್ರವೀಣ್ ದುಬೆ (ಪಂಜಾಬ್ ಕಿಂಗ್ಸ್, ₹30 ಲಕ್ಷ)
ಐಪಿಎಲ್‌ನಲ್ಲಿ 2016ರಿಂದ ಇದ್ದರೂ ಆಡುವ ಅವಕಾಶದ ಕೊರತೆ ಎದುರಿಸುತ್ತಿರುವ ಸ್ಪಿನ್ನರ್ ಪ್ರವೀಣ್ ದುಬೆ ಈ ಬಾರಿ ಪಂಜಾಬ್ ಕಿಂಗ್ಸ್‌ನಲ್ಲಿದ್ದಾರೆ. ಕಳೆದ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಜತೆಗಿದ್ದ ಪ್ರವೀಣ್ ಇದುವರೆಗೆ 4 ಪಂದ್ಯ ಮಾತ್ರ ಆಡಿದ್ದಾರೆ. 2016-17ರಲ್ಲಿ ಆರ್‌ಸಿಬಿ ತಂಡದಲ್ಲಿದ್ದ ಪ್ರವೀಣ್ ಪದಾರ್ಪಣೆಯ ಅವಕಾಶವೂ ಪಡೆದಿರಲಿಲ್ಲ.
ಮನೋಜ್ ಭಾಂಡಗೆ (ಆರ್‌ಸಿಬಿ, ₹30 ಲಕ್ಷ)
ಯುವ ಆಲ್ರೌಂಡರ್ ಮನೋಜ್ ಆರ್‌ಸಿಬಿ ತಂಡದಲ್ಲಿರುವ ಎರಡನೇ ಕನ್ನಡಿಗ ಎನಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ತಂಡದಲ್ಲಿದ್ದರೂ, ಆಡುವ ಅವಕಾಶ ಪಡೆಯದ ಮನೋಜ್, ಈ ಬಾರಿ ಪದಾರ್ಪಣೆಯ ಅವಕಾಶ ಎದುರು ನೋಡುತ್ತಿದ್ದಾರೆ. ಗಾಯ ಹಾಗೂ ಫಿಟ್ನೆಸ್ ಸಮಸ್ಯೆ ನಡುವೆ ಸ್ಥಿರ ನಿರ್ವಹಣೆ ತೋರಬೇಕಿದೆ. ಜತೆಗೆ ಮುಂದಿನ ದೇಶೀಯ ಋತುವಿಗೆ ಕರ್ನಾಟಕ ತಂಡದಲ್ಲಿ ಮರಳಿ ಸ್ಥಾನ ಪಡೆಯಲು ರಾಯಚೂರಿನ ಮನೋಜ್ ಭಾಂಡಗೆಗೆ ಟೂರ್ನಿ ಉತ್ತಮ ವೇದಿಕೆ ಎನಿಸಿದೆ.
ದೇವದತ್ ಪಡಿಕ್ಕಲ್ (ಆರ್‌ಸಿಬಿ, ₹2 ಕೋಟಿ)
ಆರ್‌ಸಿಬಿ ಪರ ಪದಾರ್ಪಣೆಯ ಆವೃತ್ತಿಯಲ್ಲಿ ಶತಕ ಸಿಡಿಸಿ ಮಿಂಚಿದ್ದ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್. ನಂತರ ಗಾಯದಿಂದಾಗಿ ರನ್‌ಬರ ಎದುರಿಸಿ ರಾಜಸ್ಥಾನ, ಲಖನೌ ತಂಡದಿಂದ ಹೊರಬಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಉತ್ತಮ ರನ್‌ಗಳಿಕೆ ಹೊಂದಿದ್ದು, ಆರ್‌ಸಿಬಿ ತಂಡಕ್ಕೆ ಮರುಪ್ರವೇಶ ಮಾಡಿದ್ದಾರೆ. ಈ ಬಾರಿ ಮಧ್ಯಮ ಕ್ರಮಾಂಕದಲ್ಲಿ ಆರ್‌ಸಿಬಿಗೆ ಪ್ರಮುಖ ಬ್ಯಾಟರ್ ಆಗುವ ಸಾಧ್ಯತೆಗಳಿವೆ.
ಪ್ರಸಿದ್ಧ ಕೃಷ್ಣ (ಗುಜರಾತ್ ಟೈಟಾನ್ಸ್, ₹9.50 ಕೋಟಿ)
ಈ ಬಾರಿ ಐಪಿಎಲ್ ಹರಾಜಿನಲ್ಲಿ ಮಾರಾಟವಾದ ಎರಡನೇ ದುಬಾರಿ ಕನ್ನಡಿಗ ವೇಗಿ ಪ್ರಸಿದ್ಧ ಕೃಷ್ಣ. ಗುಜರಾತ್ ಟೈಟಾನ್ಸ್ ತಂಡದಲ್ಲಿರುವ ಏಕೈಕ ಕನ್ನಡಿಗ ಎನಿಸಿದ್ದಾರೆ. ಅಭಿನವ್ ಮನೋಹರ್ ಬದಲಿಗೆ ಪ್ರಸಿದ್ಧ ಕನ್ನಡಿಗರ ಕೋಟಾ ತುಂಬಲಿದ್ದಾರೆ. ಕಳೆದ ಆವೃತ್ತಿಯಲ್ಲಿ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದಲೇ ಹೊರಬಿದ್ದಿದ್ದ ಪ್ರಸಿದ್ಧಗೆ ಐಪಿಎಲ್‌ನಲ್ಲಿ ಇದು ಹೊಸ ಆರಂಭ ಎನಿಸಿದೆ. ಪ್ರಸಿದ್ಧ ಕೃಷ್ಣ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದರೂ ನಿರೀಕ್ಷಿತ ಮಟ್ಟದ ನಿರ್ವಹಣೆಯಿಲ್ಲದೆ ಸ್ಥಾನ ಕಳೆದುಕೊಂಡಿದ್ದಾರೆ.
ಶ್ರೇಯಸ್ ಗೋಪಾಲ್ (ಸಿಎಸ್‌ಕೆ, ₹30 ಲಕ್ಷ)
ರಾಜ್ಯದ ಅನುಭವಿ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಈ ಬಾರಿ ಸಿಎಸ್‌ಕೆ ಪರ ಆಡಲಿದ್ದಾರೆ. ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ, ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಜತೆಗಿನ ಡ್ರೆಸ್ಸಿಂಗ್ ರೂಮ್ ಒಡನಾಟ ಶ್ರೇಯಸ್‌ಗೆ ಹೆಚ್ಚಿನ ಕಲಿಕೆಗೆ ಅವಕಾಶ ಒದಗಿಸಬಹುದು. ಸ್ಪಿನ್ ಸ್ನೇಹಿ ಚೆಪಾಕ್ ಅಂಗಣದಲ್ಲಿ ಅಶ್ವಿನ್, ಜಡೇಜಾ ಜತೆಗೆ ಸಿಎಸ್‌ಕೆ ಸ್ಪಿನ್ ವಿಭಾಗಕ್ಕೆ ಬಲ ತುಂಬುವ ನಿರೀಕ್ಷೆ ಹೊಂದಿದ್ದಾರೆ. ಶ್ರೇಯಸ್‌ಗೆ ಐಪಿಎಲ್‌ನಲ್ಲಿ ಇದು 4ನೇ ತಂಡವಾಗಿದ್ದು, ಆಡಿರುವ 52 ಪಂದ್ಯಗಳಲ್ಲಿ 52 ವಿಕೆಟ್ ಪಡೆದಿದ್ದಾರೆ.
ಹೊಸ ಪ್ರತಿಭೆಗಳು
ವಿಕೆಟ್ ಕೀಪರ್-ಬ್ಯಾಟರ್ ಕೆಎಲ್ ಶ್ರೀಜಿತ್ (ಮುಂಬೈ ಇಂಡಿಯನ್ಸ್) ಹಾಗೂ ಆಲ್ರೌಂಡರ್ ಮನ್ವಂತ್ ಕುಮಾರ್ ಎಲ್ (ಡೆಲ್ಲಿ ಕ್ಯಾಪಿಟಲ್ಸ್) ಈ ಬಾರಿಯ ಐಪಿಎಲ್‌ನಲ್ಲಿರುವ ಕರ್ನಾಟಕದ ಯುವ ಪ್ರತಿಭೆಗಳು. ದೇಶೀಯ ಋತುವಿನಲ್ಲಿ ತೋರಿದ ನಿರ್ವಹಣೆಯ ಆಧಾರದಲ್ಲಿ ಶ್ರೀಜಿತ್‌ಗೆ ಐದು ಬಾರಿಯ ಚಾಂಪಿಯನ್ ಮುಂಬೈ ತಂಡ ಸೆಳೆದುಕೊಂಡಿದೆ. ಜತೆಗೆ ದೇಶೀಯ ವಿಕೆಟ್ ಕೀಪರ್‌ಗಳ ಕೊರತೆಯನ್ನು ತುಂಬುವ ಜವಾಬ್ದಾರಿಯೂ ಶ್ರೀಜಿತ್ ಹೆಗಲಿಗಿದೆ. ಕೋಚ್ ಮಹೇಲಾ ಜಯವರ್ಧನೆ, ಕೈರಾನ್ ಪೋಲ್ಲಾರ್ಡ್ ಅವರಂಥ ಅನುಭವಿ ಆಟಗಾರರ ಮಾರ್ಗದರ್ಶನವೂ ಸಿಗಲಿದೆ. ಮೈಸೂರಿನ ಮನ್ವಂತ್‌ಗೂ ಇದು ಚೊಚ್ಚಲ ಐಪಿಎಲ್ ಅವಕಾಶವೆನಿಸಿದೆ.