ಕ್ರೀಡೆ

ದಪ್ಪ ದೇಹ ಕರಗಿಸಲು ಕಷ್ಟಪಟ್ಟು ಫಿಟ್​ ಆದ ಕನ್ನಡಿಗ ವೈಶಾಕ್​ಗೆ ಸಿಕ್ಕಿದೆ ಭಾರತ ಪರ ಆಡುವ ಬಹುಮಾನ!

ಬೆಂಗಳೂರು: ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸದ ಟಿ20 ಸರಣಿಗೆ ಭಾರತ ತಂಡಕ್ಕೆ ಆಯ್ಕೆಯಾಗಿರುವ ಕರ್ನಾಟಕದ ವೇಗಿ ವೈಶಾಕ್​ ವಿಜಯ್​ಕುಮಾರ್​, ತನ್ನ ಕನಸು ನನಸಾಗಿದೆ ಎಂದು ಸಂಭ್ರಮಿಸಿದ್ದಾರೆ. ಐದು ವರ್ಷಗಳ ಹಿಂದೆ ಅಧಿಕ ದೇಹತೂಕದ ಸಮಸ್ಯೆ ಎದುರಿಸಿದ್ದ ವೈಶಾಕ್​, ಮನೆಯಲ್ಲಿ ಕನ್ನಡಿಯಲ್ಲಿ ತನ್ನ ದಪ್ಪ ದೇಹವನ್ನು ನೋಡಿ ಅತ್ತಿದ್ದರು. ಜತೆಗೆ ತಾನು ಉನ್ನತ ದರ್ಜೆಯ ವೇಗದ ಬೌಲರ್​ ಆಗುವ ಬಗ್ಗೆ ಅನುಮಾನ ಹೊಂದಿದ್ದರು. ಆದರೆ ನಂತರದಲ್ಲಿ ಅಥ್ಲೆಟಿಕ್ಸ್​ ಕೋಚ್​ ಬಿಪಿ ಅಯ್ಯಪ್ಪ, ಟ್ರೇನರ್​ಗಳಾದ ಸಾಯಿ ಪ್ರಸನ್ನ ಮತ್ತು ಪುನೀತ್​ ಮಾರ್ಗದರ್ಶನದಲ್ಲಿ ಕಠಿಣ ಪರಿಶ್ರಮ ಪಟ್ಟು ದೇಹತೂಕ ಕರಗಿಸಿಕೊಂಡಿದ್ದರು. ಭಾರತ ಪರ ಆಡುವ ಅವಕಾಶದೊಂದಿಗೆ, ಅದಕ್ಕೀಗ ತಕ್ಕ ಪ್ರತಿಫಲವನ್ನೂ ಅವರು ಪಡೆದುಕೊಂಡಿದ್ದಾರೆ.

"ಭಾರತ ಪರ ಆಡುವುದು ಪ್ರತಿ ಕ್ರಿಕೆಟಿಗನ ಕನಸು. ನನಗೆ ಈಗ ಖುಷಿಯಿಂದ ಮಾತೇ ಹೊರಡುತ್ತಿಲ್ಲ' ಎಂದು 27 ವರ್ಷದ ವೈಶಾಕ್​ ರಾಷ್ಟ್ರೀಯ ತಂಡದ ಚೊಚ್ಚಲ ಕರೆಗೆ ಪ್ರತಿಕ್ರಿಯಿಸಿದ್ದಾರೆ. ಪ್ರಸಕ್ತ ಪಟನಾದಲ್ಲಿ ರಣಜಿ ಟ್ರೋಫಿ ಪಂದ್ಯ ಆಡುತ್ತಿರುವ ವೈಶಾಕ್​, ಬೆಂಗಳೂರಿನ ವಿಜಯ್​ಕುಮಾರ್​ ಮತ್ತು ಬೃಂದಾ ದಂಪತಿಯ ಏಕೈಕ ಪುತ್ರನಾಗಿದ್ದಾರೆ. ವೈಶಾಕ್​ ತಂದೆ ವಿಜಯ್​ಕುಮಾರ್​ ಕೆಎಸ್​ಸಿಎಯ ಮೊದಲ ಡಿವಿಷನ್​ನಲ್ಲಿ ಆಡಿದ ಕ್ರಿಕೆಟಿಗರಾಗಿದ್ದಾರೆ.

ವೈಶಾಕ್​ ಈ ಹಿಂದೆ ಫಿಟ್ನೆಸ್​ ತರಬೇತಿಯ ನಡುವೆ ಚೆನ್ನೈಗೆ ತೆರಳಿ ಟೀಮ್​ ಇಂಡಿಯಾದ ಮಾಜಿ ವೇಗದ ಬೌಲಿಂಗ್​ ಕೋಚ್​ ಭರತ್​ ಅರುಣ್​ ಬಳಿ ವಿಶೇಷ ತರಬೇತಿ ಪಡೆದಿದ್ದರು. ನಂತರದಲ್ಲಿ ವೈಶಾಕ್​ ಸಂಪೂರ್ಣ ಭಿನ್ನ ವ್ಯಕ್ತಿ ಮತ್ತು ಬೌಲರ್​ ಆಗಿ ಬದಲಾಗಿದ್ದರು ಎಂದು ಅವರ ತಂದೆ ವಿಜಯ್​ಕುಮಾರ್​ ಹೇಳಿದ್ದಾರೆ. 2021-22ರ ದೇಶೀಯ ಕ್ರಿಕೆಟ್​ ಋತುವಿನ ವೇಳೆ ರಾಜ್ಯದ ಅನುಭವಿ ವೇಗಿ ಅಭಿಮನ್ಯು ಮಿಥುನ್​ ಕೂಡ ವೈಶಾಕ್​ಗೆ ಉತ್ತಮ ಟಿಪ್ಸ್​ಗಳನ್ನು ನೀಡಿ ನೆರವಾಗಿದ್ದರು ಎಂದು ವಿಜಯ್​ಕುಮಾರ್​ ತಿಳಿಸಿದ್ದಾರೆ.

2022ರಲ್ಲಿ ಕರ್ನಾಟಕ ಪರ ಪದಾರ್ಪಣೆ ಮಾಡಿದ ವೈಶಾಕ್​, ಇದುವರೆಗೆ 26 ಪ್ರಥಮ ದರ್ಜೆ ಪಂದ್ಯಗಳಲ್ಲಿ 100 ವಿಕೆಟ್​ ಕಬಳಿಸಿದ್ದಾರೆ. 30 ಟಿ20 ಪಂದ್ಯಗಳಲ್ಲಿ 42 ವಿಕೆಟ್​ ಉರುಳಿಸಿದ್ದಾರೆ. ಐಪಿಎಲ್​ನಲ್ಲಿ ಆರ್​ಸಿಬಿ, ಕೆಪಿಎಲ್​/ಮಹಾರಾಜ ಟ್ರೋಫಿಯಲ್ಲಿ ಮೈಸೂರು ವಾರಿಯರ್ಸ್​, ಮಂಗಳೂರು ಯುನೈಟೆಡ್​, ಗುಲ್ಬರ್ಗಾ ಮಿಸ್ಟಿಕ್ಸ್​ ಪರ ಆಡಿದ್ದಾರೆ.