ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಆತಿಥೇಯ ಕರ್ನಾಟಕದ ಎಂ. ರಘು 86ನೇ ಸೀನಿಯರ್ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಹರಿಯಾಣದ ದೇವಿಕಾ ಸಿಹಾಗ್ ಚಾಂಪಿಯನ್ ಪಟ್ಟವೇರಿದ್ದಾರೆ.
ಉದ್ಯಾನನಗರಿಯಲ್ಲಿ ಮಂಗಳವಾರ ಮುಕ್ತಾಯಗೊಂಡ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ನಲ್ಲಿ ಕರ್ನಾಟಕದ ಇಬ್ಬರು ಆಟಗಾರರೇ ಮುಖಾಮುಖಿಯಾದರು. ರೈಲ್ವೇಸ್ ಪ್ರತಿನಿಧಿಸಿದ ಕನ್ನಡಿಗ ಹಾಗೂ ಮಾಜಿ ಚಾಂಪಿಯನ್ ಮಿಥುನ್ ಮಂಜುನಾಥ್ ವಿರುದ್ಧ ಮಂಡ್ಯದ ಎಂ. ರಘು 14-21, 21-14, 24-22 ಗೇಮ್ಗಳಿಂದ ಗೆಲುವು ದಾಖಲಿಸಿದರು. ಮೊದಲ ಗೇಮ್ ಸೋಲಿನ ಬಳಿಕ ದಿಟ್ಟ ತಿರುಗೇಟು ನೀಡಿದ ರಘು, ನಿರ್ಣಾಯಕ ಗೇಮ್ನಲ್ಲಿ 3 ಬಾರಿ ಮ್ಯಾಚ್ ಪಾಯಿಂಟ್ ರಸಿಕೊಂಡು ಚೊಚ್ಚಲ ರಾಷ್ಟ್ರೀಯ ಪ್ರಶಸ್ತಿ ಒಲಿಸಿಕೊಂಡರು. ರಘು ಸೆಮೀಸ್ನಲ್ಲಿ ಅಗ್ರ ಶ್ರೇಯಾಂಕಿತ ಸತೀಶ್ ಕುಮಾರ್ಗೆ ಆಘಾತ ನೀಡಿದ್ದರು.
19 ವರ್ಷದ ದೇವಿಕಾ ಮಹಿಳಾ ಸಿಂಗಲ್ಸ್ ಫೈನಲ್ನಲ್ಲಿ ತೆಲಂಗಾಣದ ಶ್ರೀಯಾಂಶಿ ವಾಲಿಶೆಟ್ಟಿ ವಿರುದ್ಧ 21-15, 21-16ರಿಂದ ಗೆದ್ದರು. ಪುರುಷರ ಡಬಲ್ಸ್ನಲ್ಲಿ ಯುಪಿಯ ಅರ್ಷ್ ಮೊಹಮದ್, ರಾಜಸ್ಥಾನದ ಸಂಸ್ಕಾರ್ ಸಾರಸ್ವತ್ ಜೋಡಿ ಪ್ರಶಸ್ತಿ ಗೆದ್ದರೆ, ಮಹಿಳಾ ಡಬಲ್ಸ್ನಲ್ಲಿ ಕೇರಳದ ಆರತಿ ಸಾರಾ ಮತ್ತು ತಮಿಳುನಾಡಿನ ವರ್ಷಿಣಿ ವಿಎಸ್ ಜೋಡಿ ಚಾಂಪಿಯನ್ ಎನಿಸಿತು. ಮಿಶ್ರ ಡಬಲ್ಸ್ನಲ್ಲಿ ಉತ್ತರ ಪ್ರದೇಶದ ಆಯುಷ್ ಅಗರ್ವಾಲ್-ಶ್ರುತಿ ಮಿಶ್ರಾ ಜೋಡಿ ಪ್ರಶಸ್ತಿ ಜಯಿಸಿತು.
5ನೇ ಕನ್ನಡಿಗ
ರಘು ಎಂ. ರಾಷ್ಟ್ರೀಯ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದ 5ನೇ ಕನ್ನಡಿಗರಾಗಿದ್ದಾರೆ. ಪ್ರಕಾಶ್ ಪಡುಕೋಣೆ (9 ಬಾರಿ, 1971-1979), ಅನುಪ್ ಶ್ರೀಧರ್ (2 ಬಾರಿ, 2004-2005), ಅರವಿಂದ್ ಭಟ್ (2 ಬಾರಿ, 2008-2010), ಮಿಥುನ್ ಮಂಜುನಾಥ್ (2023) ಹಿಂದಿನ ಸಾಧಕರಾಗಿದ್ದಾರೆ.