ಕ್ರೀಡೆ

ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಕನ್ನಡಿಗ ಬೋಪಣ್ಣಗೆ ಬಾಲಾಜಿ ಅಥವಾ ಯೂಕಿ ಜತೆಗಾರ

ನವದೆಹಲಿ: ಭಾರತದ ಅಗ್ರ ಡಬಲ್ಸ್​ ಆಟಗಾರ ರೋಹನ್​ ಬೋಪಣ್ಣ ಮುಂಬರುವ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಎನ್​. ಶ್ರೀರಾಮ್​ ಬಾಲಾಜಿ ಅಥವಾ ಯೂಕಿ ಭಾಂಬ್ರಿ ಜತೆಗೂಡಿ ಆಡಲಿದ್ದಾರೆ. ಒಲಿಂಪಿಕ್ಸ್​ಗೆ ತಂಡ ಆಯ್ಕೆ ಸಂಬಂಧ ಆಯ್ಕೆ ಸಮಿತಿ ಚರ್ಚೆ ನಡೆಸಿದರೂ, ಕನ್ನಡಿಗ ಬೋಪಣ್ಣ ಆಯ್ಕೆ ಮಾಡಿಕೊಳ್ಳುವ ಆಟಗಾರನ ಜತೆಗೆ ಆಡಲು ಅಖಿಲ ಭಾರತ ಟೆನಿಸ್​ ಸಂಸ್ಥೆ (ಎಐಟಿಎ) ಅವಕಾಶ ಕಲ್ಪಿಸುವ ನಿರೀಕ್ಷೆ ಇದೆ.

ಒಲಿಂಪಿಕ್ಸ್​ ಟೆನಿಸ್​ ಸ್ಪರ್ಧೆಯ ನಿಯಮಾವಳಿ ಪ್ರಕಾರ, ವಿಶ್ವ ರ್ಯಾಂಕಿಂಗ್​ನಲ್ಲಿ ಅಗ್ರ 10 ಸ್ಥಾನದೊಳಗಿರುವ ಆಟಗಾರರಿಗೆ ತಮಗೆ ಬೇಕಾದ ದೇಶಬಾಂಧವ ಜತೆಗಾರರೊಂದಿಗೆ ಕಣಕ್ಕಿಳಿಯಲು ಅವಕಾಶವಿದೆ. ಆದರೆ ಈ ಜತೆಗಾರರ ರ್ಯಾಂಕ್​ ಅಗ್ರ 300ರೊಳಗೆ ಇರಬೇಕಾಗುತ್ತದೆ. 44 ವರ್ಷದ ಬೋಪಣ್ಣ ಎಟಿಪಿ ಡಬಲ್ಸ್​ ರ್ಯಾಂಕಿಂಗ್​ನಲ್ಲಿ ಪ್ರಸಕ್ತ 4ನೇ ಸ್ಥಾನದಲ್ಲಿದ್ದಾರೆ. ಯೂಕಿ ಭಾಂಬ್ರಿ 54 ಮತ್ತು ಶ್ರೀರಾಮ್​ ಬಾಲಾಜಿ 82ನೇ ರ್ಯಾಂಕ್​ ಹೊಂದಿದ್ದಾರೆ. ಜೂನ್​ 10ರಂದು ಅಂದರೆ ಫ್ರೆಂಚ್​ ಓಪನ್​ ಗ್ರಾಂಡ್​ ಸ್ಲಾಂ ಟೂರ್ನಿ ಮುಗಿದ ಬೆನ್ನಲ್ಲೇ ರ್ಯಾಂಕಿಂಗ್​ ಆಧಾರದಲ್ಲಿ ಒಲಿಂಪಿಕ್ಸ್​ ಅರ್ಹತೆಯನ್ನು ನೀಡಲಾಗುತ್ತದೆ. ಪ್ಯಾರಿಸ್​ ಒಲಿಂಪಿಕ್ಸ್​ನಲ್ಲೂ ರೋಲ್ಯಾಂಡ್​ ಗ್ಯಾರಸ್​ನ ಕ್ಲೇಕೋರ್ಟ್​ನಲ್ಲೇ ಜುಲೈ 27ರಿಂದ ಟೆನಿಸ್​ ಸ್ಪರ್ಧೆಗಳು ನಡೆಯಲಿವೆ.

34 ವರ್ಷದ ಬಾಲಾಜಿ ಮತ್ತು 31 ವರ್ಷದ ಯೂಕಿ ಇಬ್ಬರೂ ಕ್ಲೇಕೋರ್ಟ್​ನಲ್ಲಿ ಇತ್ತೀಚೆಗೆ ಉತ್ತಮ ಲಿತಾಂಶವನ್ನೇ ಕಂಡಿದ್ದಾರೆ. ಬಾಲಾಜಿ ಕಾಗ್ಲಿಯರಿ ಚಾಲೆಂಜರ್​ನಲ್ಲಿ ಜರ್ಮನಿಯ ಆಂಡ್ರೆ ಬೇಗ್​ಮನ್​ ಜತೆಗೂಡಿ ಪ್ರಶಸ್ತಿ ಜಯಿಸಿದ್ದರೆ, ಯೂಕಿ ಮ್ಯೂನಿಚ್​ನಲ್ಲಿ ಎಟಿಪಿ 250 ಟೂರ್ನಿಯಲ್ಲಿ ಫ್ರಾನ್ಸ್​ನ  ಅಲ್ಬನೋ ಒಲಿವೆಟ್ಟಿ ಜತೆ ಪ್ರಶಸ್ತಿ ಗೆದ್ದಿದ್ದರು.

ಒಲಿಂಪಿಕ್ಸ್​ಗೆ ಭಾರತ ಟೆನಿಸ್​ ತಂಡದ ಆಯ್ಕೆ ಇತ್ತೀಚೆಗಿನ ವರ್ಷಗಳಲ್ಲಿ ಹೆಚ್ಚಿನ ವಿವಾದ ಸೃಷ್ಟಿಸುತ್ತ ಬಂದಿದೆ. 2012ರಲ್ಲಿ ಲಿಯಾಂಡರ್​ ಪೇಸ್​ ಜತೆಗೂಡಿ ಆಡಲು ಮಹೇಶ್​ ಭೂಪತಿ ಮತ್ತು ರೋಹನ್​ ಬೋಪಣ್ಣ ಇಬ್ಬರೂ ನಿರಾಕರಿಸಿದ್ದರು. ಅಲ್ಲದೆ ಸಾನಿಯಾ ಮಿರ್ಜಾರನ್ನು ಮಿಶ್ರ ಡಬಲ್ಸ್​ನಲ್ಲಿ ಪೇಸ್​ ಜತೆ ಆಡಿಸಿದ್ದರಿಂದ ಎಐಟಿಎ ಟೀಕೆಗೆ ಗುರಿಯಾಗಿತ್ತು. ಹೀಗಾಗಿ ಎಐಟಿಎ ಈ ಬಾರಿ ವಿವಾದಗಳನ್ನು ತಡೆಯಲು ಬೋಪಣ್ಣಗೆ ಜತೆಗಾರನ ಆಯ್ಕೆಯನ್ನು ನೀಡಲಿದೆ ಎನ್ನಲಾಗಿದೆ.

ನಗಾಲ್​ಗೆ ಅರ್ಹತೆ ಅವಕಾಶ

ಹಾಲಿ ವಿಶ್ವ ನಂ. 94 ಸಿಂಗಲ್ಸ್​ ಆಟಗಾರ ಸುಮಿತ್​ ನಗಾಲ್ ಫ್ರೆಂಚ್ ಓಪನ್​ನಲ್ಲಿ ಉತ್ತಮ ನಿರ್ವಹಣೆ ತೋರುವ ಮೂಲಕ ಒಲಿಂಪಿಕ್ಸ್​ಗೆ ಅರ್ಹತೆ ಸಂಪಾದಿಸುವ ಅವಕಾಶ ಹೊಂದಿದ್ದಾರೆ. ಒಲಿಂಪಿಕ್ಸ್​ನ ಸಿಂಗಲ್ಸ್​ ವಿಭಾಗದಲ್ಲಿ ಒಟ್ಟು 64 ಆಟಗಾರರು ಕಣಕ್ಕಿಳಿಯುತ್ತಾರೆ. ಈ ಪೈಕಿ 56 ಆಟಗಾರರಿಗೆ ಮಾತ್ರ ರ್ಯಾಂಕಿಂಗ್​ ಆಧಾರದಲ್ಲಿ ನೇರಅರ್ಹತೆ ನಿಡಲಾಗುತ್ತದೆ. ಆದರೆ ಒಂದು ದೇಶದಿಂದ ಗರಿಷ್ಠ 4 ಆಟಗಾರರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಉಳಿದ 6 ಸ್ಥಾನಗಳಿಗೆ ಏಷ್ಯನ್​ ಗೇಮ್ಸ್​, ಆಫ್ರಿಕನ್​ ಗೇಮ್ಸ್​ ಮತ್ತು ಪಾನ್​&ಅಮೆರಿಕನ್​ ಗೇಮ್ಸ್​ನ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ಹೀಗಾಗಿ ನಗಾಲ್​ ಅಗ್ರ 100ರೊಳಗಿನ ರ್ಯಾಂಕ್​ ಕಾಯ್ದುಕೊಂಡರೂ ಒಲಿಂಪಿಕ್ಸ್​ ಅರ್ಹತೆ ಅವಕಾಶವಿರುತ್ತದೆ. ಜೂನ್​ 10ರಂದು ಅರ್ಹತೆ ಸ್ಪಷ್ಟವಾಗಲಿದೆ.