ಕ್ರೀಡೆ

'ಮನೆಯಲ್ಲಿ ಕುಳಿತು ಮಾಡುವುದು ಸುಲಭ, ಆದ್ರೆ..' ಟ್ರೋಲ್‌ ಮಾಡಿದವರಿಗೆ ಸೈನಾ ಕೌಂಟರ್!

ನವದೆಹಲಿ: ಸಾಮಾಜಿಕ ಮಾಧ್ಯಮಗಳ ಮೂಲಕ ಟ್ರೋಲ್ ಮಾಡುತ್ತಿರುವವರಿಗೆ ಸ್ಟಾರ್​ ಶಟ್ಲರ್ ಸೈನಾ ನೆಹ್ವಾಲ್ ದಿಟ್ಟ ಕೌಂಟರ್ ನೀಡಿದ್ದಾರೆ. ಬಾಯಿಗೆ ಬಂದಂತೆ ಮಾತನಾಡುವುದು ಸುಲಭ, ಆದರೆ ಆಟ ಆಡುವುದು ಕಷ್ಟ ಎಂದು ಪ್ರತಿಕ್ರಿಯಿಸಿದ್ದಾರೆ.

ಇತ್ತೀಚೆಗೆ ವಿನೇಶ್ ಪೋಗಟ್ ವಿಷಯದ ಕುರಿತು ಪಾಡ್‌ಕ್ಯಾಸ್ಟ್‌ನಲ್ಲಿ ಪ್ರಮುಖ ಕಾಮೆಂಟ್‌ಗಳನ್ನು ಸೈನಾ ಮಾಡಿದ್ದರು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದಿದ್ದ ನೀರಜ್ ಚೋಪ್ರಾ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದು, ಈ ಸಂದರ್ಭದಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ ಸೈನಾ ಕುತೂಹಲಕಾರಿ ಕಾಮೆಂಟ್‌ಗಳನ್ನು ಮಾಡಿದ್ದರು. ಆಕೆಯ ಕಾಮೆಂಟ್ಸ್​ ಮೇಲೆ ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದರು.

ಅದು ಏನೆಂದರೆ, ಟೋಕಿಯೋ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಜಾವೆಲಿನ್ ಎಸೆತದಲ್ಲಿ ಚಿನ್ನ ಗೆದ್ದ ಮೇಲೆಯೇ ಅಥ್ಲೆಟಿಕ್ಸ್‌ನಲ್ಲಿ ಇಂತಹದೊಂದುಆಟವಿದೆ ಎಂದು ನಮಗೆ ತಿಳಿಯಿತು," ಎಂದು ಸೈನಾ ನೆಹ್ವಾಲ್ ಪ್ರತಿಕ್ರಿಯಿಸಿದ್ದರು. ಇದರ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್‌ಗಳು ಬಂದಿದ್ದವು. ಕೆಲವರು ಅಚ್ಚರಿ ವ್ಯಕ್ತಪಡಿಸಿದರೆ, ಇನ್ನು ಕೆಲವರು ಟ್ರೋಲ್ ಮಾಡಿದ್ದಾರೆ. ಸೈನಾ ಬಗ್ಗೆ 'ಕಂಗನಾ ರನೌತ್ ಆಫ್ ಸ್ಪೋರ್ಟ್ಸ್' ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಆ ಕಾಮೆಂಟ್‌ಗಳಿಗೆ ಸೈನಾ ಕೌಂಟರ್‌ ಕೊಟ್ಟಿದ್ದಾರೆ.

'ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ಕಂಗನಾ ತುಂಬಾ ಸುಂದರವಾಗಿದ್ದಾಳೆ, ಆದರೆ ನನ್ನ ಆಟದಲ್ಲಿ ನಾನು ಪರಿಪೂರ್ಣವಾಗಿದ್ದೇನೆ. ವಿಶ್ವದಲ್ಲಿ ನಂಬರ್ ಒನ್ ರ್ಯಾಂಕ್​ ನನ್ನದಾಗಿದೆ. ನನ್ನ ದೇಶಕ್ಕೆ ಒಲಂಪಿಕ್ ಪದಕ ಗೆಲ್ಲಿಸಿಕೊಟ್ಟಿದ್ದೇನೆ. ಆದ್ದರಿಂದ ನಿಮ್ಮಂತಹವರಿಗೆ ಮತ್ತೊಮ್ಮೆ ಹೇಳುತ್ತಿದ್ದೇನೆ. ಮನೆಯಲ್ಲಿ ಕುಳಿತುಕೊಂಡು ಕಾಮೆಂಟ್​ ಮಾಡುವುದು ತುಂಬಾ ಸುಲಭ. ಆದರೆ ಆಟ ಆಡುವುದು ತುಂಬಾ ಕಷ್ಟ. ಭಾರತದಲ್ಲಿ ಜಾವೆಲಿನ್ ಥ್ರೋ ಅನ್ನು ಜನಪ್ರಿಯಗೊಳಿಸುವಲ್ಲಿ ನೀರಜ್​ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಸೈನಾ ಅಭಿಪ್ರಾಯಪಟ್ಟಿದ್ದಾರೆ.