ಕ್ರೀಡೆ

ವಿಶ್ವಕಪ್‌ಗೆ ಫಿಟ್ ಆಗಲು ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್‌ಗೆ ಗಡುವು

ಆಕ್ಲೆಂಡ್: ನ್ಯೂಜಿಲೆಂಡ್ ಸೀಮಿತ ಓವರ್ ತಂಡದ ನಾಯಕ ಕೇನ್ ವಿಲಿಯಮ್ಸನ್‌ಗೆ ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಗೆ ಸಂಪೂರ್ಣ ಫಿಟ್ ಆಗಲು ಎರಡು ವಾರಗಳ ಕಾಲಾವಕಾಶ ನೀಡಲಾಗಿದೆ ಎಂದು ಮುಖ್ಯ ಕೋಚ್ ಗ್ಯಾರಿ ಸ್ಟೆಡ್ ತಿಳಿಸಿದ್ದಾರೆ. ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ಪರ ಫೀಲ್ಡಿಂಗ್ ವೇಳೆ ತನ್ನ ಬಲ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದ ಕೇನ್ ಏಪ್ರಿಲ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರು. ಬಳಿಕ ಶೀಘ್ರ ಚೇತರಿಕೆ ಕಾಣುವ ಮೂಲಕ ತಂಡಕ್ಕೆ ಮರಳುವ ಭರವಸೆ ಮೂಡಿಸಿದ್ದಾರೆ. ವಿಶ್ವಕಪ್‌ಗೆ 15 ಆಟಗಾರರ ಆಯ್ಕೆಯ ಅಂತಿಮ ದಿನದವರೆಗೂ ವಿಲಿಯಮ್ಸನ್‌ಗೆ ಫಿಟ್ನೆಸ್ ಸಾಬೀತುಪಡಿಸಲು ಅವಕಾಶ ನೀಡಲಾಗಿದೆ.

ಈಗಾಗಲೆ ನೆಟ್ಸ್‌ನಲ್ಲಿ ಬ್ಯಾಟಿಂಗ್ ಆರಂಭಿಸಿರುವ ವಿಲಿಯಮ್ಸನ್ ಸದ್ಯ ಪುನಶ್ಚೇತನದಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧ ಸರಣಿಯಲ್ಲೂ ಕಿವೀಸ್ ತಂಡದ ಜತೆಗೆ ಅಭ್ಯಾಸದಲ್ಲಿ ಭಾಗವಹಿಸಿದ್ದಾರೆ. ವಿಶ್ವಕಪ್ ಟೂರ್ನಿಯ ಆರಂಭಿಕ ಪಂದ್ಯಗಳಿಗೆ ಅಲಭ್ಯವಾದರೂ ನಂತರದ ಪಂದ್ಯಗಳಿಗೆ ಸಂಪೂರ್ಣ ಫಿಟ್ನೆಸ್ ಸಾಧಿಸುವ ನೀರೀಕ್ಷೆ ಇದೆ ಎನ್ನಲಾಗಿದೆ. ಅಕ್ಟೋಬರ್ 5 ರಂದು ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ತನ್ನ ಮೊದಲ ಪಂದ್ಯವನ್ನಾಡಲಿದೆ. ಕೇನ್ ವಿಲಿಯಮ್ಸನ್ ಗೈರಿನಲ್ಲಿ ಟಾಮ್ ಲಾಥಮ್ ತಂಡವನ್ನು ಮುನ್ನಡೆಸಲಿದ್ದಾರೆ.