ಕ್ರೀಡೆ

ಭಾರತ ಬಿ ಎದುರು ಸಿ ತಂಡ ಡ್ರಾಗೆ ತೃಪ್ತಿ: ಹೇಗಿದೆ ಗೊತ್ತಾ ದುಲೀಪ್ ಟ್ರೋಫಿ ಫೈನಲ್ ರೇಸ್!

ಅನಂತಪುರ: ಭಾರತ ಸಿ ಹಾಗೂ ಭಾರತ ಬಿ ನಡುವಿನ ಮತ್ತೊಂದು ಪಂದ್ಯ ಡ್ರಾದಲ್ಲಿ ಮುಕ್ತಾಯಗೊಂಡಿದೆ. ಆರ್‌ಡಿಟಿಎಸ್ ಎ ಗ್ರೌಂಡ್‌ನಲ್ಲಿ ಮುಕ್ತಾಯಗೊಂಡ ಪಂದ್ಯದಲ್ಲಿ 7 ವಿಕೆಟ್‌ಗೆ 309 ರನ್‌ಗಳಿಂದ ಅಂತಿಮ ದಿನದ ಆರಂಭಿಸಿದ ಭಾರತ ಬಿ, ವೇಗಿ ಅಂಶುಲ್ ಕಾಂಬೋಜ್ (69ಕ್ಕೆ 8) ದಾಳಿಗೆ ತತ್ತರಿಸಿ 108 ಓವರ್‌ಗಳಲ್ಲಿ 332 ರನ್‌ಗಳಿಗೆ ಮೊದಲ ಇನಿಂಗ್ಸ್ ಮುಗಿಸಿತು.

193 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಸರದಿ ಆರಂಭಿಸಿದ ಬಿ ತಂಡ, 37 ಓವರ್‌ಗಳಲ್ಲಿ 4 ವಿಕೆಟ್‌ಗೆ 128 ರನ್‌ಗಳಿಸಿ ಡಿಕ್ಲೇರ್ ೋಷಿಸಿತು. ಬಳಿಕ ಎರಡು ತಂಡದ ನಾಯಕರು ಡ್ರಾಗೆ ಸಮ್ಮತಿಸಿದರು. ಮೊದಲ ಇನಿಂಗ್ಸ್ ಮುನ್ನಡೆಯೊಂದಿಗೆ ಋತುರಾಜ್ ಗಾಯಕ್ವಾಡ್ ಪಡೆ ಮೂರು ಅಂಕ ಪಡೆದರೆ, ಬಿ ತಂಡ ಒಂದು ಪಾಯಿಂಟ್‌ಗೆ ಸಮಾಧಾನ ಕಂಡಿತು.

ಭಾರತ ಸಿ: 525 ಹಾಗೂ 4 ವಿಕೆಟ್‌ಗೆ 128 ಡಿ. (ಸುದರ್ಶನ್ 11, ಗಾಯಕ್ವಾಡ್ 62, ಪಾಟೀದಾರ್ 42, ಇಶಾನ್ 1, ಚಹರ್ 8ಕ್ಕೆ2). ಭಾರತ ಬಿ: 108 ಓವರ್‌ಗಳಲ್ಲಿ 332 (ಅಭಿಮನ್ಯು 157, ಚಹರ್ 18, ಮುಕೇಶ್ 4, ಅಂಶುಲ್ 69ಕ್ಕೆ 8). ಪಂದ್ಯಶ್ರೇಷ್ಠ: ಅಂಶುಲ್ ಕಾಂಬೋಜ್.

ಫೈನಲ್ ಲೆಕ್ಕಾಚಾರ: ಸೆಪ್ಟೆಂಬರ್ 19ರಂದು ಆರಂಭವಾಗಲಿರುವ ಟೂರ್ನಿಯ 3ನೇ ಹಾಗೂ ಅಂತಿಮ ಸುತ್ತಿನ ಪಂದ್ಯದಲ್ಲಿ ಭಾರತ ಎ-ಸಿ ಮುಖಾಮುಖಿಯಾದರೆ, ಇನ್ನೊಂದು ಪಂದ್ಯದಲ್ಲಿ ಭಾರತ ಬಿ-ಡಿ ತಂಡಗಳು ಕಾದಾಟ ನಡೆಸಲಿವೆ. ಮೂರು ಸುತ್ತಿನ ಪಂದ್ಯಗಳ ಬಳಿಕ ಅಂಕಪಟ್ಟಿಯ ಅಗ್ರ 2 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.

ಪ್ರಸ್ತುತ ಸಿ ತಂಡ 9 ಅಂಕದೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಬಿ ತಂಡ 7 ಅಂಕ, ಎ ತಂಡ 6 ಅಂಕದೊಂದಿಗೆ 2, 3ನೇ ಸ್ಥಾನದಲ್ಲಿವೆ. ಆಡಿರುವ 2 ಪಂದ್ಯದಲ್ಲಿ ಸೋಲುಂಡಿರುವ ಡಿ ತಂಡ ಖಾತೆ ತೆರೆಯದೆ ಪ್ರಶಸ್ತಿ ರೇಸ್‌ನಿಂದ ಹೊರಗುಳಿದಿದೆ. ಸಿ ತಂಡ ಎ ಎದುರು ಇನಿಂಗ್ಸ್ ಹಿನ್ನಡೆಯಲ್ಲಿ ಕನಿಷ್ಠ ಡ್ರಾ ಸಾಧಿಸಿದರೂ ಅಗ್ರ 2ರಲ್ಲಿ ಉಳಿಯಲಿದ್ದು, ಇನ್ನೊಂದು ಸ್ಥಾನಕ್ಕೆ ಬಿ-ಎ ತಂಡಗಳು ಪೈಪೋಟಿ ನಡೆಸಲಿವೆ. ಬಿ ತಂಡ ಇನಿಂಗ್ ಮುನ್ನಡೆಯೊಂದಿಗೆ ಡ್ರಾ ಸಾಧಿಸಿದರೆ ಒಟ್ಟು 10 ಕಲೆಹಾಕಲಿದೆ.

ಆಗ ಭಾರತ ಎ ತಂಡ ಅಗ್ರ 2ರಲ್ಲಿ ಸ್ಥಾನ ಪಡೆಯಲು ಗೆಲುವು ಅನಿವಾರ್ಯ ಅಥವಾ ಸಿ ಎದುರು ಬಿ ಸೋತರೆ ಕನಿಷ್ಠ ಮೊದಲ ಇನಿಂಗ್ಸ್ ಮುನ್ನಡೆ ಕಂಡರೂ ಎ ತಂಡ ಅಗ್ರ 2ರಲ್ಲಿ ಸ್ಥಾನ ಪಡೆಯಲಿದೆ. ಒಂದು ವೇಳೆ ಎ ತಂಡ ಸೋತರೆ ಸಿ ಹಾಗೂ ಸಿ ತಂಡಗಳು ೈನಲ್‌ನಲ್ಲಿ ಎರುರಾಗಲಿವೆ.

ಪ್ರತಿ ತಂಡ ಗೆಲುವು ದಾಖಲಿಸಿದರೆ 6 ಅಂಕ, ಇನಿಂಗ್ಸ್ ಮುನ್ನಡೆಗೆ 3 ಹಾಗೂ ಹಿನ್ನಡೆಯೊಂದಿಗೆ ಡ್ರಾ ಸಾಧಿಸಿದರೆ 1 ಅಂಕ ಪಡೆಯಲಿವೆ. 10 ವಿಕೆಟ್‌ಗಳ ಗೆಲುವು ಸಾಧಿಸಿದ ತಂಡ 7 ಪಾಯಿಂಟ್ ಗಳಿಸುವ ಅವಕಾಶ ಹೊಂದಿದೆ.