ಭುವನ್ ಪುದುವೆಟ್ಟು ಮಂಗಳೂರು: ಕಂಬಳವನ್ನು ಆರಾಧನೆಯ ರೂಪದಲ್ಲಿ ಆಚರಿಸುವ ತುಳುನಾಡಿನಲ್ಲೀಗ ಕೆಲವು ದಿನಗಳಿಂದ ಕಂಬಳದ ಓಟಗಾರರ ವೇಗದ ದಾಖಲೆಯದ್ದೇ ಚರ್ಚೆ. ಕೆಲವರು ಕಂಬಳ ಕರೆಯ ಉದ್ದದ ನಿಖರತೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರೆ, ಇನ್ನು ಕೆಲವರಿಗೆ ನಿಖರ ಫಲಿತಾಂಶದ ಬಗ್ಗೆ ಸಂಶಯ. ಹಲವು ವರ್ಷಗಳ ಹಿಂದೆಯೇ ದಾಖಲೆ ನಿರ್ಮಾಣವಾಗಿದೆ ಎಂದು ಹೇಳುವವರು ಇನ್ನೊಂದೆಡೆ.
ಇದಕ್ಕೆಲ್ಲ ಪರಿಹಾರ ಕಂಡುಕೊಳ್ಳಲು ಅವಿಭಜಿತ ಜಿಲ್ಲಾ ಕಂಬಳ ಸಮಿತಿ ಮುಂದಾಗಿದೆ. ಇದರಲ್ಲಿ ಮಹತ್ವದ್ದು, ಎಲ್ಲ ಕಂಬಳಗಳ ಕರೆಯೂ (ಟ್ರಾೃಕ್) 135 ಮೀಟರ್‌ಗೆ ಸೀಮಿತಗೊಳಿಸುವುದು.
ಪ್ರಸಕ್ತ ಯಾವುದೇ ಕಂಬಳಗಳ ಕರೆಗಳು ಸಮಾನವಾಗಿರದೆ ಒಂದೊಂದು ರೀತಿ ಇವೆ. ಇದು ದಾಖಲೆ ನಿರ್ವಹಣೆಗೂ ಕಷ್ಟವಾಗುತ್ತಿದೆ. ಒಂದೊಂದು ಕರೆ ಒಂದೊಂದು ರೀತಿ ಇರುವುದರಿಂದ ಓಟಗಾರರಿಗೂ ಗೊಂದಲ. ಮೇಲಾಗಿ, ಈಗ ಕಂಬಳದ ಬಗ್ಗೆ ಇಡೀ ದೇಶವೇ ದೃಷ್ಟಿ ನೆಟ್ಟಿರುವುದರಿಂದ ಪಾರದರ್ಶಕತೆ, ನಿಖರ ಫಲಿತಾಂಶ ಮತ್ತು ದಾಖಲಾತಿ ನಿರ್ವಹಣೆ ಮಾಡಲೇಬೇಕಿದೆ. ಹೀಗಾಗಿ ಕರೆ ಎಷ್ಟೇ ಉದ್ದ ಇರಲಿ, ಆರಂಭ ಮತ್ತು ಅಂತ್ಯವನ್ನು 135 ಮೀ.ಗೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ. ಇದು ಮುಂದಿನ ಕಂಬಳ ಋತುವಿನಿಂದಲೇ ಜಾರಿಗೆ ಬರಲಿದೆ ಎಂದು ಸಮಿತಿ ಅಧ್ಯಕ್ಷ ಪಿ.ಆರ್.ಶೆಟ್ಟಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಪ್ರಸಕ್ತ ಕಂಬಳ ಕರೆಯ ಎಂಡ್ ಪಾಯಿಂಟ್‌ನಲ್ಲಿ ಮಾತ್ರ ಲೇಸರ್ ಬೀಮ್ ತಂತ್ರಜ್ಞಾನ ಇದೆ. ಸ್ಟಾರ್ಟಿಂಗ್ ಪಾಯಿಂಟ್‌ನಲ್ಲಿ ಬಟನ್ ವ್ಯವಸ್ಥೆ ಮಾಡಲಾಗಿದೆ. ಇದರಿಂದ ನಿಖರ ಫಲಿತಾಂಶ ಪಡೆಯುವುದು ಕಷ್ಟವಾಗುತ್ತಿದೆ. ಸಂಶಯಕ್ಕೆ ಆಸ್ಪದ ಇರಬಾರದೆಂಬ ದೃಷ್ಟಿಯಿಂದ ಸ್ಟಾರ್ಟಿಂಗ್ ಪಾಯಿಂಟ್‌ನಲ್ಲೂ ಸೆನ್ಸಾರ್ ಆಧರಿತ ತಂತ್ರಜ್ಞಾನ ಅಳವಡಿಸಲು ಯೋಜಿಸಲಾಗಿದೆ. ಹೀಗೆ ಮಾಡುವುದರಿಂದ ಕೋಣಗಳ ಓಟ ಆರಂಭವನ್ನು ನಿಖರವಾಗಿ ಗುರುತಿಸಬಹುದಾಗಿದೆ ಎನ್ನುತ್ತಾರೆ ತೀರ್ಪುಗಾರ ವಿಜಯಕುಮಾರ್ ಜೈನ್ ಕಂಗಿನಮನೆ.
ಗೊಂದಲಗಳೇನು?: ಈಗ ದಾಖಲೆ ನಿರ್ಮಾಣಗೊಂಡಿರುವ ಐಕಳ ಮತ್ತು ವೇಣೂರು ಕಂಬಳ ಕರೆಗಳ ಉದ್ದದ ಬಗ್ಗೆ ಗೊಂದಲವಿದೆ. ದಾಖಲೆಗಳು ನಿರ್ಮಾಣವಾದ ಸಂದರ್ಭ ಐಕಳ ಕಂಬಳ ಕರೆ 142.5 ಮೀ. ಎಂದು ಹೇಳಲಾಗಿತ್ತು. ಆದರೆ ಈಗ 140.25 ಮೀ. ಎಂದು ಕೆಲವರು, ಇನ್ನು ಕೆಲವರು 138 ಮೀ. ಎಂದು ಹೇಳುತ್ತಿದ್ದಾರೆ. ಅದೇ ರೀತಿ ವೇಣೂರಿನದ್ದು 143 ಮೀ. ಎಂದು ಸುದ್ದಿಯಾಗಿದೆ. ಆದರೆ ಈ ಕರೆಯೂ 138 ಮೀ. ಎಂದು ಕೆಲವರು ಹೇಳುತ್ತಿದ್ದಾರೆ. ಇದರಿಂದ ದಾಖಲೆಗಳ ಅಂಕಿಅಂಶಗಳ ಕುರಿತೂ ಗೊಂದಲ ಹೆಚ್ಚುತ್ತಿದೆ. ಇವುಗಳ ನಿವಾರಣೆಗೆ ಕರೆಯನ್ನು 135 ಮೀ.ಗೆ ಸೀಮಿತಗೊಳಿಸುವುದು ಉತ್ತಮ ಎಂಬುದು ಸಮಿತಿಯ ಅಭಿಪ್ರಾಯ.
ಕಂಬಳ ಭವನ ಯೋಜನೆ: ಪ್ರತಿವರ್ಷ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆ ಸೇರಿ ಸುಮಾರು 18 ಜೋಡುಕರೆ ಕಂಬಳಗಳು ನಡೆಯುತ್ತಿದ್ದರೂ ಕಂಬಳ ಸಮಿತಿಗೊಂದು ಕಚೇರಿ, ಸಭಾಭವನ ಇಲ್ಲ. ತರಬೇತಿಗೂ ಅಧಿಕೃತ ಸ್ಥಳ ಇಲ್ಲ. ಇದಕ್ಕೆ ಪರಿಹಾರವಾಗಿ ಪಿಲಿಕುಳದಲ್ಲಿ ಕಂಬಳ ಭವನ ನಿರ್ಮಾಣಕ್ಕೆ ಸಮಿತಿ ಯೋಜನೆ ರೂಪಿಸಿದೆ. ಪ್ರತಿವರ್ಷ ಕನಿಷ್ಠ 30 ಯುವಕರಿಗೆ ಕಂಬಳ ತರಬೇತಿ, ಕಂಬಳ ಸಮಿತಿಗೊಂದು ಕಚೇರಿ, ಹಾಲ್ ಸಹಿತ ಇತರ ಮೂಲಭೂತ ವ್ಯವಸ್ಥೆ ಕಲ್ಪಿಸಬೇಕು. ಪಿಲಿಕುಳದಲ್ಲಿ ಈಗಾಗಲೇ ಇರುವ ಕಂಬಳ ಕರೆಯ ಜಾಗವನ್ನೇ ಕಂಬಳ ಸಮಿತಿಗೆ ಹಸ್ತಾಂತರಿಸಿದರೆ, ಅಲ್ಲೇ ಸಮೀಪದಲ್ಲಿ ಕಟ್ಟಡ ನಿರ್ಮಿಸಬಹುದು. ಇದು ಪ್ರವಾಸೋದ್ಯಮ ಕೇಂದ್ರವಾಗಿಯೂ ಅಭಿವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಮತ್ತಿತರರ ಜತೆ ಚರ್ಚಿಸಲಾಗಿದ್ದು, ಸುಮಾರು 2 ಕೋಟಿ ರೂ. ಅನುದಾನ ನಿರೀಕ್ಷಿಸಲಾಗುತ್ತಿದೆ. ಈ ಕುರಿತು ಮುಖ್ಯಮಂತ್ರಿಗಳ ಜತೆಗೂ ಮಾತುಕತೆ ನಡೆಸಲಾಗುತ್ತಿದೆ ಎಂದು ಸಮಿತಿ ಅಧ್ಯಕ್ಷ ಪಿ.ಆರ್.ಶೆಟ್ಟಿ ಮಾಹಿತಿ ನೀಡಿದ್ದಾರೆ.
ಶ್ರೀನಿವಾಸ ಗೌಡರೇ ಶರವೇಗದ ಸರದಾರ: ಫೆ.1ರಂದು ನಡೆದ ಐಕಳ ಕಂಬಳದಲ್ಲಿ ಶ್ರೀನಿವಾಸ ಗೌಡ (ನೇಗಿಲು ಹಿರಿಯ) 142.5 ಮೀ. ಉದ್ದದ ಕರೆಯನ್ನು 13.62 ಸೆಕೆಂಡ್‌ನಲ್ಲಿ ಕ್ರಮಿಸಿದ್ದು ದಾಖಲೆಯಾಗಿತ್ತು. ಇದನ್ನು 100 ಮೀ.ಗೆ ಬದಲಾಯಿಸಿದಾಗ 9.55 ಸೆಕೆಂಡ್ ಆಗಿತ್ತು. ವಿಶ್ವವಿಖ್ಯಾತ ಉಸೇನ್ ಬೋಲ್ಟ್ ಓಡಿರುವುದು 9.58 ಸೆಕೆಂಡ್‌ಗಳಲ್ಲಿ. ಹಾಗಾಗಿ ಉಸೇನ್‌ಗಿಂತ ವೇಗಿ ಎಂದೇ ಹೇಳಲಾಗಿತ್ತು. ಫೆ.15ರಂದು ನಡೆದ ವೇಣೂರು ಕಂಬಳದಲ್ಲಿ 143 ಮೀ. ಉದ್ದದ ಕಂಬಳ ಕರೆಯನ್ನು ಬಜಗೋಳಿ ನಿಶಾಂತ್ ಶೆಟ್ಟಿ (ಹಗ್ಗ ಹಿರಿಯ) 13.61 ಸೆಕೆಂಡ್‌ನಲ್ಲಿ ಕ್ರಮಿಸಿದ್ದರು. ಇದನ್ನು 100 ಮೀ.ಗೆ ಬದಲಾಯಿಸಿದಾಗ 9.52 ಸೆಕೆಂಡ್ ಆಗಿತ್ತು. ಶ್ರೀನಿವಾಸ ಗೌಡರ ದಾಖಲೆಯನ್ನು ನಿಶಾಂತ್ ಮುರಿದು ಹೊಸ ದಾಖಲೆ ನಿರ್ಮಿಸಿದರು ಎಂದು ಕಂಬಳ ಪರಿಣತರೇ ಹೇಳಿದರು. ಆದರೆ ಈಗ ಐಕಳ ಕಂಬಳದ ನಿಜ ಫಲಿತಾಂಶ ಅದಲ್ಲ ಎಂದು ಸ್ವತಃ ಶ್ರೀನಿವಾಸ ಗೌಡ ಹೇಳುತ್ತಾರೆ. ಐಕಳ ಕಂಬಳದಲ್ಲಿ ಅವರು 142.5 ಮೀ. ಕರೆಯನ್ನು 13.46 ಸೆಕೆಂಡ್‌ಗಳಲ್ಲಿ ಕ್ರಮಿಸಿದ್ದರು. ಅಂದರೆ 100 ಮೀ.ಗೆ ಬದಲಾಯಿಸಿದರೆ ಅದು 9.44 ಸೆಕೆಂಡ್ ಎಂದಾಗುತ್ತದೆ. ಇದೇ ಸಾರ್ವಕಾಲಿಕ ದಾಖಲೆಯೂ ಆಗುತ್ತದೆ ಎಂದು ಅಕಾಡೆಮಿ ಸಂಚಾಲಕ ಗುಣಪಾಲ ಕಡಂಬ ತಿಳಿಸಿದ್ದಾರೆ.
ವೆಬ್‌ಸೈಟ್ ರೆಡಿ: ಕಂಬಳ ಫಲಿತಾಂಶ ಸಹಿತ ಸಮಗ್ರ ಮಾಹಿತಿ ಒದಗಿಸುವ ವೆಬ್‌ಸೈಟ್ ರಚನೆ ಪ್ರಗತಿಯಲ್ಲಿದ್ದು, ಉಪ್ಪಿನಂಗಡಿ ಕಂಬಳ ಸಂದರ್ಭ ಉದ್ಘಾಟಿಸಲು ಸಿದ್ಧತೆ ನಡೆದಿದೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಸರ್ಕಾರದಿಂದ 5 ಕೋಟಿ ರೂ. ಅನುದಾನ ನಿರೀಕ್ಷಿಸುತ್ತಿದೆ. ಕಂಬಳ ಭವನ ನಿರ್ಮಾಣ, ಸ್ಥಳೀಯ ಕಂಬಳ ಸಮಿತಿಗಳಿಗೆ, ಕೋಣಗಳ ಸಾಕಣೆದಾರರಿಗೆ ನೆರವು, ಕಂಬಳ ಓಟಗಾರರಿಗೆ ವಿಮೆ ಮತ್ತಿತರ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. - ಪಿ.ಆರ್.ಶೆಟ್ಟಿ, ಅಧ್ಯಕ್ಷ, ಅವಿಭಜಿತ ದ.ಕ. ಜಿಲ್ಲಾ ಕಂಬಳ ಸಮಿತಿ ಕಾರ್ಮಿಕ ಇಲಾಖೆಯಿಂದ 3 ಲಕ್ಷ ರೂ. ಮತ್ತು ಕಾರ್ಮಿಕ ಕಾರ್ಡ್, ಡಿಸಿಎಂ ಅಶ್ವತ್ಥ ನಾರಾಯಣ 1 ಲಕ್ಷ ರೂ, ಬೆಂಗಳೂರಿನ ಉದ್ಯಮಿ ಚಕ್ರಪಾಣಿ 1 ಲಕ್ಷ ರೂ. ನೆರವು ನೀಡಿದ್ದಾರೆ. ಪುಮಾ ಕಂಪನಿ ನನಗೆ ಹೊಂದುವ ಟ್ರಾೃಕ್ ಶೂ ನಿರ್ಮಿಸಿ ನೀಡುವ ಭರವಸೆ ನೀಡಿದ್ದು, ಗುರುವಾರ ಅದರ ಪ್ರತಿನಿಧಿಗಳು ಆಗಮಿಸಲಿದ್ದಾರೆ. - ಅಶ್ವತ್ಥಪುರ ಶ್ರೀನಿವಾಸ ಗೌಡ, ಕಂಬಳ ವೇಗದ ಓಟಗಾರ