ಹುಯೆವ್ (ಸ್ಪೇನ್): ಭಾರತದ ಅನುಭವಿ ಷಟ್ಲರ್ ಕಿಡಂಬಿ ಶ್ರೀಕಾಂತ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ಸುತ್ತಿನಲ್ಲಿ ಮುಗ್ಗರಿಸಿದರು. ಪ್ರತಿಷ್ಠಿತ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಪುರುಷ ಷಟ್ಲರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮಾಜಿ ವಿಶ್ವ ನಂ. 1 ಶ್ರೀಕಾಂತ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಈ ಮೂಲಕ, ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸುವ ಅಪರೂಪದ ಅವಕಾಶ ತಪ್ಪಿಸಿಕೊಂಡರು.
ಭಾನುವಾರ ನಡೆದ ಫೈನಲ್ ಹಣಾಹಣಿಯಲ್ಲಿ 12 ಶ್ರೇಯಾಂಕಿತ ಆಟಗಾರ ಕೆ. ಶ್ರೀಕಾಂತ್ 15-21, 20-22 ನೇರ ಗೇಮ್‌ಗಳಿಂದ ಸಿಂಗಾಪುರದ ಲೋಹ ಕೀನ್ ಯಿವ್ ಎದುರು 43 ನಿಮಿಷಗಳ ಹಣಾಹಣಿಯಲ್ಲಿ ಸೋಲು ಕಂಡರು. ಕೂಟದಲ್ಲಿ ಪುರುಷರ ವಿಭಾಗದಲ್ಲಿ ಭಾರತಕ್ಕೆ 2 ಪದಕಗಳು ಒಲಿದವು. ಶನಿವಾರ ಸೆಮೀಸ್‌ನಲ್ಲಿ ಸೋತಿದ್ದ ಲಕ್ಷ್ಯ ಸೇನ್‌ಗೆ ಕಂಚಿನ ಪದಕ ಒಲಿದಿತ್ತು. 28 ವರ್ಷದ ಶ್ರೀಕಾಂತ್ ಮೊದಲ ಗೇಮ್‌ನಲ್ಲಿ ಆರಂಭಿಕ ಹಂತದಿಂದಲೂ ಮುನ್ನಡೆ ಸಾಧಿಸಿದರೂ ಸಿಂಗಾಪುರದ ಆಟಗಾರ ಎದುರು ತಿರುಗೇಟು ಅನುಭವಿಸಿದರು.
ಮೊದಲ ಗೇಮ್‌ನ ವಿಶ್ರಾಂತಿ ವೇಳೆಗೆ 11-10 ರಿಂದ ಮುನ್ನಡೆ ಸಾಧಿಸಿದ್ದ ಶ್ರೀಕಾಂತ್, ಬಳಿಕ ಮಾಡಿಕೊಂಡ ಎಡವಟ್ಟಿನಿಂದಾಗಿ ಸತತ ಪಾಯಿಂಟ್ಸ್ ಬಿಟ್ಟುಕೊಟ್ಟರು. ಇದರ ಲಾಭ ಪಡೆದ ಕೀನ್ ಯಿವ್, ಸುಲಭವಾಗಿ ಮೊದಲ ಗೇಮ್ ವಶಪಡಿಸಿಕೊಂಡರು. ಎರಡನೇ ಗೇಮ್‌ನಲ್ಲಿ ಅಂತಿಮ ಹಂತದವರೆಗೆ ಹೋರಾಡಿದರೂ ಪ್ರಯೋಜನವಾಗಲಿಲ್ಲ. ಶ್ರೀಕಾಂತ್ ಒಂದು ಬಾರಿ ಚಾಂಪಿಯನ್‌ಷಿಪ್ ಪಾಯಿಂಟ್ ತಪ್ಪಿಸಿದರೂ ಎದುರಾಳಿ ಆಟಗಾರನ ಚಾಣಾಕ್ಷ ಪ್ರದರ್ಶನದ ಎದುರು ಮಂಕಾದರು.
*4: ಕೆ.ಶ್ರೀಕಾಂತ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ 4ನೇ ಬೆಳ್ಳಿ ತಂದುಕೊಟ್ಟರು. ಇದಕ್ಕೂ ಮೊದಲು ಸೈನಾ ನೆಹ್ವಾಲ್ (2015) ಒಮ್ಮೆ, ಪಿವಿ ಸಿಂಧು (2017, 2018) ಎರಡು ಬಾರಿ ಈ ಸಾಧನೆ ಮಾಡಿದ್ದರು.
*1: ಕೆ.ಶ್ರೀಕಾಂತ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ಭಾರತದ ಮೊದಲ ಪುರುಷ ಷಟ್ಲರ್ ಎನಿಸಿದರು. ಇದಕ್ಕೂ ಮೊದಲು ಪ್ರಕಾಶ್ ಪಡುಕೋಣೆ (1983) ಹಾಗೂ ಸಾಯಿ ಪ್ರಣೀತ್ (2019) ಕಂಚಿನ ಪದಕ ಗೆದ್ದಿದ್ದರು.
*2: ಮೊದಲ ಬಾರಿಗೆ ಭಾರತದ ಇಬ್ಬರು ಪುರುಷರ ಷಟ್ಲರ್‌ಗಳು ಒಂದೇ ಟೂರ್ನಿಯಲ್ಲಿ ಪದಕ ಜಯಿಸಿದರು. ಶ್ರೀಕಾಂತ್ ಬೆಳ್ಳಿ ಹಾಗೂ ಲಕ್ಷ್ಯ ಸೇನ್ ಕಂಚಿನ ಪದಕ ಗೆದ್ದ ಸಾಧನೆ ಮಾಡಿದರು.