ನವದೆಹಲಿ: ಬ್ಯಾಡ್ಮಿಂಟನ್ ಚಾಂಪಿಯನ್ ಸೈನಾ ನೆಹ್ವಾಲ್ ಬುಧವಾರ ಬಿಜೆಪಿಗೆ ಸೇರುವ ಮೂಲಕ ಅನೇಕರಿಗೆ ಸರ್ಪ್ರೈಸ್ ನೀಡಿದ್ದರು. ವಿಶೇಷವೆಂದರೆ ತಮ್ಮ ಸಹೋದರಿ ಚಂದ್ರಂಶು ಜತೆ ಕಮಲವನ್ನು ಮುಡಿದಿದ್ದರು. ಸೈನಾ ಅವರ ನಡೆ ಕುರಿತು ಪರ-ವಿರೋಧ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಹಿರಿಯ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಸಾಮಾಜಿಕ ಜಾಲತಾಣದಲ್ಲಿ ಸೈನಾ ವಿರುದ್ಧ ಕಿಡಿಕಾರಿದ್ದಾರೆ.
ಇದೇ ಮೊದಲ ಬಾರಿಗೆ ಕೇಳುತ್ತಿದ್ದೇನೆ... ಕಾರಣವಿಲ್ಲದೆ ಆಟವನ್ನು ಆರಂಭಿಸಿದರು... ಇದೀಗ ಕಾರಣವಿಲ್ಲದೇ ಒಂದು ಪಕ್ಷವನ್ನು ಸೇರಿಕೊಂಡಿದ್ದಾರೆ ಎಂದು ಗುಟ್ಟಾ ಅವರು ಟ್ವೀಟ್ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
ಸೈನಾ ನೆಹ್ವಾಲ್ ವಿರುದ್ಧ ಕಿಡಿಕಾರಿದ ಗುಟ್ಟಾ ವಿರುದ್ಧ ಕೆಲವು ನೆಟ್ಟಿಗರು ಟೀಕಾಸ್ತ್ರ ಪ್ರಯೋಗ ಮಾಡಿದ್ದಾರೆ. ಟ್ರೋಫಿ ಮತ್ತು ಪದಕಗಳಿಂದಲೇ ತುಂಬಿಕೊಂಡಿರುವ ನೆಹ್ವಾಲ್ ವೃತ್ತಿ ಜೀವನದ ಬಗ್ಗೆ ಟೀಕಿಸಲು ಬೇರೆ ಕಾರಣವೇ ಇಲ್ಲ ಎಂದು ಗುಟ್ಟಾ ಶೈಲಿಯಲ್ಲೇ ಪ್ರತಿಕ್ರಿಯೆ ನೀಡಿದ್ದಾರೆ.
ಸೈನಾ ನೆಹ್ವಾಲ್ ಜತೆ ಸಹೋದರಿ ಚಂದ್ರಂಶು ಕೂಡ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಸಮ್ಮುಖದಲ್ಲಿ ಬುಧವಾರ ಪಕ್ಷಕ್ಕೆ ಸೇರ್ಪಡೆಯಾದರು. ಬಳಿಕ ಇಬ್ಬರು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದರು.
ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ನೆಹ್ವಾಲ್, ದೇಶಕ್ಕಾಗಿ ನಾನು ಪದಕಗಳನ್ನು ಗೆದ್ದಿದ್ದೇನೆ. ನಾನು ತುಂಬಾ ಶ್ರಮ ಜೀವಿ ಮತ್ತು ಶ್ರಮ ಪಡುವವರನ್ನು ನಾನು ಇಷ್ಟಪಡುತ್ತೇನೆ. ದೇಶಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸಾಕಷ್ಟು ದುಡಿದಿರುವುದನ್ನು ನೋಡಿದ್ದೇನೆ. ಅವರೊಂದಿಗೆ ಕೈಜೋಡಿಸಿ ದೇಶಕ್ಕಾಗಿ ಏನಾದರೂ ಮಾಡಬೇಕೆಂದು ಬಯಸಿದ್ದೇನೆ ಎಂದರು. ಅಲ್ಲದೆ, ಪ್ರಧಾನಿ ಮೋದಿ ಅವರಿಂದ ಸಾಕಷ್ಟು ಸ್ಫೂರ್ತಿಗೊಂಡಿದ್ದಾಗಿ ತಿಳಿಸಿದರು. (ಏಜೆನ್ಸೀಸ್)