ನವದೆಹಲಿ: ಕರೊನಾದಿಂದಾಗಿ ದೇಶೀಯ ಕ್ರಿಕೆಟ್ ಚಟುವಟಿಕೆ ನಿಂತು ಆರ್ಥಿಕ ಸಂಕಷ್ಟ ಎದುರಿಸಿರುವ ಕ್ರಿಕೆಟಿಗರಿಗೆ ಪರಿಹಾರ ಮೊತ್ತ ನೀಡಲು ಬಿಸಿಸಿಐ ಮುಂದಾಗಿರುವ ನಡುವೆ, ದೇಶೀಯ ಕ್ರಿಕೆಟಿಗರಿಗೆ ವಾರ್ಷಿಕ ಗುತ್ತಿಗೆಯನ್ನೂ ನೀಡಬೇಕು ಎಂಬ ಬೇಡಿಕೆ ಹೆಚ್ಚಾಗಿದೆ.
ಕಳೆದ ತಿಂಗಳು ದಿಗ್ಗಜ ಸುನೀಲ್ ಗಾವಸ್ಕರ್ ಪುತ್ರ ಹಾಗೂ ಮಾಜಿ ಕ್ರಿಕೆಟಿಗ ರೋಹನ್ ಗಾವಸ್ಕರ್, ಟೀಮ್ ಇಂಡಿಯಾ ಆಟಗಾರರಂತೆ ದೇಶೀಯ ಕ್ರಿಕೆಟಿಗರಿಗೂ ಗುತ್ತಿಗೆ ನೀಡಿ ಎಂದು ರಾಜ್ಯ ಕ್ರಿಕೆಟ್ ಸಂಸ್ಥೆಗಳನ್ನು ಒತ್ತಾಯಿಸಿದ್ದರು. ಕರೊನಾ ಹಾವಳಿಗೂ ಮುನ್ನವೂ ಇದ್ದ ಈ ಬೇಡಿಕೆಗೆ ಇದೀಗ ಜೈದೇವ್ ಉನಾದ್ಕತ್, ಶೆಲ್ಡನ್ ಜಾಕ್ಸನ್ ಮತ್ತು ಹರ್‌ಪ್ರೀತ್ ಸಿಂಗ್ ಭಾಟಿಯಾ ಸಹಿತ ಹಲವು ಕ್ರಿಕೆಟಿಗರು ಧ್ವನಿಗೂಡಿಸಿದ್ದಾರೆ.
ದೇಶೀಯ ಕ್ರಿಕೆಟ್‌ನಲ್ಲಿ ಆಡುವ ಹೆಚ್ಚಿನ ಆಟಗಾರರು ಐಪಿಎಲ್ ತಂಡಗಳ ಒಪ್ಪಂದ ಹೊಂದಿಲ್ಲ. ಪಂದ್ಯ ಆಡಿದರೆ ಸಿಗುವ ಸಂಭಾವನೆಯನ್ನು ಮಾತ್ರ ಅವಲಂಬಿಸಿರುವ ಅವರಿಗೆ ಉದ್ಯೋಗ ಭದ್ರತೆ ಇಲ್ಲದಂತಾಗಿದೆ. ಕಳೆದ ವರ್ಷ ರಣಜಿ ಟ್ರೋಫಿ ರದ್ದಾದ ಕಾರಣ ದೇಶೀಯ ಕ್ರಿಕೆಟಿಗರಿಗೆ ಪಂದ್ಯ ಸಂಭಾವನೆಯೂ ಸಿಕ್ಕಿರಲಿಲ್ಲ. ಹೀಗಾಗಿ ಪ್ರತಿ ರಾಜ್ಯದ ಅಗ್ರ 30 ಆಟಗಾರರಿಗೆ ವಾರ್ಷಿಕ ಗುತ್ತಿಗೆ ನೀಡಬೇಕು ಎಂದು ಸೌರಾಷ್ಟ್ರ ನಾಯಕ ಜೈದೇವ್ ಉನಾದ್ಕತ್ ಹೇಳಿದ್ದಾರೆ. ಈ ಹಿಂದೆ ದೇಶೀಯ ಕ್ರಿಕೆಟ್ ಋತುವನ್ನು ಸಂಪೂರ್ಣವಾಗಿ ಆಡುವ ಆಟಗಾರರು ವಾರ್ಷಿಕ 15-16 ಲಕ್ಷ ರೂ. ಸಂಪಾದಿಸುತ್ತಿದ್ದರು.
‘ಕ್ರಿಕೆಟಿಗರಿಗೂ ಕುಟುಂಬ ಇರುತ್ತದೆ. ಅವರೂ ಬಿಲ್‌ಗಳನ್ನು ಪಾವತಿಸಬೇಕು. ಪುರುಷರು ಮಾತ್ರವಲ್ಲದೆ ಮಹಿಳಾ ಕ್ರಿಕೆಟಿಗರಿಗೂ ಗುತ್ತಿಗೆ ನೀಡಬೇಕು. ಪುರುಷರಿಗೆ ಹೋಲಿಸಿದರೆ ಮಹಿಳಾ ಕ್ರಿಕೆಟಿಗರಿಗೆ ಉದ್ಯೋಗವಕಾಶವೂ ಕಡಿಮೆ ಇರುತ್ತದೆ’ ಎಂದು ಮತ್ತೋರ್ವ ದೇಶೀಯ ಕ್ರಿಕೆಟಿಗ ಶೆಲ್ಡನ್ ಜಾಕ್ಸನ್ ಹೇಳಿದ್ದಾರೆ. ಮುಂದಿನ ದೇಶೀಯ ಕ್ರಿಕೆಟ್ ಋತು ಸೆಪ್ಟೆಂಬರ್‌ನಲ್ಲಿ ಆರಂಭವಾಗಬೇಕಿದೆ. ಆದರೆ ಇದು ದೇಶದ ಕರೊನಾ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ.