ನವದೆಹಲಿ: ಇತ್ತೀಚೆಗೆ ನಡೆದ ಶ್ರೀಲಂಕಾ ವಿರುದ್ಧದ ಟಿ20 ಸರಣಿ ಗೆದ್ದ ಟೀಮ್ ಇಂಡಿಯಾ ಅದೇ ಸಂತಸದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಗೆಲ್ಲುವ ನಿರೀಕ್ಷೆಯಲ್ಲಿತ್ತು. ಆದ್ರೆ, ನಿನ್ನೆ (ಆ.07) ನಡೆದ ಮೂರನೇ ಪಂದ್ಯದಲ್ಲಿಯೂ ಲಂಕಾ ಬೌಲರ್ಗಳ ದಾಳಿಗೆ ತತ್ತರಿಸಿದ ಭಾರತ, 138ಕ್ಕೆ ಆಲ್ಔಟ್ ಆಗುವ ಮುಖೇನ ಸರಣಿಯನ್ನು ಕೈಚೆಲ್ಲಿತು. ಟಿ20 ಸಿರೀಸ್ ಸೋತಿದ್ದ ಲಂಕಾ ಪಡೆ ಇದೀಗ ಏಕದಿನ ವಶಪಡಿಸಿಕೊಂಡಿದ್ದೇ ತಡ ಸಂಭ್ರಮದಲ್ಲಿ ತೇಲಾಡುತ್ತಿದೆ. ಒಂದೆಡೆ ಶ್ರೀಲಂಕಾಗೆ ಮೆಚ್ಚುಗೆಗಳು ಹರಿದುಬರುತ್ತಿದ್ದರೆ, ಮತ್ತೊಂದೆಡೆ ಟೀಮ್ ಇಂಡಿಯಾ ಸೋಲನ್ನು ಕೆಲವರು ಟೀಕಿಸುತ್ತಿದ್ದಾರೆ.
ಇದನ್ನೂ ಓದಿ: ಪುರಸಭೆ ಗದ್ದುಗೆ ಯಾರಿಗೆ? ಕುಂದಾಪುರದಲ್ಲಿ ಗರಿಗೆದರಿದ ರಾಜಕೀಯ ; ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗೆ ಪೈಪೋಟಿ
ಇದೀಗ ಈ ಸಾಲಿಗೆ ಪಾಕಿಸ್ತಾನದ ಕ್ರಿಕೆಟಿಗ ಜುನೈದ್ ಖಾನ್ ಕೂಡ ಸೇರಿದ್ದಾರೆ. 2-0 ಅಂತರದಿಂದ ಮೆನ್ ಇನ್ ಬ್ಲ್ಯೂ ಪಡೆಯನ್ನು ಮಣಿಸಿದ ಶ್ರೀಲಂಕಾವನ್ನು ಉತ್ತುಂಗಕ್ಕೇರಿಸಿದ ಜುನೈದ್, ಟೀಮ್ ಇಂಡಿಯಾದಲ್ಲಿ ವೇಗಿ ಜಸ್ಪ್ರಿತ್ ಬುಮ್ರಾ ಇಲ್ಲಿದಿದ್ದರೆ ತಂಡ ಜೀರೋ ಆಗುತ್ತದೆ. ಲಂಕಾ ವಿರುದ್ಧ ಬೌಲಿಂಗ್ನಲ್ಲಿ ಕಮಾಲ್ ಮಾಡದ ಭಾರತೀಯ ಬೌಲರ್ಗಳು, ಬುಮ್ರಾ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ ಎಂದು ಹೇಳಿದ್ದಾರೆ.
ಟಿ20 ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿದ್ದ ಜಸ್ಪ್ರಿತ್ ಬುಮ್ರಾ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಎದುರಾಳಿ ತಂಡದ ಬ್ಯಾಟ್ಸ್ಮನ್ಗಳ ವಿಕೆಟ್ ಕಬಳಿಸುವಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಬುಮ್ರಾಗೆ ವಿಶ್ವಕಪ್ ಟೂರ್ನಿ ಬಳಿಕ ವಿಶ್ರಾಂತಿ ಕೊಡಲಾಗಿದೆ. ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ತಂಡದಿಂದ ಹೊರಗುಳಿದ ಜಸ್ಪ್ರಿತ್, ಶ್ರೀಲಂಕಾ ಸರಣಿಗೂ ಹಾಜರಾಗಲಿಲ್ಲ. ಇದನ್ನೇ ಬಲವಾದ ಕಾರಣವನ್ನಾಗಿಸಿಕೊಂಡ ಜುನೈದ್, ಟೀಮ್ ಇಂಡಿಯಾಗೆ ಬುಮ್ರಾ ಅವರ ಅವಶ್ಯಕತೆ ಹೆಚ್ಚಿದೆ. ಅವರಿಲ್ಲದೆ ಇದ್ದರೆ ಇಡೀ ಬೌಲಿಂಗ್ ಯೂನಿಟ್ ಜೀರೋ ಎಂದು ಟೀಕಿಸಿದ್ದಾರೆ,(ಏಜೆನ್ಸೀಸ್).