ಭುವನೇಶ್ವರ (ಒಡಿಶಾ): ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸೀನಿಯರ್ ಆಟಗಾರರು ತೋರಿದ ಅಮೋಘ ನಿರ್ವಹಣೆಯಿಂದ ಸ್ಫೂರ್ತಿ ಪಡೆದಿರುವ ಭಾರತ ಕಿರಿಯರ ತಂಡದ ಆಟಗಾರರು, ಬುಧವಾರದಿಂದ ತವರಿನಲ್ಲಿ ನಡೆಯಲಿರುವ 12ನೇ ಆವೃತ್ತಿಯ ಜೂನಿಯರ್ (21 ವಯೋಮಿತಿ) ಪುರುಷರ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಉಳಿಸಿಕೊಳ್ಳಲು ಹೋರಾಡಲಿದ್ದಾರೆ. ಫ್ರಾನ್ಸ್ ವಿರುದ್ಧ ಮೊದಲ ಪಂದ್ಯ ಆಡುವ ಮೂಲಕ ವಿವೇಕ್ ಸಾಗರ್ ಪ್ರಸಾದ್ ಸಾರಥ್ಯದ ತಂಡ ಅಭಿಯಾನ ಆರಂಭಿಸಲಿದ್ದು, 2016ರಲ್ಲಿ ತವರಿನಲ್ಲೇ ಪ್ರಶಸ್ತಿ ಗೆದ್ದ ಸಾಧನೆ ಪುನರಾವರ್ತಿಸುವ ಹಂಬಲದಲ್ಲಿದೆ. ಕನ್ನಡಿಗ ಬಿಜೆ ಕಾರ್ಯಪ್ಪ ಕಿರಿಯರ ತಂಡದ ಮುಖ್ಯ ಕೋಚ್ ಆಗಿದ್ದಾರೆ.
ಸೀನಿಯರ್ ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ 41 ವರ್ಷಗಳ ಬಳಿಕ ಪದಕ ಗೆದ್ದ ಸಾಧನೆಯೊಂದಿಗೆ ದೇಶದ ಹಾಕಿ ವಲಯಕ್ಕೆ ಹೊಸ ಆತ್ಮವಿಶ್ವಾಸ ತುಂಬಿದೆ. ಕಿರಿಯರ ತಂಡವೂ ಅದೇ ವಿಶ್ವಾಸದೊಂದಿಗೆ ಕಣಕ್ಕಿಳಿಯಲಿದ್ದು, 3ನೇ ಬಾರಿ ವಿಶ್ವಕಪ್‌ಗೆ ಮುತ್ತಿಕ್ಕುವ ಕನಸಿನಲ್ಲಿದೆ. ಭಾರತ 2001ರಲ್ಲಿ ಮೊದಲ ಬಾರಿ ಜೂ. ವಿಶ್ವಕಪ್ ಜಯಿಸಿತ್ತು. 5 ವರ್ಷಗಳ ಹಿಂದೆ ಲಖನೌದಲ್ಲಿ ನಡೆದ ಟೂರ್ನಿಯಲ್ಲಿ 2ನೇ ಬಾರಿ ಗೆದ್ದಿತ್ತು. ಆಗಿನ ತಂಡದ 9 ಆಟಗಾರರು ನಂತರದಲ್ಲಿ ಸೀನಿಯರ್ ತಂಡದ ಭಾಗವಾಗಿದ್ದು, ಟೋಕಿಯೊದಲ್ಲೂ ಮಿಂಚಿದ್ದರು.
ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಜೂ. ವಿಶ್ವಕಪ್ ಚಿಮ್ಮುಹಲಗೆ ಎಂಬುದು ಅದರಿಂದ ಸ್ಪಷ್ಟವಾಗಿತ್ತು. ಟೋಕಿಯೊ ಒಲಿಂಪಿಕ್ಸ್ ಪದಕ ವಿಜೇತ ತಂಡದ ಭಾಗವಾಗಿದ್ದ ವಿವೇಕ್ ಸಾಗರ್ ಪ್ರಸಾದ್ ಅನುಭವ ನೆರವಾಗಲಿದೆ. ಸೀನಿಯರ್ ತಂಡದ ನಾಯಕ ಮನ್‌ಪ್ರೀತ್ ಸಿಂಗ್, ಗೋಲು ಕೀಪರ್ ಪಿಆರ್ ಶ್ರೀಜೇಶ್ ಮತ್ತು ಮುಖ್ಯ ಕೋಚ್ ಗ್ರಹಾಂ ರೀಡ್ ಕೂಡ ಕಿರಿಯರ ತಂಡದ ಸಿದ್ಧತೆ ನೆರವಾಗಿದ್ದಾರೆ.
ಆತಿಥೇಯ ಭಾರತದ ಜತೆಗೆ ಬೆಲ್ಜಿಯಂ, ಜರ್ಮನಿ ಮತ್ತು ನೆದರ್ಲೆಂಡ್ ತಂಡಗಳೂ ಟೂರ್ನಿಯ ಫೇವರಿಟ್ ಪಟ್ಟಿಯಲ್ಲಿವೆ. ನೆರೆಯ ಪಾಕಿಸ್ತಾನ ತಂಡ ಕೂಡ ಟೂರ್ನಿಯಲ್ಲಿ ಆಡಲಿದೆ. ಕರೊನಾ ಸಂಬಂಧಿತ ಪ್ರಯಾಣ ನಿರ್ಬಂಧಗಳಿಂದಾಗಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಟೂರ್ನಿಯಿಂದ ಹಿಂದೆ ಸರಿದಿವೆ. ಕಳಿಂಗ ಕ್ರೀಡಾಂಗಣದಲ್ಲಿ ನಡೆಯಲಿರುವ ಟೂರ್ನಿಗೆ ಬಯೋ-ಬಬಲ್ ವಾತಾವರಣ ನಿರ್ಮಿಸಲಾಗಿದ್ದು, ಪಂದ್ಯ ವೀಕ್ಷಿಸಲು ಪ್ರೇಕ್ಷಕರಿಗೆ ಪ್ರವೇಶವಿರುವುದಿಲ್ಲ.
ಭಾರತ ತಂಡ: ವಿವೇಕ್ ಸಾಗರ್ ಪ್ರಸಾದ್ (ನಾಯಕ), ಸಂಜಯ್ (ಉಪನಾಯಕ), ಪ್ರಶಾಂತ್ ಚೌಹಾಣ್, ಪವನ್ (ಗೋಲು ಕೀಪರ್‌ಗಳು), ಶರ್ದಾನಂದ್ ತಿವಾರಿ, ಸುದೀಪ್ ಚಿರ್ಮಕೊ, ರಾಹುಲ್ ಕುಮಾರ್ ರಜ್‌ಭರ್, ಮಣಿಂದರ್ ಸಿಂಗ್, ವಿಷ್ಣುಕಾಂತ್ ಸಿಂಗ್, ಅಂಕಿತ್ ಪಾಲ್, ಉತ್ತಮ್ ಸಿಂಗ್, ಸುನೀಲ್ ಜೋಜೊ, ಮಂಜೀತ್, ರಬಿಚಂದ್ರ ಸಿಂಗ್ ಮೊಯಿರಂಗ್‌ಥೆಮ್, ಅಭಿಷೇಕ್ ಲಾಕ್ರಾ, ಯಶ್‌ದೀಪ್ ಸಿವಾಚ್, ಗುರ್ಮುಖ್ ಸಿಂಗ್, ಅರೈಜೀತ್ ಸಿಂಗ್ ಹುಂಡಲ್.
ಭಾರತದ ಪಂದ್ಯಗಳು:
ದಿನಾಂಕ: ಎದುರಾಳಿ; ಆರಂಭ
ನ. 24: ಫ್ರಾನ್ಸ್; ರಾತ್ರಿ 8.00
ನ. 25: ಕೆನಡ; ರಾತ್ರಿ 7.30
ನ. 27: ಪೋಲೆಂಡ್; ರಾತ್ರಿ 7.30
*ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಗುಂಪುಗಳು:
ಎ: ಬೆಲ್ಜಿಯಂ, ಚಿಲಿ, ಮಲೇಷ್ಯಾ, ದಕ್ಷಿಣ ಆಫ್ರಿಕಾ.
ಬಿ: ಭಾರತ, ್ರಾನ್ಸ್, ಕೆನಡ, ಪೋಲೆಂಡ್.
ಸಿ: ದಕ್ಷಿಣ ಕೊರಿಯಾ, ನೆದರ್ಲೆಂಡ್ಸ್, ಸ್ಪೇನ್, ಅಮೆರಿಕ.
ಡಿ: ಅರ್ಜೆಂಟೀನಾ, ಈಜಿಪ್ಟ್, ಜರ್ಮನಿ, ಪಾಕಿಸ್ತಾನ.
ಟೂರ್ನಿ ಸ್ವರೂಪ
ಟೂರ್ನಿಯಲ್ಲಿ ಆಡುವ ಒಟ್ಟು 16 ತಂಡಗಳನ್ನು ತಲಾ 4ರಂತೆ 4 ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ಪ್ರತಿ ಗುಂಪಿನ ಅಗ್ರ 2 ತಂಡಗಳು ನಾಕೌಟ್ ಹಂತಕ್ಕೇರಲಿವೆ. ಡಿ. 1ರಂದು ಕ್ವಾರ್ಟರ್ಫೈನಲ್ಸ್, ಡಿ. 3ರಂದು ಸೆಮಿಫೈನಲ್ಸ್ ಮತ್ತು ಡಿ. 5ರಂದು 3ನೇ ಸ್ಥಾನದ ಪಂದ್ಯ ಮತ್ತು ಫೈನಲ್ ನಡೆಯಲಿದೆ.
5: ಹಿಂದಿನ 11 ಆವೃತ್ತಿಗಳಲ್ಲಿ ಜರ್ಮನಿ ಗರಿಷ್ಠ 6 ಬಾರಿ ಪ್ರಶಸ್ತಿ ಜಯಿಸಿದ್ದರೆ, ಭಾರತ 2 ಬಾರಿ ಚಾಂಪಿಯನ್ ಆಗಿದೆ. ಆಸ್ಟ್ರೇಲಿಯಾ, ಪಾಕಿಸ್ತಾನ, ಅರ್ಜೆಂಟೀನಾ ತಲಾ 1 ಬಾರಿ ಜಯಿಸಿವೆ.