ಡೆಹ್ರಾಡೂನ್: ಬೆಂಗಳೂರಿನ 15 ವರ್ಷದ ಬಾಲಕ ಜೊನಾಥನ್ ಆಂಥೋನಿ ಶೂಟಿಂಗ್ ಸ್ಪರ್ಧೆಯ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಕಂಚು ವಿಜೇತ ಸರಬ್ಜೋತ್ ಸಿಂಗ್ ಮತ್ತು ಸೌರಭ್ ಚೌಧರಿಯಂಥ ಪ್ರಮುಖ ಶೂಟರ್ಗಳಿಗೆ ಆಘಾತ ನೀಡುವ ಮೂಲಕ ಸ್ವರ್ಣ ಪದಕ ಗೆದ್ದು ಗಮನಸೆಳೆದಿದ್ದಾರೆ.
2022ರಲ್ಲಿ 8ನೇ ತರಗತಿಯಲ್ಲಿದ್ದಾಗ ಸಿಬಿಎಸ್ಸಿ ದಣ ವಲಯ ರೈಲ್ ಶೂಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಶೂಟಿಂಗ್ ವೃತ್ತೀಜಿವನವನ್ನು ಆರಂಭಿಸಿದ್ದ ಜೊನಾಥನ್, ಫೈನಲ್ ಸ್ಪರ್ಧೆಯಲ್ಲಿ 240.7 ಅಂಕ ಕಲೆಹಾಕುವ ಮೂಲಕ ಅಗ್ರಸ್ಥಾನ ಅಲಂಕರಿಸಿದರು. ಇದು ಸೀನಿಯರ್ ವಿಭಾಗದಲ್ಲಿ ಅವರ ಅತಿದೊಡ್ಡ ಸಾಧನೆ ಎನಿಸಿದೆ. ಸರ್ವೀಸಸ್ನ ಅನುಭವಿಗಳಾದ ರವಿಂದರ್ ಸಿಂಗ್ (240.3) ಮತ್ತು ಗುರುಪ್ರೀತ್ ಸಿಂಗ್ (220.1) ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದುಕೊಂಡರು. ಪ್ಯಾರಿಸ್ನಲ್ಲಿ ಮನುಭಾಕರ್ ಜತೆಗೆ ಮಿಶ್ರ ವಿಭಾಗದಲ್ಲಿ ಪದಕ ಗೆದ್ದಿದ್ದ ಸರಬ್ಜೋತ್ ಸಿಂಗ್ 4ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಒಲಿಂಪಿಯನ್ ಹಾಗೂ ರಾಷ್ಟ್ರೀಯ ದಾಖಲೆ ವೀರ ಸೌರಭ್ ಚೌಧರಿ ೈನಲ್ಗೇರಲು ವಿಫಲರಾದರು.
"ಈ ಗೆಲುವು ನನಗೆ ರೋಮಾಂಚನ ತಂದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿರುವ ಪ್ರತಿಭಾವಂತ ಶೂಟರ್ಗಳ ಎದುರು ಬಂದಿರುವ ಈ ಗೆಲುವು ಅತ್ಯಂತ ಮಹತ್ವದ್ದಾಗಿದೆ. ಇಂದು ನನ್ನ ದಿನವಾಗಿತ್ತು' ಎಂದು ಜೊನಾಥನ್ ಆಂಥೋನಿ ಸ್ವರ್ಣ ಸಾಧನೆಯ ಬಳಿಕ ಹೇಳಿದರು.
ಒಲಿಂಪಿಯನ್ ಸಿಫ್ಟ್ ಕೌರ್ಗೆ ಸ್ವರ್ಣ
ಒಲಿಂಪಿಯನ್ ಹಾಗೂ ಏಷ್ಯನ್ ಗೇಮ್ಸ್ ಸ್ವರ್ಣ ವಿಜೇತೆ ಪಂಜಾಬ್ನ 23 ವರ್ಷದ ಸಿಫ್ಟ್ ಕೌರ್ ಸಮ್ರಾ ಮಹಿಳೆಯರ 50 ಮೀ. ರೈಲ್ 3 ಪೊಸಿಷನ್ ಶೂಟಿಂಗ್ ಸ್ಪರ್ಧೆಯಲ್ಲಿ 461.2 ಅಂಕ ಕಲೆಹಾಕುವ ಮೂಲಕ ಚಿನ್ನದ ಪದಕ ಗೆದ್ದುಕೊಂಡರು. ಮತ್ತೋರ್ವ ಒಲಿಂಪಿಯನ್ ಅಂಜುಮ್ ಮೌಡ್ಗಿಲ್ (458.7) ಬೆಳ್ಳಿ ಪದಕ ಗಳಿಸಿದರು. ತೆಲಂಗಾಣದ ಸೌರಭಿ ಭಾರಾಧ್ವಾಜ್ ಕಂಚು ಪಡೆದರು.
ಸೈಕ್ಲಿಂಗ್ನಲ್ಲಿ ಕೀರ್ತಿಗೆ ಚಿನ್ನ
ಕರ್ನಾಟಕದ ಸೈಕ್ಲಿಸ್ಟ್ ಕೀರ್ತಿ ರಂಗಸ್ವಾಮಿ ಮಹಿಳೆಯರ 10 ಕಿಲೋಮೀಟರ್ ಎಲೈಟ್ ಸ್ಕ್ರಾಚ್ ರೇಸ್ನಲ್ಲಿ ಸ್ವರ್ಣ ಪದಕ ಗೆದ್ದುಕೊಂಡರು. ಇದು ಕೂಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ರಾಜ್ಯಕ್ಕೆ 2ನೇ ದಿನದ ಪದಕವಾಗಿದೆ. ಅಸ್ಸಾಂನ ಚಾಯನಿಕಾ ಗೊಗೋಯಿ ಬೆಳ್ಳಿ ಮತ್ತು ಹರಿಯಾಣದ ಮೀನಾ ಕಂಚಿನ ಪದಕ ಪಡೆದರು.