ಕ್ರೀಡೆ

ದ್ರಾವಿಡ್ ವಿಶ್ವದಾಖಲೆ ಮುರಿದ ಜೋರೂಟ್​..ಮುಂದಿನ ಗುರಿ ತೆಂಡೂಲ್ಕರ್!

Webdesk - Narayanaswamy

ನವದೆಹಲಿ: ಶ್ರೀಲಂಕಾ ಕ್ರಿಕೆಟ್ ತಂಡ ಪ್ರಸ್ತುತ ಇಂಗ್ಲೆಂಡ್ ಪ್ರವಾಸದಲ್ಲಿದ್ದು, ಉಭಯ ತಂಡಗಳ ನಡುವೆ 3 ಟೆಸ್ಟ್ ಸರಣಿ ಪಂದ್ಯಗಳು ನಡೆಯಲಿವೆ. ಸರಣಿಯ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ 5 ವಿಕೆಟ್‌ಗಳಿಂದ ಶ್ರೀಲಂಕಾವನ್ನು ಸೋಲಿಸಿತು. ಇಂಗ್ಲೆಂಡ್‌ನ ಅನುಭವಿ ಆಲ್‌ರೌಂಡರ್ ಜೋ ರೂಟ್ ಎರಡನೇ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸುವ ಮೂಲಕ ರಾಹುಲ್ ದ್ರಾವಿಡ್ ಅವರ ವಿಶೇಷ ದಾಖಲೆಯನ್ನು ಜೋ ರೂಟ್ ಮುರಿದಿದ್ದಾರೆ.

ಜೋ ರೂಟ್ 128 ಎಸೆತಗಳಲ್ಲಿ 62 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಮೂಲಕ ಇದೀಗ ಟೆಸ್ಟ್‌ನಲ್ಲಿ ಅತಿ ಹೆಚ್ಚು ಅರ್ಧಶತಕ ಸಿಡಿಸಿದ ಮೂರನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲ, ಜೋ ರೂಟ್ ಅವರು ಅಲನ್ ಬಾರ್ಡರ್ ಅವರ ದಾಖಲೆಯನ್ನೂ ಮುರಿದಿದ್ದಾರೆ.

ರಾಹುಲ್ ದ್ರಾವಿಡ್ ತಮ್ಮ ವೃತ್ತಿ ಜೀವನದಲ್ಲಿ 164 ಟೆಸ್ಟ್ ಪಂದ್ಯಗಳನ್ನು ಆಡಿ, 63 ಅರ್ಧಶತಕಗಳನ್ನು ಗಳಿಸಿದ್ದಾರೆ. ಅದೇ ರೀತಿ ಅಲನ್ ಬಾರ್ಡರ್ ಟೆಸ್ಟ್‌ನಲ್ಲಿ 63 ಅರ್ಧಶತಕಗಳನ್ನು ಗಳಿಸಿದ್ದಾರೆ. ಇದೀಗ ಜೋ ರೂಟ್ ಇಬ್ಬರೂ ದೈತ್ಯರನ್ನು ಹಿಂದಿಕ್ಕಿ 64ನೇ ಅರ್ಧಶತಕ ಗಳಿಸಿದ್ದಾರೆ.

ಜೋರೂಟ್ ಇದುವರೆಗೆ 144 ಟೆಸ್ಟ್‌ಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ, ಅವರು 263 ಇನ್ನಿಂಗ್ಸ್‌ಗಳಲ್ಲಿ 50.33 ಸರಾಸರಿ ಮತ್ತು 56.70 ಸ್ಟ್ರೈಕ್ ರೇಟ್‌ನಲ್ಲಿ 12131 ರನ್ ಗಳಿಸಿದ್ದಾರೆ. ಇಂಗ್ಲೆಂಡ್‌ನ ಈ ಆಲ್‌ರೌಂಡರ್ ಟೆಸ್ಟ್‌ನಲ್ಲಿ 64 ಅರ್ಧಶತಕಗಳನ್ನು ಗಳಿಸಿದ್ದಾರೆ. ಇದಲ್ಲದೆ, ಅವರು ಕ್ರಿಕೆಟ್‌ನ ಅತಿದೊಡ್ಡ ಸ್ವರೂಪದಲ್ಲಿ 32 ಶತಕಗಳನ್ನು ಸಹ ಗಳಿಸಿದ್ದಾರೆ.

ಇನ್ನು ಟೆಸ್ಟ್‌ನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಗಳಿಸಿದ ಬ್ಯಾಟ್ಸ್‌ಮನ್ ಗಳೆಂದರೆ, ಸಚಿನ್ ತೆಂಡೂಲ್ಕರ್ 68, ಶಿವ ನಾರಾಯಣ ಚಂದ್ರಪಾಲ್ 66, ಜೋ ರೂಟ್ 64, ರಾಹುಲ್ ದ್ರಾವಿಡ್ 63. ಅಲನ್ ಬಾರ್ಡರ್ 63 ಅರ್ಧ ಶತಕ ಗಳಿಸಿದ್ದಾರೆ.