ದುಬೈ: ಶ್ರೀಲಂಕಾದ ಮಹೇಲ ಜಯವರ್ಧನೆ, ದಕ್ಷಿಣ ಆಫ್ರಿಕಾದ ಮಾಜಿ ಆಲ್ರೌಂಡರ್ ಶಾನ್ ಪೊಲ್ಲಾಕ್ ಹಾಗೂ ಇಂಗ್ಲೆಂಡ್‌ನ ಮಾಜಿ ಬ್ಯಾಟರ್ ಜನೆಟ್ಟೆ ಬ್ರಿಟಿನ್ ಹೆಸರುಗಳನ್ನು ಟಿ20 ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಐಸಿಸಿ ಹಾಲ್ ಆಫ್ ಫೇಮ್ ಗೆ ಸೇರ್ಪಡೆಗೊಳಿಸಲಾಗುತ್ತಿದೆ. ಈ ಮೂವರು ಕ್ರಿಕೆಟ್‌ಗೆ ನೀಡಿರುವ ಸೇವೆಯನ್ನು ಪರಿಗಣಿಸಿ ಐಸಿಸಿ ಈ ಗೌರವ ನೀಡುತ್ತಿದೆ. 2009ರಲ್ಲಿ ಆರಂಭಗೊಂಡ ಹಾಲ್ ಆಫ್ ಫೇಮ್ ನಲ್ಲಿ ಇದುವರೆಗೂ 106 ಮಂದಿಯನ್ನು ಸ್ಥಾನ ಪಡೆದಿದ್ದಾರೆ. 1979 ರಿಂದ 1998 ರವರೆಗೆ ಇಂಗ್ಲೆಂಡ್ ಮಹಿಳಾ ತಂಡದಲ್ಲಿದ್ದ ಜನೆಟ್ಟೆ, 27 ಟೆಸ್ಟ್, 63 ಏಕದಿನ ಪಂದ್ಯಗಳಿಂದ ಕ್ರಮವಾಗಿ 1935 ಹಾಗೂ 2121 ರನ್ ಬಾರಿಸಿದ್ದಾರೆ. ಬ್ರಿಟಿನ್ 2017ರಲ್ಲಿ ನಿಧನರಾದರು.
ಶ್ರೀಲಂಕಾದ ದಿಗ್ಗಜ ಆಟಗಾರ ಎನಿಸಿರುವ ಮಹೇಲ ಜಯವರ್ಧನೆ, 2014ರ ಟಿ20 ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದರು. 149 ಟೆಸ್ಟ್ ಪಂದ್ಯಗಳಿಂದ 34 ಶತಕ, 50 ಅರ್ಧಶತಕ ಸೇರಿದಂತೆ 11814 ರನ್ ಬಾರಿಸಿದ್ದರೆ, 448 ಏಕದಿನ ಪಂದ್ಯಗಳಿಂದ 19 ಶತಕ, 77 ಅರ್ಧಶತಕ ಒಳಗೊಂಡಂತೆ 12650 ರನ್ ಬಾರಿಸಿದ್ದಾರೆ. 55 ಟಿ20 ಪಂದ್ಯಗಳಿಂದ 1 ಶತಕ ಸೇರಿದಂತೆ 1493 ರನ್ ಕಲೆಹಾಕಿದ್ದರು. ದ.ಆಫ್ರಿಕಾದ ಸಾರ್ವಕಾಲಿಕ ಶ್ರೇಷ್ಠ ಆಲ್ರೌಂಡರ್ ಎನಿಸಿರುವ ಪೊಲ್ಲಾರ್ಕ್, ಟೆಸ್ಟ್ ಹಾಗೂ ಏಕದಿನ ಪಂದ್ಯಗಳಿಂದ 3 ಸಾವಿರ ರನ್, 300 ವಿಕೆಟ್ ಕಬಳಿಸಿದ್ದಾರೆ.