ಕ್ರೀಡೆ

ಐಸಿಸಿಯ ನೂತನ ಅಧ್ಯಕ್ಷರಾಗಿ Jay Shah ಪದಗ್ರಹಣ; ಬಳಿಕ ಹೇಳಿದ್ದಿಷ್ಟು

ನವದೆಹಲಿ: ಬಿಸಿಸಿಐನ ನಿರ್ಗಮಿತ ಕಾರ್ಯದರ್ಶಿ ಜಯ್ ಷಾ (Jay Shah) ಅವರು ಭಾನುವಾರ (ಡಿಸೆಂಬರ್​ 01) ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ (ICC) ಅಧಿಕಾರ ಸ್ವೀಕರಿಸಿದ್ದಾರೆ. 

2024ರ ಆಗಸ್ಟ್​ನಲ್ಲಿ ನಡೆದ ಸಭೆಯಲ್ಲಿ ಜಯ್​ ಷಾ (Jay Shah) ಐಸಿಸಿ ಅಧ್ಯಕ್ಷರಾಗಿ (ICC President) ಅವಿರೋಧವಾಗಿ ಆಯ್ಕೆಯಾಗಿದ್ದರು. ಈ ಮೂಲಕ ಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಐದನೇ ಭಾರತೀಯ ಎಂಬ ಹೆಗ್ಗಳಿಕೆಗೆ ಜಯ್​ ಷಾ ಪಾತ್ರರಾಗಿದ್ದಾರೆ. ಜಯ್​ ಷಾಗೂ ಮೊದಲು ಜಗಮೋಹನ್ ದಾಲ್ಮಿಯಾ, ಶರದ್​ ಪವಾರ್​, ಶಶಾಂಕ್​ ಮನೋಹರ್​, ಎನ್​. ಶ್ರೀನಿವಾಸನ್​ ಐಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 

ಚಾಂಪಿಯನ್​​ ಟ್ರೋಫಿಗೆ (Champions Trophy) ಸಂಬಂಧಿಸಿದಂತೆ ಸದ್ಯ ಭುಗಿಲೆದ್ದಿರುವ ವಿವಾದಗಳು ನಡುವೆಯೇ ಜಯ್​ ಷಾ ಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದು, ಟೂರ್ನಿಗೆ ಸಂಬಂಧಿಸಿದಂತೆ ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಜಯ್ ಷಾ (Jay Shah) ಪ್ರಮುಖ ಪಾತ್ರ ವಹಿಸಲಿದ್ದಾರೆ.

ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಜಯ್​ ಷಾ (Jay Shah), ಐಸಿಸಿ ಅಧ್ಯಕ್ಷನಾಗಿ (ICC President) ಅಧಿಕಾರ ವಹಿಸುತ್ತಿರುವುದು ನನಗೆ ತುಂಬಾ ಸಂತೋಷದ ವಿಚಾರವಾಗಿದೆ. ನನ್ನನ್ನು ಬೆಂಬಲಿಸಿದ ಐಸಿಸಿ ಸದಸ್ಯ ರಾಷ್ಟ್ರಗಳಿಗೆ ನಾನು ಕೃತಜ್ಞನಾಗಿದ್ದೇನೆ. 2028 ರಲ್ಲಿ ನಡೆಯಲ್ಲಿರುವ ಲಾಸ್ ಏಂಜಲೀಸ್ ಒಲಂಪಿಕ್ ಗೇಮ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆ ಮತ್ತು ಮಹಿಳಾ ಕ್ರಿಕೆಟ್ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. 

ಕ್ರಿಕೆಟ್‌ನಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚು ಮಾಡಲು ನಾವು ಕೆಲಸ ಮಾಡುತ್ತಿದ್ದೇವೆ. ಜಾಗತಿಕ ಮಟ್ಟದಲ್ಲಿ ಕ್ರಿಕೆಟ್‌ಗೆ ಅಪಾರ ಕ್ರೇಜ್ ಇದೆ. ಈ ಅವಕಾಶಗಳನ್ನು ಬಳಸಿಕೊಳ್ಳಲು ಮತ್ತು ಆಟವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಐಸಿಸಿ ತಂಡ ಮತ್ತು ಸದಸ್ಯ ರಾಷ್ಟ್ರಗಳೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಐಸಿಸಿಯ ನೂತನ ಅಧ್ಯಕ್ಷ ಜಯ್​ ಷಾ (ICC President Jay Shah) ಹೇಳಿದ್ದಾರೆ.

ಇದಕ್ಕೂ ಮುನ್ನ ಗ್ರೆಗ್ ಬಾರ್ಕ್ಲೇ ಅವರು 2020 ರಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಇದಾದ ಬಳಿಕ 2022ರಲ್ಲಿ ಅವರು ಮರು ಚುನಾಯಿತರಾಗಿದ್ದರು. ಇದೀಗ ಅವರ ಕಾರ್ಯಾವಧಿ ಮುಗಿಯುತ್ತಿದ್ದು, ಹೀಗಾಗಿ ಈ ಬಾರಿ ಚುನಾವಣೆ ಘೋಷಿಸಲಾಗಿತ್ತು. ಆದರೀಗ ಅಧ್ಯಕ್ಷ ಹುದ್ದೆಗೆ ಜಯ್ ಷಾ  ಹೆಸರು ಮಾತ್ರ ನಾಮನಿರ್ದೇಶನಗೊಂಡಿದ್ದು, ಅದರಂತೆ ಅವಿರೋಧವಾಗಿ ಆಯ್ಕೆಯಾಗಿದ್ದರು.