ಕ್ರೀಡೆ

ಟೆಸ್ಟ್​ ಕ್ರಿಕೆಟ್​ನಿಂದ ಜಸ್​ಪ್ರೀತ್​ ಬುಮ್ರಾ ನಿವೃತ್ತಿ? : ಈಗ ಬ್ಯಾಟಿಂಗ್​ ಸುಲಭವೆಂದ ಪೀರ್ಟಸೆನ್​

ಲಂಡನ್​: ಸ್ಟಾರ್​ ಬ್ಯಾಟರ್​ಗಳಾದ ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ ನಂತರ ವೇಗಿ ಜಸ್​ಪ್ರೀತ್​ ಬುಮ್ರಾ ಕೂಡ ಟೆಸ್ಟ್​ ಕ್ರಿಕೆಟ್​ನಿಂದ ನಿವೃತ್ತಿ ಹೊಂದುವ ಸಾಧ್ಯತೆ ಕಾಣಿಸಿದೆ. ಮಾಜಿ ಕ್ರಿಕೆಟಿಗ ಮೊಹಮದ್​ ಕೈಫ್ ಇಂಥದ್ದೊಂದು ಸುದ್ದಿಯ ಕಿಡಿ ಹೊತ್ತಿಸಿದ್ದಾರೆ. ಮ್ಯಾಂಚೆಸ್ಟರ್​ ಟೆಸ್ಟ್​ನಲ್ಲಿ ಬುಮ್ರಾ ಆಟವನ್ನು ಗಮನಿಸಿ ಕೈಫ್ ಈ ಭವಿಷ್ಯ ನುಡಿದಿದ್ದಾರೆ.

ಬುಮ್ರಾ ಟೆಸ್ಟ್​ನಲ್ಲಿ ಆಡುವ ಉತ್ಸಾಹ ಹೊಂದಿದ್ದರೂ, ಅವರ ದೇಹ ಅದಕ್ಕೆ ಸಾಥ್​ ನೀಡುತ್ತಿಲ್ಲ. ಅವರ ಬೌಲಿಂಗ್​ ವೇಗವೂ ಕುಸಿತ ಕಾಣುತ್ತಿದೆ. ಇದರಿಂದಾಗಿ ಅವರಿಗೆ ತಂಡಕ್ಕೆ ನಿರೀತ ರೀತಿಯಲ್ಲಿ ಕೊಡುಗೆ ನೀಡಲು ಸಾಧ್ಯವಾಗುತ್ತಿಲ್ಲ. ಜತೆಗೆ ಅವರಿಗೆ ತಮ್ಮದೇ ಗುಣಮಟ್ಟವನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಕೈಫ್ ವಿವರಿಸಿದ್ದಾರೆ. ಫಿಟ್ನೆಸ್​ ಸಮಸ್ಯೆಯಿಂದಾಗಿ ಬುಮ್ರಾ ಪಂದ್ಯದ ನಡುವೆ ಆಗಾಗ ಮೈದಾನದಿಂದ ಹೊರಹೋಗಿಬರುತ್ತಿರುವುದು ಸಾಮಾನ್ಯವೆನಿಸಿದೆ. ಪಂದ್ಯದ 3ನೇ ದಿನ ಅವರು ಕೇವಲ 1 ವಿಕೆಟ್​ ಗಳಿಸಲಷ್ಟೇ ಶಕ್ತರಾಗಿದ್ದರು.

ಈಗ ಬ್ಯಾಟಿಂಗ್​ ಸುಲಭವೆಂದ ಪೀರ್ಟಸೆನ್​

ಆಧುನಿಕ ಕ್ರಿಕೆಟ್​ನಲ್ಲಿ ಬ್ಯಾಟಿಂಗ್​ ಸುಲಭವಾಗಿದೆ. 20-25 ವರ್ಷ ಹಿಂದಿನಷ್ಟು ಕಷ್ಟ ಈಗಿಲ್ಲ. ಬೌಲಿಂಗ್​ ಗುಣಮಟ್ಟ ಕುಸಿದಿರುವುದು ಕೂಡ ಇದಕ್ಕೆ ಕಾರಣವಾಗಿದೆ ಎಂದು ಇಂಗ್ಲೆಂಡ್​ ಮಾಜಿ ಬ್ಯಾಟರ್​ ಕೆವಿನ್​ ಪೀರ್ಟಸೆನ್​ ಅಭಿಪ್ರಾಯಪಟ್ಟಿದ್ದಾರೆ. ಇಂಗ್ಲೆಂಡ್​ ಬ್ಯಾಟರ್​ ಜೋ ರೂಟ್​ ಟೆಸ್ಟ್​ ಕ್ರಿಕೆಟ್​ ರನ್​ ಗಳಿಕೆಯಲ್ಲಿ ಬ್ಯಾಟಿಂಗ್​ ದಿಗ್ಗಜರಾದ ರಿಕಿ ಪಾಂಟಿಂಗ್​, ಜಾಕ್ಸ್​ ಕಾಲಿಸ್​, ರಾಹುಲ್​ ದ್ರಾವಿಡ್​ರನ್ನು ಹಿಂದಿಕ್ಕಿ ಸಚಿನ್​ ತೆಂಡುಲ್ಕರ್​ ಸನಿಹ ತಲುಪಿರುವ ಬೆನ್ನಲ್ಲೇ ಪೀರ್ಟಸೆನ್​ ಸಾಮಾಜಿಕ ಜಾಲತಾಣದಲ್ಲಿ ಈ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

"ಈಗ 20-25 ವರ್ಷ ಹಿಂದಿಗಿಂತ ಎರಡು ಪಟ್ಟು ಬ್ಯಾಟಿಂಗ್​ ಸುಲಭವಾಗಿದೆ. ಆಗ ವಕಾರ್​, ಅಖ್ತರ್​, ಅಕ್ರಮ್​, ಮುಸ್ತಾಕ್​, ಕುಂಬ್ಳೆ, ಶ್ರೀನಾಥ್​, ಹರ್ಭಜನ್​, ಡೊನಾಲ್ಡ್​, ಪೊಲ್ಲಾಕ್​, ಕ್ಲುಸ್ನರ್​, ಗೋವ್​, ಮೆಕ್​ಗ್ರಾಥ್​, ಲೀ, ವಾರ್ನ್​, ಗಿಲೆಸ್ಪಿ, ಬಾಂಡ್​, ವೆಟ್ಟೋರಿ, ಕೇರ್ನ್ಸ್​, ವಾಸ್​, ಮುರಳೀಧರನ್​, ವಾಲ್ಶ್​, ಆಂಬ್ರೋಸ್​ರಂಥ ಬೌಲರ್​ಗಳಿದ್ದರು. ಈಗ ಅವರೊಂದಿಗೆ ಹೋಲಿಸಬಲ್ಲಂಥ 10 ಬೌಲರ್​ಗಳಾದರೂ ಇರುವರೇ?' ಎಂದು 104 ಟೆಸ್ಟ್​, 136 ಏಕದಿನ ಮತ್ತು 37 ಟಿ20 ಪಂದ್ಯಗಳನ್ನು ಆಡಿರುವ ಪೀರ್ಟಸೆನ್​ ಪ್ರಶ್ನಿಸಿದ್ದಾರೆ.