ನವದೆಹಲಿ: ಜಸ್ಪ್ರೀತ್ ಬುಮ್ರಾ ಬಾರ್ಡರ್-ಗಾವಸ್ಕರ್ ಟ್ರೋಫಿಯಲ್ಲಿ 2 ಪಂದ್ಯಗಳಿಗೆ ಹಂಗಾಮಿ ನಾಯಕರಾಗಿದ್ದರೂ, ರೋಹಿತ್ ಶರ್ಮ ಉತ್ತರಾಧಿಕಾರಿಯಾಗಿ ಟೆಸ್ಟ್ ತಂಡಕ್ಕೆ ಅವರನ್ನು ಕಾಯಂ ನಾಯಕರನ್ನಾಗಿ ನೇಮಿಸುವುದು ಅನುಮಾನ ಎನ್ನಲಾಗಿದೆ. ಬುಮ್ರಾರ ಫಿಟ್ನೆಸ್ ಸಮಸ್ಯೆಯು ಅವರನ್ನು ಸುದೀರ್ಘ ಅವಧಿಗೆ ನಾಯಕರಾಗಿ ಪರಿಗಣಿಸಲು ಹಿನ್ನಡೆಯಾಗಿದೆ.
ಮುಂದಿನ ಇಂಗ್ಲೆಂಡ್ ಪ್ರವಾಸದ ಸರಣಿಗೆ ಬುಮ್ರಾಗೆ ಟೆಸ್ಟ್ ನಾಯಕತ್ವ ನೀಡಿದರೂ, ಜತೆಗೆ ಭವಿಷ್ಯದ ನಾಯಕನಾಗುವ ಆಟಗಾರನೇ ಉಪನಾಯಕ ಆಗಿರುತ್ತಾನೆ. ರಿಷಭ್ ಪಂತ್ ಮತ್ತು ಯಶಸ್ವಿ ಜೈಸ್ವಾಲ್ ಸದ್ಯ ಈ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ ಎನ್ನಲಾಗಿದೆ.
ಈ ಮುನ್ನ ಹಾರ್ದಿಕ್ ಪಾಂಡ್ಯಗೂ ಫಿಟ್ನೆಸ್ ಸಮಸ್ಯೆಯ ಕಾರಣದಿಂದಾಗಿ ಭಾರತ ಟಿ20 ತಂಡದ ಕಾಯಂ ನಾಯಕತ್ವವನ್ನು ನಿರಾಕರಿಸಲಾಗಿತ್ತು.
ಆಸ್ಟ್ರೆಲಿಯಾ ಪ್ರವಾಸದ ಕೊನೇ ಟೆಸ್ಟ್ ವೇಳೆ ಬೆನ್ನುನೋವಿನ ಸಮಸ್ಯೆಗೆ ಸಿಲುಕಿದ್ದ ಟೀಮ್ ಇಂಡಿಯಾದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಮುಂಬರುವ ಚಾಂಪಿಯನ್ಸ್ ಟ್ರೋಫಿಯ ಲೀಗ್ ಪಂದ್ಯಗಳಿಗೆ ಲಭ್ಯರಾಗುವುದು ಅನುಮಾನವೆನಿಸಿದೆ. ಬುಮ್ರಾ ಬೆನ್ನಿನ ಮೇಲೆ ಊತ ಕಾಣಿಸಿಕೊಂಡಿರುವುದರಿಂದ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (ಎನ್ಸಿಎ) ಹಾಜರಾಗುವಂತೆ ಬಿಸಿಸಿಐ ಸೂಚಿಸಿದೆ. ಎನ್ಸಿಎಯಲ್ಲಿ ಬುಮ್ರಾ ಚೇತರಿಕೆಯ ಬಗ್ಗೆ ನಿಗಾ ವಹಿಸಲಾಗುವುದು ಎನ್ನಲಾಗಿದೆ.
ಬುಮ್ರಾ ಅವರನ್ನು ಟೂರ್ನಿಯ 15 ಆಟಗಾರರ ತಂಡದಲ್ಲಿ ಹೆಸರಿಸಬೇಕೇ ಅಥವಾ ಮೀಸಲು ಆಟಗಾರರ ಬಳಗದಲ್ಲಿ ಸೇರಿಸಬೇಕೇ ಎಂಬ ಬಗ್ಗೆ ಆಯ್ಕೆಗಾರರು ಸದ್ಯ ಪರಿಶೀಲಿಸುತ್ತಿದ್ದಾರೆ. ಚಾಂಪಿಯನ್ಸ್ ಟ್ರೋಫಿಗೆ ಹೆಸರಿಸುವ ತಂಡದಲ್ಲಿ ಬದಲಾವಣೆ ಮಾಡಲು ಫೆ. 12ರವರೆಗೂ ಅವಕಾಶವಿರುವುದರಿಂದ ಐಸಿಸಿಗೆ ಭಾರತ ತನ್ನ ಸಂಭಾವ್ಯ ತಂಡವನ್ನು ಮಾತ್ರ ಮೊದಲಿಗೆ ಸಲ್ಲಿಸಲಿದೆ ಎನ್ನಲಾಗಿದೆ. ಇದರಿಂದ ಫಿಟ್ನೆಸ್ ಅವಲೋಕಿಸಿ ಕೊನೇಕ್ಷಣದಲ್ಲಿ ಬುಮ್ರಾರನ್ನು ಸೇರಿಸಲು ಅಥವಾ ಕೈಬಿಡಲು ಅವಕಾಶವಿರುತ್ತದೆ.