ಲಂಡನ್: ಮಾರಕ ಕರೊನಾ ವೈರಸ್ ಜಪಾನ್ನಲ್ಲಿ ನಿಯಂತ್ರಣಕ್ಕೆ ಬಾರದಿದ್ದರೆ ಮುಂಬರುವ ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟ ರದ್ದಾಗಬಹುದು ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ (ಐಒಸಿ) ಹಿರಿಯ ಸದಸ್ಯರೊಬ್ಬರು ಹೇಳಿದ್ದಾರೆ. ಒಲಿಂಪಿಕ್ಸ್ಗೆ ಇನ್ನೂ 5 ತಿಂಗಳು ಬಾಕಿ ಇದ್ದು, ಕೂಟಕ್ಕೆ 2 ತಿಂಗಳು ಮುಂಚಿತವಷ್ಟೇ ಅಂತಿಮ ನಿರ್ಧಾರ ಹೊರಬೀಳಬಹುದು ಎಂದು ಐಒಸಿಯ ಅತಿ ಸುದೀರ್ಘ ಅವಧಿಯ ಸದಸ್ಯರೆನಿಸಿರುವ ಕೆನಡದ ಮಾಜಿ ಈಜುಪಟು ಡಿಕ್ ಪೌಂಡ್ ಹೇಳಿದ್ದಾರೆ. ಇದರಿಂದ ಟೋಕಿಯೊ ಒಲಿಂಪಿಕ್ಸ್ ಭವಿಷ್ಯದ ಬಗ್ಗೆ ಮೇವರೆಗೂ ಗೊಂದಲಗಳು ಮುಂದುವರಿಯುವುದು ಸ್ಪಷ್ಟವಾಗಿದೆ.
ಐಒಸಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಮುನ್ನ ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ರ್ಚಚಿಸಲಿದೆ ಎಂದು ಪೌಂಡ್ ತಿಳಿಸಿದ್ದಾರೆ. 2 ತಿಂಗಳ ಹಿಂದೆ ಚೀನಾದಲ್ಲಿ ಕಾಣಿಸಿಕೊಂಡ ಕರೊನಾ ವೈರಸ್ ಸದ್ಯ ನೆರೆಯ ಜಪಾನ್ ದೇಶವನ್ನೂ ವ್ಯಾಪಕವಾಗಿ ಕಾಡುತ್ತಿದೆ. 32ನೇ ಆವೃತ್ತಿಯ ಒಲಿಂಪಿಕ್ಸ್ ಜುಲೈ 24ರಿಂದ ಆಗಸ್ಟ್ 9ರವರೆಗೆ ಟೋಕಿಯೊದಲ್ಲಿ ನಡೆಯಬೇಕಿದ್ದು, 11 ಸಾವಿರ ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆ ಇದೆ.
ಮುಂದೂಡಿಕೆ, ಸ್ಥಳಾಂತರ ಸಾಧ್ಯವಿಲ್ಲ: ಕೂಟವನ್ನು ಮುಂದೂಡಲು ಅಥವಾ ಸ್ಥಳಾಂತರಗೊಳಿಸಲು ಅವಕಾಶವಿಲ್ಲ. ಒಂದೋ ಕೂಟವನ್ನು ಸಂಪೂರ್ಣ ರದ್ದುಗೊಳಿಸಬಹುದಷ್ಟೆ. ಕೂಟದಲ್ಲಿ ವಿಶ್ವದ ಬಹುತೇಕ ಎಲ್ಲ ದೇಶಗಳು ಭಾಗವಹಿಸುತ್ತವೆ. ವಾತಾವರಣ ಮತ್ತು ವಿವಿಧ ಕ್ರೀಡಾ ಮತ್ತು ಟಿವಿ ವೇಳಾಪಟ್ಟಿಯನ್ನು ಗಮನಿಸಿ ಕೂಟ ನಿಗದಿಪಡಿಸಲಾಗಿರುತ್ತದೆ. ಹೀಗಾಗಿ ನಾವು ಅಕ್ಟೋಬರ್ಗೆ ಕೂಟವನ್ನು ಮುಂದೂಡುತ್ತೇವೆ ಎಂದು ಸರಳವಾಗಿ ಹೇಳಲು ಸಾಧ್ಯವಿಲ್ಲ ಎಂದು ಡಿಕ್ ಪೌಂಡ್ ವಿವರಿಸಿದ್ದಾರೆ. ಸ್ಥಳಾಂತರಗೊಳಿಸಿದರೆ, ಯಾವುದೇ ದೇಶಕ್ಕಾದರೂ ಇಷ್ಟು ಕಡಿಮೆ ಸಮಯದಲ್ಲಿ 17 ದಿನಗಳ ಕ್ರೀಡಾಕೂಟವನ್ನು ಆಯೋಜಿಸಲು ಸಾಧ್ಯವಾಗದು ಎಂದಿದ್ದಾರೆ.
ಟೋಕಿಯೊ ಸಂಘಟಕರಿಂದ ಸ್ಪಷ್ಟನೆ: ಕರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಜಪಾನ್, ಮುಂದಿನ 2 ವಾರಗಳ ದೇಶದಲ್ಲಿ ನಡೆಯಬೇಕಿದ್ದ ಹಲವು ಕ್ರೀಡಾಕೂಟಗಳನ್ನು ಮುಂದೂಡಿಕೆ ಅಥವಾ ರದ್ದುಗೊಳಿಸಿದೆ. ಇದರ ನಡುವೆಯೂ ಟೋಕಿಯೊ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಅನ್ನು ನಿಗದಿಯಂತೆಯೇ ಆಯೋಜಿಸುವ ವಿಶ್ವಾಸವನ್ನು ಸಂಘಟನಾ ಸಂಸ್ಥೆ ವ್ಯಕ್ತಪಡಿಸಿದೆ. ಕರೊನಾ ನಿಯಂತ್ರಣಕ್ಕಾಗಿ 2 ವಾರಗಳ ಕಾಲ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆ ಸ್ಥಗಿತಗೊಳಿಸುವಂತೆ ಜಪಾನ್ ಪ್ರಧಾನಿ ಶಿಂಜೊ ಅಬೆ ಅವರೇ ಮನವಿ ಮಾಡಿಕೊಂಡಿದ್ದಾರೆ. ಟೋಕಿಯೊ ಒಲಿಂಪಿಕ್ಸ್ ಕ್ರೀಡಾಜ್ಯೋತಿ ರಿಲೇ ಮಾರ್ಚ್ 26ರಂದು ಆರಂಭಗೊಳ್ಳಬೇಕಿದೆ. ‘ಒಲಿಂಪಿಕ್ಸ್ ರದ್ದುಗೊಳಿಸುವ ಯೋಚನೆ ನಮಗಿಲ್ಲ. ಬದಲಾಗಿ ಕರೊನಾ ಸೋಂಕು ಕಾಡದಂತೆ ಹೇಗೆ ಕೂಟವನ್ನು ಆಯೋಜಿಸಬಹುದು ಎಂಬ ಸಿದ್ಧತೆಯಲ್ಲಿದ್ದೇವೆ’ ಎಂದು ಟೋಕಿಯೊ 2020 ಸಿಇಒ ತೊಶಿರೊ ಮುಟೊ ತಿಳಿಸಿದ್ದಾರೆ. -ಪಿಟಿಐ/ಏಜೆನ್ಸೀಸ್
ಐಒಸಿಗೂ ನಷ್ಟ!
ಅಂದಾಜು 90 ಸಾವಿರ ಕೋಟಿ ರೂ. ವೆಚ್ಚದಲ್ಲಿ ಟೋಕಿಯೊ ಒಲಿಂಪಿಕ್ಸ್ ಆತಿಥ್ಯಕ್ಕೆ ಸಜ್ಜಾಗಿರುವ ಜಪಾನ್, ಕೂಟ ರದ್ದಾದರೆ ದೊಡ್ಡ ನಷ್ಟ ಅನುಭವಿಸಲಿದೆ. ಜತೆಗೆ ಐಒಸಿ ಕೂಟ ದೊಡ್ಡ ಆರ್ಥಿಕ ಹೊಡೆತ ಎದುರಿಸಬೇಕಾಗುತ್ತದೆ. ಯಾಕೆಂದರೆ ಐಒಸಿ ಪ್ರತಿ 4 ವರ್ಷಕ್ಕೊಮ್ಮೆ ಬರುವ ಒಲಿಂಪಿಕ್ಸ್ನಿಂದಲೇ 40 ಸಾವಿರ ಕೋಟಿ ಆದಾಯ ಗಳಿಸಲಿದ್ದು, ಇದರಲ್ಲಿ ಶೇ. 73ರಷ್ಟು ಆದಾಯ ಬರೀ ಟಿವಿ ಪ್ರಸಾರ ಹಕ್ಕು ಮಾರಾಟದಿಂದಲೇ ಗಳಿಸುತ್ತದೆ.
ಹಿಂದೆ 3 ಬಾರಿ ಒಲಿಂಪಿಕ್ಸ್ ರದ್ದಾಗಿತ್ತು!
ಈ ಹಿಂದೆ ಮಹಾಯುದ್ಧದ ಸಮಯಗಳಲ್ಲಿ ಒಲಿಂಪಿಕ್ಸ್ ರದ್ದುಗೊಂಡ ದೃಷ್ಟಾಂತಗಳಿವೆ. 1916ರಲ್ಲಿ ಬರ್ಲಿನ್ನಲ್ಲಿ ನಡೆಯಬೇಕಿದ್ದ ಒಲಿಂಪಿಕ್ಸ್ ಒಂದನೇ ಮಹಾಯುದ್ಧದಿಂದಾಗಿ ರದ್ದುಗೊಂಡಿತ್ತು. 1940ರಲ್ಲಿ ಟೋಕಿಯೊದಲ್ಲೇ ನಡೆಯಬೇಕಿದ್ದ ಒಲಿಂಪಿಕ್ಸ್, 2ನೇ ಮಹಾಯುದ್ಧದ ಕಾರಣದಿಂದಾಗಿ ರದ್ದುಗೊಂಡಿತ್ತು. 1944ರಲ್ಲಿ ಲಂಡನ್ನಲ್ಲಿ ನಡೆಯಬೇಕಿದ್ದ ಒಲಿಂಪಿಕ್ಸ್ ಕೂಡ ಇದೇ ಕಾರಣದಿಂದಾಗಿ ರದ್ದಾಗಿತ್ತು. 2016ರಲ್ಲಿ ಝಿಕಾ ವೈರಸ್ ಭೀತಿ ಕಾಡಿದ್ದರೂ, ರಿಯೋ ಒಲಿಂಪಿಕ್ಸ್ ಬ್ರೆಜಿಲ್ನಲ್ಲಿ ನಿಗದಿಯಂತೆಯೇ ಸಾಗಿತ್ತು.
ಶೂಟಿಂಗ್ ವಿಶ್ವಕಪ್ನಿಂದ ಹಿಂದೆ ಸರಿದ 6 ದೇಶಗಳು
ನವದೆಹಲಿ: ಮಾರಕ ಕರೊನಾ ಸೋಂಕಿನ ಸಮಸ್ಯೆಯಿಂದ ಬಳಲುತ್ತಿರುವ ಚೀನಾ ಸಹಿತ 6 ದೇಶಗಳು, ಮುಂದಿನ ತಿಂಗಳು ದೆಹಲಿಯಲ್ಲಿ ನಡೆಯಲಿರುವ ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್ನಿಂದ ಹಿಂದೆ ಸರಿದಿವೆ. ಥೈವಾನ್, ಹಾಂಕಾಂಗ್, ಮಕಾವು, ಉತ್ತರ ಕೊರಿಯಾ ಮತ್ತು ತುರ್ಕ್ವೆುನಿಸ್ತಾನ ಕೂಟದಿಂದ ಹಿಂದೆ ಸರಿಯುತ್ತಿರುವ ಇತರ ದೇಶಗಳು. ಕರೊನಾ ಕಾಟದಿಂದಾಗಿ ಈ ದೇಶಗಳ ಸರ್ಕಾರದ ಸೂಚನೆಯಂತೆ, ಪ್ರಯಾಣವನ್ನು ರದ್ದುಗೊಳಿಸಲಾಗಿದೆ. ಕರೊನಾ ನಿಯಂತ್ರಣಕ್ಕೆ ಬರುವವರೆಗೆ ದೇಶ ತೊರೆಯದಂತೆ ಅಲ್ಲಿನ ಪ್ರಜೆಗಳಿಗೆ ಸೂಚಿಸಲಾಗಿದೆ ಎಂದು ಭಾರತದ ರಾಷ್ಟ್ರೀಯ ರೈಫಲ್ ಸಂಸ್ಥೆ (ಎನ್ಆರ್ಎಐ) ಅಧ್ಯಕ್ಷ ರಣಿಂದರ್ ಸಿಂಗ್ ತಿಳಿಸಿದ್ದಾರೆ. ಇನ್ನು ಪಾಕಿಸ್ತಾನದ ಶೂಟರ್ಗಳು ತವರಿನಲ್ಲೇ ಒಲಿಂಪಿಕ್ಸ್ ಸಿದ್ಧತೆಗೆ ಆದ್ಯತೆ ನೀಡಿರುವುದರಿಂದ ಕೂಟದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ತಿಳಿದ್ದಾರೆ.
ಪರೀಕ್ಷಾರ್ಥ ಕೂಟಕ್ಕೆ ಭಾರತ ಅನುಮಾನ
ಕರೊನಾ ಭೀತಿಯಿಂದಾಗಿ ಭಾರತದ ಶೂಟರ್ಗಳಿಗೆ ಒಲಿಂಪಿಕ್ಸ್ ಸಿದ್ಧತೆಗಾಗಿ ವಿದೇಶಕ್ಕೆ ತೆರಳದಂತೆ ಎನ್ಆರ್ಎಐ ನಿರ್ಬಂಧ ಹೇರಿದೆ. ಅಲ್ಲದೆ ಆರೋಗ್ಯದ ಅಪಾಯದಿಂದಾಗಿ ಮುಂಬರುವ ಟೊಕಿಯೊ ಒಲಿಂಪಿಕ್ಸ್ ಪರೀಕ್ಷಾರ್ಥ ಟೂರ್ನಿಯಿಂದಲೂ ಹಿಂದೆ ಸರಿಯುವ ಬಗ್ಗೆ ಚಿಂತನೆ ನಡೆಸಿದೆ. ಪರೀಕ್ಷಾರ್ಥ ಟೂರ್ನಿ ಏಪ್ರಿಲ್ 16ರಿಂದ 26ರವರೆಗೆ ಟೋಕಿಯೊದಲ್ಲಿ ನಡೆಯಲಿದೆ.