ಕ್ರೀಡೆ

ಭಾರತಕ್ಕೆ ಆಘಾತ ನೀಡಿದ ಜೇಮಿಸನ್

ವೆಲ್ಲಿಂಗ್ಟನ್: ತಮ್ಮ ಪದಾರ್ಪಣೆ ಟೆಸ್ಟ್ ಪಂದ್ಯದಲ್ಲಿ ಸ್ಮರಣೀಯ ದಿನ ಕಂಡ ಏಳಡಿ ಎತ್ತರದ ಯುವ ವೇಗಿ ಕೈಲ್ ಜೇಮಿಸನ್ ಆಕರ್ಷಕ ವೇಗದ ಬೌಲಿಂಗ್ ನಿರ್ವಹಣೆ ಮೂಲಕ ಆತಿಥೇಯ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿಶ್ವ ನಂ.1 ಭಾರತ ತಂಡದ ಹಿನ್ನಡೆಗೆ ಕಾರಣರಾಗಿದ್ದಾರೆ. ಟೆಸ್ಟ್ ಜೀವನದ ಮೊದಲ ಇನಿಂಗ್ಸ್ನಲ್ಲಿಯೇ ವಿಶ್ವದ ಅಗ್ರ ಬ್ಯಾಟ್ಸ್​ಮನ್ ವಿರಾಟ್ ಕೊಹ್ಲಿ, ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಹಾಗೂ ಹನುಮ ವಿಹಾರಿಯ ವಿಕೆಟ್ ಉರುಳಿಸಿದ 25 ವರ್ಷದ ಜೇಮಿಸನ್ ಭಾರತ ತಂಡದ ಮೇಲೆ ಪ್ರಹಾರ ನಡೆಸಿದರು.

ಬೇಸಿನ್ ರಿಸರ್ವ್ ಮೈದಾನದಲ್ಲಿ ಟಾಸ್ ಗೆದ್ದ ಕಿವೀಸ್ ತಂಡದ ನಾಯಕ ಕೇನ್ ವಿಲಿಯಮ್ಸನ್, ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅನುಭವಿಗಳಾದ ಟಿಮ್ ಸೌಥಿ ಹಾಗೂ ಟ್ರೆಂಟ್ ಬೌಲ್ಟ್​ರ ಎಸೆತಗಳನ್ನು ಎಚ್ಚರಿಕೆಯಿಂದ ಆಟವಾಡಿದ್ದ ಭಾರತ ತಂಡಕ್ಕೆ ಕೈಲ್ ಜೇಮಿಸನ್ (38ಕ್ಕೆ 3) ದೊಡ್ಡ ಆಘಾತ ನೀಡಿದರು. ಇದರಿಂದಾಗಿ ಮೊದಲ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ 55 ಓವರ್​ಗಳಲ್ಲಿ 5 ವಿಕೆಟ್​ಗೆ 122 ರನ್ ಬಾರಿಸಿದೆ. 122 ಎಸೆತಗಳನ್ನು ತಾಳ್ಮೆಯಿಂದ ಎದುರಿಸಿರುವ ಮಧ್ಯಮ ಕ್ರಮಾಂಕದ ಅನುಭವಿ ಬ್ಯಾಟ್ಸ್​ಮನ್ ಅಜಿಂಕ್ಯ ರಹಾನೆ (38 ರನ್) ಹಾಗೂ ವಿಕೆಟ್ಕೀಪರ್ ರಿಷಭ್ ಪಂತ್ (10) ಶನಿವಾರಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮಳೆಯಿಂದಾಗಿ ಚಹಾ ವಿರಾಮದ ನಂತರದ ಆಟ ಸಾಧ್ಯವಾಗಲಿಲ್ಲ.

ಕೆಟ್ಟ ಆರಂಭ ಪಡೆದ ತಂಡ: 2018ರ ಅಕ್ಟೋಬರ್​ನಲ್ಲಿ ಕೊನೇ ಬಾರಿಗೆ ಭಾರತ ತಂಡದ ಪರವಾಗಿ ಟೆಸ್ಟ್ ಆಡಿದ್ದ ಪೃಥ್ವಿ ಷಾ ತಮ್ಮ ಸ್ಪೋಟಕ ಬ್ಯಾಟಿಂಗ್​ನ ಕಾರಣಕ್ಕಾಗಿ ವೆಲ್ಲಿಂಗ್ಟನ್ ಟೆಸ್ಟ್​ನಲ್ಲಿ ಆರಂಭಿಕ ಆಟಗಾರನಾಗಿ ಅವಕಾಶ ಪಡೆದಿದ್ದರು. 18 ಎಸೆತಗಳ ಅಲ್ಪ ಸಮಯದ ಇನಿಂಗ್ಸ್ ಆಡಿದ ಪೃಥ್ವಿ ಷಾ ಎರಡು ಬೌಂಡರಿಯೊಂದಿಗೆ 16 ರನ್ ಬಾರಿಸಿ ಟಿಮ್ ಸೌಥಿಯ ಆಕರ್ಷಕ ಔಟ್​ಸ್ವಿಂಗರ್ ಎಸೆತಕ್ಕೆ ಬಲಿಯಾದರು.

ಚೇತರಿಕೆ ನೀಡಿದ ಮಯಾಂಕ್-ಪೂಜಾರ

5ನೇ ಓವರ್​ನಲ್ಲಿಯೇ ಮೊದಲ ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡಕ್ಕೆ ಮಯಾಂಕ್ ಅಗರ್ವಾಲ್ (34ರನ್, 84 ಎಸೆತ, 5 ಬೌಂಡರಿ) ಹಾಗೂ ಚೇತೇಶ್ವರ ಪೂಜಾರ (11ರನ್, 42 ಎಸೆತ, 1 ಬೌಂಡರಿ) ನಂತರದ ಒಂದು ಗಂಟೆಗಳ ಕಾಲ ಟೆಸ್ಟ್ ಮ್ಯಾಚ್​ನಲ್ಲಿ ಆಡುವುದು ಹೇಗೆ ಎನ್ನುವುದನ್ನು ತೋರಿಸಿಕೊಟ್ಟರು. ಕಿವೀಸ್ ಬೌಲರ್​ಗಳು ಪಿಚ್​ನಿಂದ ಸಹಾಯ ಪಡೆಯುತ್ತಿರುವುದನ್ನು ಅಂದಾಜಿಸಿದ ಜೋಡಿ, ತಮ್ಮ ಬಳಿ ಬಂದ ಎಸೆತಗಳನ್ನು ಮಾತ್ರವೇ ಆಡಿ ರನ್ ಬಾರಿಸಿದರು. 10 ಓವರ್​ಗಳ ಬಳಿಕ ಸೌಥಿ-ಬೌಲ್ಟ್ ಜೋಡಿ ನಿರ್ಗಮಿಸಿದಾಗ ಭಾರತ 1 ವಿಕೆಟ್​ಗೆ 31 ರನ್ ಬಾರಿಸಿತ್ತು. ನಂತರ ಬೌಲಿಂಗ್​ಗೆ ಇಳಿದ ಜೇಮಿಸನ್ ತಮ್ಮ ಮೊದಲ ಓವರ್​ನಲ್ಲಿಯೇ ಅಪಾಯಕಾರಿಯಾಗುವ ಸೂಚನೆ ನೀಡಿದ್ದರು. ತಮ್ಮ ಎತ್ತರದ ಸಹಾಯದಿಂದ ಸುಲಭವಾಗಿ ಬೌನ್ಸರ್​ಗಳನ್ನು ಎಸೆಯುತ್ತಿದ್ದ ಜೇಮಿಸನ್​ರ ಒಂದು ಉತ್ತಮ ಎಸೆತಕ್ಕೆ ಪೂಜಾರ ಔಟ್ ಆದಾಗ ಭಾರತ 35 ರನ್ ಬಾರಿಸಿತ್ತು. ಆ ನಂತರ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಶಾರ್ಟ್ ಬಾಲ್ ಎಸೆತವನ್ನು ಹಾಕುವ ಮೂಲಕ ಸ್ವಾಗತಿಸಿದ ಜೇಮಿಸನ್, ವಿಶ್ವದ ಅಗ್ರ ಬ್ಯಾಟ್ಸ್​ಮನ್​ಗೆ ತಮ್ಮ ಯೋಜನೆಯ ಪ್ರಕಾರವೇ ದಾಳಿ ನಡೆಸಿದರು.

ಜೇಮಿಸನ್​ಗೆ ತಮ್ಮ ಆಕರ್ಷಕ ಕವರ್​ಡ್ರೖೆವ್​ಅನ್ನು ಬಾರಿಸುವ ಯತ್ನದಲ್ಲಿ ಎಡವಿದ ಕೊಹ್ಲಿ, ಮೊದಲ ಸ್ಲಿಪ್​ನಲ್ಲಿದ್ದ ರಾಸ್ ಟೇಲರ್​ಗೆ ಕ್ಯಾಚ್ ನೀಡಿದರು. ಇನ್ನೊಂದು ತುದಿಯಲ್ಲಿ ಅಗ್ರ ಕ್ರಮಾಂಕದ ಕುಸಿತವನ್ನು ತಡೆದಿದ್ದ ಮಯಾಂಕ್ ಅಗರ್ವಾಲ್ ಕೂಡ ವೇಗದ ಬೌಲಿಂಗ್​ಅನ್ನು ಅಪಾಯಕಾರಿಯಾಗಿ ಎದುರಿಸುತ್ತಿದ್ದರು. ಮೊದಲ ಅವಧಿಯ ಆಟದಲ್ಲಿ 29 ರನ್ ಬಾರಿಸಿದ್ದಾಗ ಜೀವದಾನ ಪಡೆದುಕೊಂಡಿದ್ದ ಮಯಾಂಕ್ ಆ ಬಳಿಕ ಅಜಿಂಕ್ಯ ರಹಾನೆಯಿಂದ ಸಾಥ್ ಪಡೆದುಕೊಂಡಿದ್ದರು. 2014ರಲ್ಲಿ ಇದೇ ಮೈದಾನದಲ್ಲಿ ಶತಕ ಬಾರಿಸಿದ್ದ ಆಟಗಾರ ಹಾಗೂ ಪ್ರವಾಸದ ಟೆಸ್ಟ್​ಗಳಲ್ಲಿ ಭಾರತದ ಅತ್ಯುತ್ತಮ ಬ್ಯಾಟ್ಸ್​ಮನ್ ಆಗಿರುವ ಅಜಿಂಕ್ಯ ರಹಾನೆ, ಶೀಘ್ರವಾಗಿ ನ್ಯೂಜಿಲೆಂಡ್ ವೇಗದ ಬೌಲಿಂಗ್ ದಾಳಿಯನ್ನು ಅಂದಾಜಿಸಿ ಅದಕ್ಕೆ ತಕ್ಕಂತೆ ಬ್ಯಾಟಿಂಗ್ ನಡೆಸಿದರು. ಭೋಜನ ವಿರಾಮದ ಬಳಿಕ ಬ್ಯಾಟಿಂಗ್ ಸ್ವಲ್ಪ ಮಟ್ಟಿಗೆ ಸುಲಭವಾಗಿದ್ದರಿಂದ ಮಯಾಂಕ್-ರಹಾನೆ ಜೋಡಿ ತಂಡಕ್ಕೆ ಚೇತರಿಕೆ ನೀಡಿತು.

ದಿನದ ಕೊನೆಯಲ್ಲಿ ಪ್ರಮುಖ ವಿಕೆಟ್ ಪತನ

3 ವಿಕೆಟ್​ಗೆ 79 ರನ್​ಗಳ ಉತ್ತಮ ಸ್ಥಿತಿಯಲ್ಲಿ ತಂಡ ಭೋಜನ ವಿರಾಮಕ್ಕೆ ತೆರಳಿತ್ತು. ನಂತರದ ಆಟದಲ್ಲಿ ಸೌಥಿಯ ಸಣ್ಣ ಸ್ಪೆಲ್ ಬಳಿಕ ದಾಳಿಗೆ ಇಳಿದ ಟ್ರೆಂಟ್ ಬೌಲ್ಟ್ ಮಯಾಂಕ್​ರ ವಿಕೆಟ್ ಉರುಳಿಸಿದರು. ನಿಧಾನಗತಿಯ ಪಿಚ್​ನಲ್ಲಿ ಫುಲ್​ಶಾಟ್ ಬಾರಿಸಲು ಯತ್ನಿಸಿದ ಮಯಾಂಕ್, ಲಾಂಗ್ ಲೆಗ್​ನಲ್ಲಿ ಜೇಮಿಸನ್​ಗೆ ಕ್ಯಾಚ್ ನೀಡಿದರು. ಚೇತೇಶ್ವರ ಪೂಜಾರರನ್ನು ಔಟ್ ಮಾಡಲು ಬಳಸಿದಂಥ ಎಸೆತವನ್ನೇ ಮತ್ತೊಮ್ಮೆ ಎಸೆದ ಜೇಮಿಸನ್ ಹನುಮ ವಿಹಾರಿ (7) ವಿಕೆಟ್​ಅನ್ನು ಪಡೆದರು. ಆ ನಂತರ ತಮ್ಮ ಬ್ಯಾಟಿಂಗ್​ನಲ್ಲಿ ಇನ್ನಷ್ಟು ತಾಳ್ಮೆ ತಂದುಕೊಂಡ ರಹಾನೆ, ವಿಕೆಟ್​ನ ಎದುರು ಬಂಡೆಯಂತೆ ನಿಂತು ಆಟವಾಡಿದರು. ಮೊದಲ 17 ರನ್ ಬಾರಿಸಲು 28 ಎಸೆತ ಆಡಿದ್ದ ರಹಾನೆ, ಚಹಾ ವಿರಾಮದ ವೇಳೆಗೆ 122 ಎಸೆತಗಳಲ್ಲಿ 38 ರನ್ ಬಾರಿಸಿದ್ದರು. ಪಂತ್ ಹಾಗೂ ರಹಾನೆ ಜೋಡಿ 6ನೇ ವಿಕೆಟ್​ಗೆ 21 ರನ್ ಜತೆಯಾಟವಾಡಿದೆ.

ರಾಸ್ ಟೇಲರ್ ದಾಖಲೆ

ಟೆಸ್ಟ್, ಏಕದಿನ ಹಾಗೂ ಟಿ20ಯಲ್ಲಿ 100 ಪಂದ್ಯವಾಡಿದ ವಿಶ್ವದ ಮೊದಲ ಆಟಗಾರ ಎನ್ನುವ ಅಪರೂಪದ ದಾಖಲೆಗೆ ರಾಸ್ ಟೇಲರ್ ಪಾತ್ರರಾದರು. ವೆಲ್ಲಿಂಗ್ಟನ್ ಟೆಸ್ಟ್ ಆಡುವ ಮೂಲಕ ಕಿವೀಸ್ ಪರವಾಗಿ 100 ಟೆಸ್ಟ್ ಆಡಿದ ನಾಲ್ಕನೇ ಆಟಗಾರ ಎನಿಸಿಕೊಂಡ ಟೇಲರ್, ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆಯಲ್ಲಿ ನಿಂತುಕೊಳ್ಳುವ ವೇಳೆ ತಮ್ಮ ಇಬ್ಬರೂ ಮಕ್ಕಳನ್ನು ಮೈದಾನಕ್ಕೆ ಕರೆತರುವ ಮೂಲಕ ಗಮನಸೆಳೆದರು.

ವೃದ್ಧಿಮಾನ್ ಸಾಹ ಬದಲು ರಿಷಭ್ ಪಂತ್

ತಂಡದ ಆಯ್ಕೆ ವಿಚಾರವಾಗಿ ಎರಡೂ ತಂಡಗಳು ಕೊನೇ ಹಂತದವರೆಗೂ ಕುತೂಹಲ ಉಳಿಸಿಕೊಂಡಿದ್ದವು. ಅದರಂತೆ ಭಾರತ ತಂಡ ಅನುಭವಿ ವೃದ್ಧಿಮಾನ್ ಸಾಹ ಬದಲು ವಿಕೆಟ್ ಕೀಪರ್ ಆಗಿ ರಿಷಭ್ ಪಂತ್​ಗೆ ಅವಕಾಶ ನೀಡಿದರೆ, ಆಲ್ರೌಂಡರ್ ಜಡೇಜಾಗಿಂತ ಆರ್.ಅಶ್ವಿನ್​ರ ಮೇಲೆ ನಂಬಿಕೆ ಇಟ್ಟು ತಂಡಕ್ಕೆ ಆಯ್ಕೆ ಮಾಡಿತು. ಇನ್ನೊಂದೆಡೆ ಸಂಪೂರ್ಣ ವೇಗದ ಬೌಲಿಂಗ್ ವಿಭಾಗವನ್ನು ಕಿವೀಸ್ ಆಡಿಸಲಿದೆ ಎಂದು ವರದಿಯಾಗಿತ್ತು. ಕೊನೆಗೆ ಏಕೈಕ ಸ್ಪಿನ್ನರ್ ಆಗಿ ಅಜಾಜ್ ಪಟೇಲ್​ರನ್ನು ಕಣಕ್ಕಿಳಿಸುವ ತೀರ್ಮಾನ ಮಾಡಿತು.

ಭಾರತ: 55 ಓವರ್​ಗಳಲ್ಲಿ 5 ವಿಕೆಟ್​ಗೆ 122

ಪೃಥ್ವಿ ಷಾ ಬಿ ಟಿಮ್ ಸೌಥಿ 16

ಮಯಾಂಕ್ ಸಿ ಜೇಮಿಸನ್ ಬಿ ಬೌಲ್ಟ್ 34

ಪೂಜಾರ ಸಿ ವ್ಯಾಟ್ಲಿಂಗ್ ಬಿ ಜೇಮಿಸನ್ 11

ವಿರಾಟ್ ಕೊಹ್ಲಿ ಸಿ ಟೇಲರ್ ಬಿ ಜೇಮಿಸನ್ 2

ಅಜಿಂಕ್ಯ ರಹಾನೆ ಬ್ಯಾಟಿಂಗ್ 38

ಹನುಮ ವಿಹಾರಿ ಸಿ ವ್ಯಾಟ್ಲಿಂಗ್ ಬಿ ಜೇಮಿಸನ್ 7

ರಿಷಭ್ ಪಂತ್ ಬ್ಯಾಟಿಂಗ್ 10

ಇತರ: 4. ವಿಕೆಟ್ ಪತನ: 1-16, 2-35, 3-40, 4-88, 5-101. ಬೌಲಿಂಗ್: ಟಿಮ್ ಸೌಥಿ 14-4-27-1, ಟ್ರೆಂಟ್ ಬೌಲ್ಟ್ 14-2-44-1, ಕಾಲಿನ್ ಡಿ ಗ್ರಾಂಡ್​ಹೊಮ್ 11-5-12-0, ಕೈಲ್ ಜೇಮಿಸನ್ 14-2-38-3, ಅಜಾಜ್ 2-2-0-0.