ಕ್ರೀಡೆ

ಟೆಸ್ಟ್ ಕ್ರಿಕೆಟ್‌ನಲ್ಲಿ 600 ವಿಕೆಟ್ ಸಾಧನೆ ಸನಿಹ ಜೇಮ್ಸ್ ಆಂಡರ್‌ಸನ್

ಸೌಥಾಂಪ್ಟನ್: ಇಂಗ್ಲೆಂಡ್ ತಂಡದ ಅನುಭವಿ ವೇಗಿ ಜೇಮ್ಸ್ ಆಂಡರ್‌ಸನ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 600 ವಿಕೆಟ್ ಕಬಳಿಸಿದ 4ನೇ ಬೌಲರ್ ಮತ್ತು ಮೊದಲ ವೇಗಿ ಎನಿಸುವ ಸನಿಹದಲ್ಲಿದ್ದಾರೆ. ಪಾಕಿಸ್ತಾನ ವಿರುದ್ಧದ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್ ಕಬಳಿಸುವ ಮೂಲಕ ಅವರು ಐತಿಹಾಸಿಕ ಸಾಧನೆಯತ್ತ ಮುನ್ನಡೆದಿದ್ದಾರೆ.

38 ವರ್ಷದ ಜೇಮ್ಸ್ ಆಂಡರ್‌ಸನ್ ರೋಸ್‌ಬೌಲ್‌ನಲ್ಲಿ ನಡೆಯುತ್ತಿರುವ ಪಂದ್ಯದ 3ನೇ ದಿನದಾಟವಾದ ಭಾನುವಾರ ಪಾಕ್ ಬ್ಯಾಟ್ಸ್‌ಮನ್ ಅಸದ್ ಶಫಿಕ್ (5) ವಿಕೆಟ್ ಕಬಳಿಸುವ ಮೂಲಕ 597ನೇ ವಿಕೆಟ್ ಪಡೆದ ಸಾಧನೆ ಮಾಡಿದರು. ಈ ಮುನ್ನ ಪಂದ್ಯದ 3ನೇ ದಿನದಂತ್ಯದಲ್ಲಿ ಅವರು 3 ವಿಕೆಟ್ ಕಬಳಿಸಿ ಮಿಂಚಿದ್ದರು.

ಈ ಮುನ್ನ ಮೂವರು ಸ್ಪಿನ್ ದಿಗ್ಗಜರಾದ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (800), ಆಸ್ಟ್ರೇಲಿಯಾದ ಶೇನ್ ವಾರ್ನ್ (708) ಮತ್ತು ಭಾರತದ ಅನಿಲ್ ಕುಂಬ್ಳೆ (619) ಟೆಸ್ಟ್ ಕ್ರಿಕೆಟ್‌ನಲ್ಲಿ 600ಕ್ಕಿಂತ ಹೆಚ್ಚು ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ವೃತ್ತಿಜೀವನದ 156ನೇ ಟೆಸ್ಟ್ ಪಂದ್ಯ ಆಡುತ್ತಿರುವ ಆಂಡರ್‌ಸನ್ ಈಗಾಗಲೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ವೇಗದ ಬೌಲರ್ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.

ಆಂಡರ್‌ಸನ್ ದಾಳಿಗೆ ನಲುಗಿದ ಪಾಕಿಸ್ತಾನ ತಂಡ 3ನೇ ದಿನದಾರಂಭದಲ್ಲಿ 30 ರನ್‌ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ ಜತೆಗೂಡಿದ ನಾಯಕ ಅಜರ್ ಅಲಿ ಮತ್ತು ವಾದ್ ಅಲಮ್ (25) 5ನೇ ವಿಕೆಟ್‌ಗೆ 45 ರನ್ ಸೇರಿಸಿ ಆಸರೆಯಾದರು. ಭೋಜನ ವಿರಾಮದ ಬಳಿಕ ಸ್ಪಿನ್ನರ್ ಡೊಮಿನಿಕ್ ಬೆಸ್ ಈ ಜೋಡಿಯನ್ನು ಬೇರ್ಪಡಿಸಿದರು. ಬಳಿಕ ನಾಯಕ ಅಜರ್ ಅಲಿಗೆ (82*) ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಮೊಹಮದ್ ರಿಜ್ವಾನ್ (22*) ಉತ್ತಮ ಸಾಥ್ ನೀಡಿದ್ದು, ಇವರಿಬ್ಬರು ಮುರಿಯದ 6ನೇ ವಿಕೆಟ್‌ಗೆ 83 ರನ್ ಸೇರಿಸಿದ್ದಾರೆ. ಚಹಾ ವಿರಾಮದ ವೇಳೆಗೆ 5 ವಿಕೆಟ್​ಗೆ 158 ರನ್​ ಗಳಿಸಿರುವ ಪಾಕ್ ಫಾಲೋಆನ್ ತಪ್ಪಿಸಲು ಹೋರಾಡುತ್ತಿದ್ದು, ಇನ್ನೂ 425 ರನ್ ಹಿನ್ನಡೆಯಲ್ಲಿದೆ.

ಮಳೆಯಿಂದಾಗಿ ಭೋಜನ ವಿರಾಮಕ್ಕೆ ಮುನ್ನ ಕೇವಲ 11 ಓವರ್ ಆಟ ನಡೆಯಿತು. ಸರಣಿಯಲ್ಲಿ 0-1 ಹಿನ್ನಡೆಯಲ್ಲಿರುವ ಪಾಕಿಸ್ತಾನ ತಂಡ ಸರಣಿ ಸೋಲು ತಪ್ಪಿಸಿಕೊಳ್ಳಲು ಈ ಪಂದ್ಯವನ್ನು ಜಯಿಸಲೇಬೇಕಾಗಿದೆ.

ಇಂಗ್ಲೆಂಡ್: 8 ವಿಕೆಟ್‌ಗೆ 583 ಡಿಕ್ಲೇರ್ (ಜಾಕ್ ಕ್ರೌಲಿ 267, ಬಟ್ಲರ್ 152, ವಾದ್ 46ಕ್ಕೆ 2), ಪಾಕಿಸ್ತಾನ: 60 ಓವರ್‌ಗಳಲ್ಲಿ 5 ವಿಕೆಟ್‌ಗೆ 158 (ಮಸೂದ್ 4, ಅಬಿದ್ ಅಲಿ 1, ಬಾಬರ್ ಅಜಮ್ 11, ಅಸದ್ ಶಫಿಕ್ 5, ಅಜರ್ ಅಲಿ 82*, ಅಲಮ್ 21, ರಿಜ್ವಾನ್ 22*, ಆಂಡರ್‌ಸನ್ 42ಕ್ಕೆ 4, ಬೆಸ್ 33ಕ್ಕೆ 1).