ಕ್ರೀಡೆ

ಕನ್ನಡಿಗ ಅನಿಲ್ ಕುಂಬ್ಳೆ ದಾಖಲೆ ಹಿಂದಿಕ್ಕಿದ ಜೇಮ್ಸ್ ಆಂಡರ್‌ಸನ್

ನಾಟಿಂಗ್ ಹ್ಯಾಂ: ಇಂಗ್ಲೆಂಡ್ ತಂಡದ ಅನುಭವಿ ವೇಗಿ ಜೇಮ್ಸ್ ಆಂಡರ್‌ಸನ್, ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸಿದ ಬೌಲರ್‌ಗಳ ಪೈಕಿ ಕನ್ನಡಿಗ ಅನಿಲ್ ಕುಂಬ್ಳೆ (132 ಪಂದ್ಯ, 619 ವಿಕೆಟ್) ಅವರನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದರು. ಆಂಡರ್‌ಸನ್ ಇದುವರೆಗೂ ಆಡಿರುವ 163 ಪಂದ್ಯಗಳಿಂದ 621 ವಿಕೆಟ್ ಕಬಳಿಸಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (800 ವಿಕೆಟ್) ಹಾಗೂ ಆಸ್ಟ್ರೇಲಿಯಾದ ಶೇನ್ ವಾರ್ನೆ (708 ವಿಕೆಟ್) ಮೊದಲ ಎರಡು ಸ್ಥಾನದಲ್ಲಿದ್ದಾರೆ. ಆಂಡರ್‌ಸನ್ 2003ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಕನ್ನಡಿಗ ಕೆಎಲ್ ರಾಹುಲ್ ಅವರ ವಿಕೆಟ್ ಕಬಳಿಸುವ ಮೂಲಕವೇ ಈ ಸಾಧನೆ ಮಾಡಿದರು.

ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನದಾಟಕ್ಕೂ ಮಳೆ ಕಾಡಿತು. ಆರಂಭಿಕ 11 ಎಸೆತಗಳ ಬಳಿಕ ಮಳೆ ಅಡ್ಡಿಯಾಯಿತು. ಬಳಿಕ 4 ವಿಕೆಟ್‌ಗೆ 132 ರನ್‌ಗಳಿಂದ ದಿನದಾಟ ಮುಂದುವರಿಸಿದ ಭಾರತ ತಂಡ, ಕನ್ನಡಿಗ ಕೆಎಲ್ ರಾಹುಲ್ (84ರನ್, 214 ಎಸೆತ, 12 ಬೌಂಡರಿ) ಹಾಗೂ ಆಲ್ರೌಂಡರ್ ರವೀಂದ್ರ ಜಡೇಜಾ (56ರನ್, 86 ಎಸೆತ, 8 ಬೌಂಡರಿ, 1 ಸಿಕ್ಸರ್) ಜೋಡಿ ಉತ್ತಮ ಜತೆಯಾಟದ ನೆರವಿನಿಂದ 278 ರನ್‌ಗಳಿಗೆ ಸರ್ವಪತನ ಕಂಡಿತು. ಇದರಿಂದ 95 ರನ್ ಮುನ್ನಡೆ ಸಾಧಿಸಿತು. ಇಂಗ್ಲೆಂಡ್ ಮೊದಲ ಇನಿಂಗ್ಸ್ 183 ರನ್ ಪೇರಿಸಿತ್ತು.